ADVERTISEMENT

Namma Metro | ತುಮಕೂರಿಗೆ ಮೆಟ್ರೊ: ಗರಿಗೆದರಿದ ಕನಸು

ಶಿರಾಗೇಟ್‌ವರೆಗೆ ವಿಸ್ತರಣೆಗೆ ಚಿಂತನೆ: ರಾಜ್ಯ ಸರ್ಕಾರಕ್ಕೆ ಕಾರ್ಯಸಾಧ್ಯತಾ ವರದಿ ಸಲ್ಲಿಸಿದ ಬಿಎಂಆರ್‌ಸಿಎಲ್‌

ಬಾಲಕೃಷ್ಣ ಪಿ.ಎಚ್‌
Published 18 ಮೇ 2025, 0:30 IST
Last Updated 18 ಮೇ 2025, 0:30 IST
ಮೆಟ್ರೊ ರೈಲು
ಮೆಟ್ರೊ ರೈಲು   

ಬೆಂಗಳೂರು: ತುಮಕೂರಿಗೆ ‘ನಮ್ಮ ಮೆಟ್ರೊ’ ವಿಸ್ತರಿಸುವ ಬಗ್ಗೆ ಕಾರ್ಯಸಾಧ್ಯತಾ ವರದಿಯನ್ನು ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ಸಲ್ಲಿಸಿದೆ. ಇದರಿಂದ ಬೆಂಗಳೂರಿನಾಚೆಗೆ ಮೆಟ್ರೊ ವಿಸ್ತರಿಸುವ ಕನಸು ಗರಿಗೆದರಿದೆ. ಆದರೆ, ನಗರದ ಸಂಸದರ ಸಹಿತ ಅನೇಕರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

‘ನಮ್ಮ ಮೆಟ್ರೊ’ ಹಸಿರು ಮಾರ್ಗದಲ್ಲಿ ಮಾದಾವರವರೆಗೆ ಸದ್ಯ ಮೆಟ್ರೊ ಸಂಚರಿಸುತ್ತಿದೆ. ಅಲ್ಲಿಂದ ತುಮಕೂರಿನ ಶಿರಾ ಗೇಟ್‌ವರೆಗೆ ವಿಸ್ತರಿಸಲು ಕಾರ್ಯಸಾಧ್ಯತಾ ವರದಿಯನ್ನು ನೀಡುವಂತೆ ಬಿಎಂಆರ್‌ಸಿಎಲ್‌ಗೆ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಟೆಂಡರ್‌ ಪಡೆದ ಹೈದರಾಬಾದ್‌ನ ಆರ್‌.ವಿ. ಕನ್ಸಲ್ಟೆಂಟ್‌ ವರದಿ ತಯಾರಿಸಿ ಬಿಎಂಆರ್‌ಸಿಎಲ್‌ಗೆ ನೀಡಿತ್ತು. ಬಿಎಂಆರ್‌ಸಿಎಲ್‌ ಸರ್ಕಾರಕ್ಕೆ ಸಲ್ಲಿಸಿದೆ.

ವರದಿ ಪ್ರಕಾರ 59.6 ಕಿಲೋ ಮೀಟರ್‌ ಉದ್ದದ ಈ ಮಾರ್ಗದಲ್ಲಿ 25 ನಿಲ್ದಾಣಗಳು ಇರಲಿವೆ. 2 ಗಂಟೆಯ ಪ್ರಯಾಣದ ಹಾದಿ ಎಂದು ಸಮಯ ನಿಗದಿಪಡಿಸಲಾಗಿದೆ. ಇದು ಅನುಮೋದನೆಗೊಂಡರೆ ಕರ್ನಾಟಕದ ಮೊದಲ ಅಂತರ-ನಗರ ಮೆಟ್ರೊ ಯೋಜನೆಯಾಗಲಿದೆ.

ADVERTISEMENT

ನೆಲಮಂಗಲ ತಾಲ್ಲೂಕಿನ ಹಲವು ಪಟ್ಟಣ ಪ್ರದೇಶಗಳ ಮೂಲಕ ಹಾದುಹೋಗಿ ದಾಬಸ್‌ಪೇಟೆ ತಲುಪಲಿದೆ. ಮುಂದೆ ತುಮಕೂರು ತಾಲ್ಲೂಕು ವ್ಯಾಪ್ತಿಯ ಪಟ್ಟಣಗಳು ಮತ್ತು ಹೊರವಲಯಗಳ ಮೂಲಕ ಸಾಗಿ ನಾಗಣ್ಣ ಪಾಳ್ಯದಲ್ಲಿ (ಶಿರಾ ಗೇಟ್‌) ಕೊನೆಗೊಳ್ಳಲಿದೆ. ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೂ ಹತ್ತಿರವಾಗುವಂತೆ ನಿಲ್ದಾಣ ನಿರ್ಮಿಸುವ ಗುರಿಯನ್ನು ಇಟ್ಟುಕೊಂಡಿದೆ. 

ಕೈಗಾರಿಕಾ ಉಪನಗರವಾಗಿ ತುಮಕೂರು ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವುದರಿಂದ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ತುಮಕೂರಿಗೆ ಮೆಟ್ರೊ ಸೇವೆ ವಿಸ್ತರಿಸಬೇಕೆಂದು ಉದ್ಯಮಿಗಳು, ರಾಜಕಾರಣಿಗಳು ಮಾತ್ರವಲ್ಲದೇ ಸರ್ಕಾರದ ಸಚಿವರಿಂದಲೇ ಸರ್ಕಾರಕ್ಕೆ ಬೇಡಿಕೆಗಳು ಬಂದಿದ್ದವು. 

ಎರಡು ಮಾದರಿ: ಸಾರ್ವಜನಿಕ-ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಬಹುದು. ಇದಕ್ಕೆ ಅಂದಾಜು ₹ 20,650 ಕೋಟಿ ಬೇಕಾಗಬಹುದು ಎಂದು ವರದಿ ಉಲ್ಲೇಖಿಸಿದೆ.

ಇಲ್ಲವೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿಧಿ ಮತ್ತು ಬಾಹ್ಯ ನಿಧಿ (ಸಾಲ) ಬಳಸಿ ಯೋಜನೆ ಅನುಷ್ಠಾನ ಮಾಡಬಹುದು ಆಗ ₹ 18,670 ಕೋಟಿ ಬೇಕಾಗಬಹುದು ಎಂದು ಎರಡು ಸಾಧ್ಯತೆಗಳನ್ನು ವರದಿಯಲ್ಲಿ ನಮೂದಿಸಲಾಗಿದೆ.

ನೆಲಮಂಗಲ ಮತ್ತು ತುಮಕೂರಿನಲ್ಲಿ ತಲಾ ಒಂದು ನಮ್ಮ ಮೆಟ್ರೊ ಡಿಪೊಗಳನ್ನು ಪ್ರಸ್ತಾವಿಸಲಾಗಿದೆ. ಈ ಯೋಜನೆ ಜಾರಿಗೆ ಬಂದರೆ ಮೆಟ್ರೊ ಹಾದುಹೋಗುವ ಪ್ರದೇಶದಲ್ಲಿ ರಿಯಲ್‌ ಎಸ್ಟೇಟ್‌ ಅಭಿವೃದ್ಧಿಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

25 ನಿಲ್ದಾಣಗಳು

  • (ಮಾದಾವರದಿಂದ)

  • ಮಾಕಳಿ

  • ದಾಸನಪುರ

  • ನೆಲಮಂಗಲ

  • ನೆಲಮಂಗಲ ವೀವರ್ ಕಾಲೊನಿ

  • ನೆಲಮಂಗಲ ಬಸ್‌ ನಿಲ್ದಾಣ

  • ನೆಲಮಂಗಲ ವಿಶ್ವೇಶ್ವರಪುರ

  • ನೆಲಮಂಗಲ ಟೋಲ್‌ಗೇಟ್

  • ಬೂದಿಹಾಳ್

  • ತಿಪ್ಪಗೊಂಡನಹಳ್ಳಿ

  • ಟಿ. ಬೇಗೂರು

  • ಕುಲವನಹಳ್ಳಿ

  • ಬಿಲ್ಲನಕೋಟೆ

  • ಸೋಂಪುರ ಕೈಗಾರಿಕಾ ಪ್ರದೇಶ

  • ದಾಬಸ್‌ಪೇಟೆ

  • ಚಿಕ್ಕಹಳ್ಳಿ

  • ಹಿರೇಹಳ್ಳಿ ಕೈಗಾರಿಕಾ ಪ್ರದೇಶ

  • ಪಂಡಿತನಹಳ್ಳಿ

  • ಕ್ಯಾತ್ಸಂದ್ರ ಬೈಪಾಸ್

  • ಕ್ಯಾತ್ಸಂದ್ರ

  • ಎಸ್‌ಐಟಿ ಕಾಲೇಜು (ಸಿದ್ಧಾರ್ಥ ಕಾಲೇಜು)

  • ತುಮಕೂರು ವಿಶ್ವವಿದ್ಯಾಲಯ

  • ಸಿದ್ದಗಂಗಾ ವೈದ್ಯಕೀಯ ಕಾಲೇಜು

  • ತುಮಕೂರು ಬಸ್ ನಿಲ್ದಾಣ

  • ಟುಡಾ ಲೇಔಟ್

  • ನಾಗಣ್ಣ ಪಾಳ್ಯ (ಶಿರಾ ಗೇಟ್‌)

ಬೆಂಗಳೂರು–ತುಮಕೂರು ನಮ್ಮ ಮೆಟ್ರೊ

ಅಂಕಿ ಅಂಶ

2.8ಲಕ್ಷ - ನಿತ್ಯ ಸಂಚರಿಸಬಹುದಾದ ಪ್ರಯಾಣಿಕರ ಅಂದಾಜು ಪ್ರಮಾಣ

470 ಎಕರೆ - ಖಾಸಗಿ ಭೂಮಿ ಸೇರಿದಂತೆ ಯೋಜನೆಗೆ ಬೇಕಾದ ಒಟ್ಟು ಜಮೀನು

2030 -ಅನುಮತಿ ಸಿಕ್ಕರೆ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ

2035 - ಕಾಮಗಾರಿ ಪೂರ್ಣಗೊಳ್ಳಬಹುದಾದ ವರ್ಷ

ಸಂಸದರಾದ ಮೋಹನ್, ತೇಜಸ್ವಿ ಸೂರ್ಯ ವಿರೋಧ

ಪ್ರಸ್ತಾವಿತ ಬೆಂಗಳೂರು–ತುಮಕೂರು ಮೆಟ್ರೊ ಯೋಜನೆಗೆ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್‌, ಬೆಂಗಳೂದು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿರೋಧ ವ್ಯಕ್ತಪಡಿಸಿದ್ದಾರೆ.

‘ಬೆಂಗಳೂರು ಉಪನಗರ ರೈಲು ಯೋಜನೆಯನ್ನು (ಬಿಎಸ್‌ಆರ್‌ಪಿ) ತುಮಕೂರಿಗೆ ವಿಸ್ತರಿಸಿದರೆ ಪ್ರತಿ ಕಿಲೋಮೀಟರ್‌ ಕಾಮಗಾರಿಗೆ ₹ 100 ಕೋಟಿಯಿಂದ ₹ 150 ಕೋಟಿ ವೆಚ್ಚವಾಗಲಿದೆ. ಮೆಟ್ರೊ ಕಾಮಗಾರಿಗೆ ಪ್ರತಿ ಕಿಲೋಮೀಟರ್‌ಗೆ ₹ 350 ಕೋಟಿ ಬೇಕಾಗುತ್ತದೆ. ರಿಯಲ್‌ ಎಸ್ಟೇಟ್‌ಗೆ ಲಾಭ ಮಾಡಿಕೊಡಲು ರಾಜ್ಯ ಸರ್ಕಾರ ಹೊರಟಿದೆ‘ ಎಂದು ಸಂಸದ ಪಿ.ಸಿ. ಮೋಹನ್‌ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ತುಮಕೂರು, ಹೊಸೂರು, ಹೊಸಕೋಟೆ ಅಥವಾ ಬಿಡದಿಗೆ ಮೆಟ್ರೊ ಸಂಪರ್ಕಿಸುವ ಯೋಜನೆಗಳು ಇಲ್ಲ. ಇದು ರಿಯಲ್‌ ಎಸ್ಟೇಟ್‌ನ ಬೆಲೆಗಳನ್ನು ಹೆಚ್ಚಿಸಲು ಮಾತ್ರ ಇದೆ. ಉಪನಗರ ರೈಲು ಯೋಜನೆಯನ್ನು ಹಳಿ ತಪ್ಪಿಸುವುದನ್ನು ಬಿಟ್ಟು ರಾಜ್ಯ ಸರ್ಕಾರ ಬೇರೇನನ್ನೂ ಮಾಡುವುದಿಲ್ಲ ಎಂದು ಟೀಕಿಸಿದ್ದಾರೆ.

‘ತುಮಕೂರಿಗೆ ಮೆಟ್ರೊ ವಿಸ್ತರಣೆ ಮಾಡುವ ಕರ್ನಾಟಕ ಸರ್ಕಾರದ ನಿರ್ಧಾರ ಮೂರ್ಖತನದಿಂದ (ಸ್ಟುಪಿಡ್) ಕೂಡಿದೆ. ಅದರ ಬದಲಾಗಿ ಬೆಂಗಳೂರಿನಲ್ಲಿ ಬಾಕಿ ಇರುವ ಮೆಟ್ರೊ ಮಾರ್ಗಗಳ ಕಾಮಗಾರಿಗಳನ್ನು ಬೇಗನೆ ಪೂರ್ಣಗೊಳಿಸಲು ಮತ್ತು ಬೆಂಗಳೂರಿನೊಳಗೆ ಮೆಟ್ರೊ ಜಾಲವನ್ನು ಮತ್ತಷ್ಟು ವಿಸ್ತರಿಸಲು ಗಮನಹರಿಸಬೇಕು’ ಎಂದು ತೇಜಸ್ವಿ ಸೂರ್ಯ ಅವರು ‘ಎಕ್ಸ್’ನಲ್ಲಿ ಸಲಹೆ ನೀಡಿದ್ದಾರೆ.

ಮೆಟ್ರೊ ನಗರದ ಒಳಗಿನ ಸಂಪರ್ಕ ಹೆಚ್ಚಿಸುವುದಕ್ಕೆ ಸಂಬಂಧಿಸಿದೆ. ತುಮಕೂರಿಗೆ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್‌) ಅಥವಾ ಉಪನಗರ ರೈಲು ಯೋಜನೆಯನ್ನು ಒದಗಿಸಬೇಕು ಎಂದೂ ಹೇಳಿದ್ದಾರೆ.

ಬಿಜೆಪಿ ಮುಖಂಡ ಭಾಸ್ಕರ ರಾವ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ‘ಮೆಟ್ರೊ ಅಂದರೆ ಏನು? ಸಬ್ ಅರ್ಬನ್, ಇಂಟರ್​ ಸಿಟಿ ಹಾಗೂ ದೀರ್ಘ ದೂರ ಕ್ರಮಿಸುವ ರೈಲುಗಳ ನಡುವಣ ವ್ಯತ್ಯಾಸ ಏನು ಎಂಬುದನ್ನು ಯಾರಾದರೂ ಈ ಸರ್ಕಾರಕ್ಕೆ ಅರ್ಥ ಮಾಡಿಸುವಿರಾ? ಈ ಬೇಡಿಕೆ ಇನ್ನು ಮುಂದೆ ವಿಜಯಪುರ, ಚಿತ್ತಾಪುರ, ಬೆಳಗಾವಿಗೂ ವಿಸ್ತರಿಸಬಹುದು’ ಎಂದು ‘ಎಕ್ಸ್‌’ನಲ್ಲಿ ವ್ಯಂಗ್ಯ ಮಾಡಿದ್ದಾರೆ.

ಸರ್ಕಾರ ಒಪ್ಪಿದರೆ ಡಿಪಿಆರ್‌

ರಾಜ್ಯ ಸರ್ಕಾರದ ಸೂಚನೆಯಂತೆ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸಾಧಕ ಬಾಧಕಗಳು ಚರ್ಚೆಯಾಗಲಿವೆ. ಬೇಕೋ ಬೇಡವೋ ಎಂದು ಆನಂತರ ತೀರ್ಮಾನವಾಗಲಿದೆ. ಬೇಕು ಎಂದಾದರೆ ಆನಂತರ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ನನ್ನ ಅವಧಿಯಲ್ಲೇ ತುಮಕೂರಿಗೆ ಮೆಟ್ರೊ’ 

ಮೆಟ್ರೊ ರೈಲು ಸಂಪರ್ಕವನ್ನು ತುಮಕೂರಿನವರೆಗೂ ವಿಸ್ತರಿಸುವ ಬಗ್ಗೆ ವರದಿ ಬಂದಿದ್ದು, ಪರಿಶೀಲನೆ ನಡೆಯುತ್ತಿದೆ. ನನ್ನ ಅವಧಿಯಲ್ಲೇ ತುಮಕೂರಿಗೆ ಮೆಟ್ರೊ ರೈಲು ಬರಲಿದೆ. ಈ ಸಂಬಂಧ ತುಮಕೂರಿನ ಜನರಿಗೆ ಒಂದು ತಿಂಗಳಲ್ಲಿ ಸಿಹಿಸುದ್ದಿ ನೀಡುತ್ತೇನೆ. ತುಮಕೂರನ್ನು ಎರಡನೇ ಬೆಂಗಳೂರನ್ನಾಗಿ ಮಾಡುತ್ತೇವೆ. ನಗರದ ಚಿತ್ರಣವೇ ಬದಲಾಗಲಿದೆ.
ವಿ.ಸೋಮಣ್ಣ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.