ADVERTISEMENT

Bengaluru Metro | ನಮ್ಮ ಮೆಟ್ರೊ ಮೂರನೇ ಹಂತ: ಮೊದಲ ಟೆಂಡರ್‌ ಆಹ್ವಾನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 0:24 IST
Last Updated 15 ಜನವರಿ 2026, 0:24 IST
<div class="paragraphs"><p>‘ನಮ್ಮ&nbsp;ಮೆಟ್ರೊ’</p></div>

‘ನಮ್ಮ ಮೆಟ್ರೊ’

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಜೆ.ಪಿ.ನಗರ 4ನೇ ಹಂತ– ಕೆಂ‍ಪಾಪುರ ಹಾಗೂ ಹೊಸಹಳ್ಳಿ–ಕಡಬಗೆರೆ ಕಾರಿಡಾರ್‌ಗಳನ್ನು ಹೊಂದಿರುವ ನಮ್ಮ ಮೆಟ್ರೊ ಮೂರನೇ ಹಂತದ ಕಾಮಗಾರಿಗಳಿಗೆ ಮಂಗಳವಾರ ಮೊದಲ ಟೆಂಡರ್‌ ಆಹ್ವಾನಿಸಲಾಗಿದೆ.

ADVERTISEMENT

ಜೆ.ಪಿ ನಗರ 4ನೇ ಹಂತದಿಂದ ಕೆಂಪಾಪುರದವರೆಗೆ (ಕಿತ್ತಳೆ) ಹೊರ ವರ್ತುಲ ಮಾರ್ಗವು 32.3 ಕಿ.ಮೀ. ಹಾಗೂ ಹೊಸಹಳ್ಳಿಯಿಂದ ಕಡಬಗೆರೆಗೆ (ಬೆಳ್ಳಿ) ಮಾಗಡಿ ರಸ್ತೆಯಲ್ಲಿ ನಿರ್ಮಾಣಗೊಳ್ಳುವ 12.15 ಕಿ.ಮೀ ಮಾರ್ಗ ಸೇರಿ ಒಟ್ಟು 44.45 ಕಿ.ಮೀ. ಉದ್ದವಿದೆ. ಇದು ಎಂಟು ಪ್ಯಾಕೇಜ್‌ಗಳಲ್ಲಿ ನಿರ್ಮಾಣಗೊಳ್ಳಲಿದ್ದು, ಒಂದನೇ ಕಾರಿಡಾರ್‌ನಲ್ಲಿ ಆರು ಹಾಗೂ ಎರಡನೇ ಕಾರಿಡಾರ್‌ನಲ್ಲಿ 2 ಪ್ಯಾಕೇಜ್‌ಗಳು ಇರಲಿವೆ. ಒಂದನೇ ಕಾರಿಡಾರ್‌ನ ಮೊದಲ ಮೂರು ಪ್ಯಾಕೇಜ್‌ಗೆ ಈಗ ಇ– ಟೆಂಡರ್‌ ಕರೆಯಲಾಗಿದೆ. 18.581 ಕಿ.ಮೀ. ಉದ್ದದ ಮಾರ್ಗಗಳ ನಿರ್ಮಾಣದ ಈ ಪ್ಯಾಕೇಜ್‌ಗಳಿಗೆ ₹4,187.41 ಕೋಟಿ ಅಂದಾಜು ವೆಚ್ಚ ನಿಗದಿಪಡಿಸಲಾಗಿದೆ. 

ಇದರಲ್ಲಿ ಮೆಟ್ರೊ ವಯಾಡಕ್ಟ್‌ಗಳು, ಡಬಲ್‌ ಡೆಕರ್‌ (ರೈಲು-ಕಮ್-ರೋಡ್) ಮತ್ತು ನಿಲ್ದಾಣಗಳ ನಿರ್ಮಾಣ ಸೇರಿವೆ. ಬಿಡ್‌ಗಳನ್ನು ಸಲ್ಲಿಸಲು ಫೆಬ್ರುವರಿ 25 ಕೊನೆಯ ದಿನವಾಗಿದೆ. ಅದಾಗಿ ಎರಡು ದಿನಗಳ ಬಳಿಕ ಟೆಂಡರ್‌ ತೆರೆಯಲಾಗುತ್ತದೆ. ಬಿಡ್‌ಗಳ ಪರಿಶೀಲನೆ ನಡೆದು ಅಂತಿಮಗೊಳಿಸಿದ ಬಳಿಕ ಈ ವರ್ಷದ ಜೂನ್‌ನಲ್ಲಿ ಕಾಮಗಾರಿ ಆರಂಭಿಸಬೇಕು. 2031ರ ಮೇ ಒಳಗೆ ಪೂರ್ಣಗೊಳಿಸಬೇಕು ಎಂಬ ಗುರಿಯನ್ನು ಬಿಎಂಆರ್‌ಸಿಎಲ್‌ ಇಟ್ಟುಕೊಂಡಿದೆ.

ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಯೊಂದಿಗೆ (ಜೆಐಸಿಎ) ಸಾಲ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಉಳಿದ ಐದು ಪ್ಯಾಕೇಜ್‌ಗಳಿಗೆ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಟೆಂಡರ್ ಕರೆಯಲಾಗುವುದು ಎಂದು ಬಿಎಂಆರ್‌ಸಿಎಲ್‌  ಅಧಿಕಾರಿ ತಿಳಿಸಿದ್ದಾರೆ.

ಅತಿ ಉದ್ದದ ಡಬಲ್‌ ಡೆಕರ್‌:

ನಮ್ಮ ಮೆಟ್ರೊ ಹಂತ ಮೂರರ ಕಾಮಗಾರಿಗಳು ಕೊನೆಗೊಂಡಾಗ ಅತಿ ಉದ್ದದ ಡಬಲ್‌ ಡೆಕರ್‌ ಹೊಂದಿರುವ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಒಂದನೇ ಕಾರಿಡಾರ್‌ನಲ್ಲಿ ಡೆಲ್ಮಿಯಾ ವೃತ್ತದಿಂದ ಹೆಬ್ಬಾಳದವರೆಗೆ 28.486 ಕಿ.ಮೀ ಡಬಲ್ ಡೆಕರ್ ಇರಲಿದೆ. ಇದು ನಗರದ ಅತಿ ಉದ್ದದ ಫ್ಲೈಓವರ್ ಆಗಿರಲಿದೆ. ಕಾರಿಡಾರ್ 2ರಲ್ಲಿ ಕೆಎಚ್‌ಬಿ ಕಾಲೊನಿಯಿಂದ ಕಡಬಗೆರೆಗೆ 8.635 ಕಿ.ಮೀ ಡಬಲ್ ಡೆಕರ್ ನಿರ್ಮಾಣಗೊಳ್ಳಲಿದೆ. 

ಡಬಲ್ ಡೆಕರ್ ಐದು ಸ್ಥಳಗಳಲ್ಲಿ ಪ್ರವೇಶ/ನಿರ್ಗಮನ ರ‍್ಯಾಂಪ್‌ಗಳನ್ನು ಮತ್ತು ಒಂಬತ್ತು ಸ್ಥಳಗಳಲ್ಲಿ ಲೂಪ್‌ಗಳನ್ನು ಹೊಂದಿರುತ್ತದೆ. ಹೊಸಕೆರೆಹಳ್ಳಿ, ಮೈಸೂರು ರಸ್ತೆ, ನಾಗರಬಾವಿ ಮತ್ತು ಸುಮನಹಳ್ಳಿಯಲ್ಲಿ ಈಗಿರುವ ಫ್ಲೈಓವರ್‌ಗಳ ಮೇಲೆ ಅಥವಾ ಪಕ್ಕದಲ್ಲಿ ಡಬಲ್‌ ಡೆಕರ್‌ ಇರಲಿದೆ. ಡೆಲ್ಮಿಯಾ ಜಂಕ್ಷನ್‌ನಲ್ಲಿ (ಡಾಲರ್ಸ್‌ ಕಾಲೊನಿ) ಈಗಿರುವ ಫ್ಲೈಓವರ್‌ ಕೆಡವಲಾಗುತ್ತದೆ.

ಇಂಟರ್‌ಚೇಂಜ್‌ ನಿಲ್ದಾಣಗಳು
ಮೂರನೇ ಹಂತದಲ್ಲಿ ನಿರ್ಮಾಣವಾಗಲಿರುವ ಎರಡು ಕಾರಿಡಾರ್‌ಗಳಲ್ಲಿ ಏಳು ಅಂತರ್‌ಬದಲಾವಣೆ (ಇಂಟರ್‌ಚೇಂಜ್‌) ನಿಲ್ದಾಣಗಳು ಇರಲಿವೆ. ಜೆ.ಪಿ. ನಗರ 4ನೇ ಹಂತದಲ್ಲಿ ಗುಲಾಬಿ ಮಾರ್ಗವನ್ನು ಜೆ.ಪಿ. ನಗರದಲ್ಲಿ ಹಸಿರು ಮಾರ್ಗವನ್ನು ಮೈಸೂರು ರಸ್ತೆಯಲ್ಲಿ ನೇರಳೆ ಮಾರ್ಗವನ್ನು ಸುಮನಹಳ್ಳಿ ಕ್ರಾಸ್‌ನಲ್ಲಿ ಮೂರನೇ ಹಂತದ ಎರಡೂ ಕಾರಿಡಾರ್‌ಗಳು ಗೊರಗುಂಟೆಪಾಳ್ಯದಲ್ಲಿ ಹಸಿರು ಮಾರ್ಗ ಕೆಂಪಾಪುರದಲ್ಲಿ ನೀಲಿ ಮಾರ್ಗ ಹಾಗೂ ಹೊಸಹಳ್ಳಿಯಲ್ಲಿ ನೇರಳೆ ಮಾರ್ಗವನ್ನು ಸಂಪರ್ಕಿಸಲಿದೆ.

3ನೇ ಹಂತದ ಟೆಂಡರ್‌ಗಳು ಪ್ಯಾಕೇಜ್

1 6.521 ಕಿ.ಮೀ. ಉದ್ದ. ಜೆ.ಪಿ. ನಗರ 4ನೇ ಹಂತ (ಕಾಮಾಕ್ಯ ಜಂಕ್ಷನ್‌ ಹೊರತುಪಡಿಸಿ).  5.695-ಕಿ.ಮೀ ಡಬಲ್ ಡೆಕರ್‌ 826 ಮೀ ಸಾಮಾನ್ಯ ವಯಾಡಕ್ಟ್ ಹೊಂದಿದೆ. ಜೆ.ಪಿ. ನಗರ 5ನೇ ಹಂತ ಜೆ.ಪಿ. ನಗರ ಕದಿರೇನಹಳ್ಳಿ ಮತ್ತು ಕಾಮಾಕ್ಯ ಜಂಕ್ಷನ್ ನಿಲ್ದಾಣಗಳಿದ್ದು ₹1375.66 ಕೋಟಿ ವೆಚ್ಚ ಆಗಲಿದೆ. ಡಾಲರ್ಸ್ ಕಾಲೊನಿ (ಡೆಲ್ಮಿಯಾ ಜಂಕ್ಷನ್) ಫ್ಲೈಓವರ್ ಕೆಡವುವುದೂ ಇದರಲ್ಲಿ ಸೇರಿದೆ.  ಪ್ಯಾಕೇಜ್ 2  ಹೊಸಕೆರೆಹಳ್ಳಿಯಿಂದ ನಾಗರಬಾವಿ ವೃತ್ತದವರೆಗೆ 5.408 ಕಿ.ಮೀ.  ಉದ್ದ. ಇದರಲ್ಲಿ ಹೊಸಕೆರೆಹಳ್ಳಿ ದ್ವಾರಕಾ ನಗರ ಮೈಸೂರು ರಸ್ತೆ ಮತ್ತು ನಾಗರಬಾವಿ ನಿಲ್ದಾಣಗಳಿದ್ದು ₹1396.1 ಕೋಟಿ ಅಂದಾಜು ವೆಚ್ಚ ಇರಲಿದೆ. ಪ್ಯಾಕೇಜ್ 3‌ ವಿನಾಯಕ ಲೇಔಟ್‌ನಿಂದ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ (5.012 ಕಿ.ಮೀ.) ಸುಂಕದಕಟ್ಟೆ ನಿಲ್ದಾಣದಿಂದ ಸುಂಕದಕಟ್ಟೆ ಡಿಪೊ (1.64 ಕಿಮೀ) ಸೇರಿ 6.652 ಕಿ.ಮೀ. ಉದ್ದವಿದೆ. ವಿನಾಯಕ ಲೇಔಟ್ ಪಾಪರೆಡ್ಡಿ ಪಾಳ್ಯ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಮತ್ತು ಸುಂಕದಕಟ್ಟೆ ನಿಲ್ದಾಣಗಳಿದ್ದು ಅಂದಾಜು ವೆಚ್ಚ ₹ 1415.65 ಕೋಟಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.