ADVERTISEMENT

ಅಂಗವಿಕಲರಿಗೆ ಉದ್ಯೋಗ, ಶೀಘ್ರ ಹೊಸ ನೀತಿ: ಶರಣಪ್ರಕಾಶ ಪಾಟೀಲ

‘ಜಾಬ್ ಹಬ್ಬ’ದಲ್ಲಿ ಕೌಶಲಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 16:01 IST
Last Updated 20 ಡಿಸೆಂಬರ್ 2025, 16:01 IST
‘ಜಾಬ್ ಹಬ್ಬ’ ಕಾರ್ಯಕ್ರಮದಲ್ಲಿ ಅಂಗವಿಕಲರೊಂದಿಗೆ ಶರಣಪ್ರಕಾಶ ಪಾಟೀಲ ಚರ್ಚಿಸಿದರು
‘ಜಾಬ್ ಹಬ್ಬ’ ಕಾರ್ಯಕ್ರಮದಲ್ಲಿ ಅಂಗವಿಕಲರೊಂದಿಗೆ ಶರಣಪ್ರಕಾಶ ಪಾಟೀಲ ಚರ್ಚಿಸಿದರು   

ಬೆಂಗಳೂರು: ಅಂಗವಿಕಲರಿಗೆ ಕೌಶಲ ತರಬೇತಿ ನೀಡಿ ಉದ್ಯೋಗ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ಕಲ್ಪಿಸಲು ಹೊಸ ನೀತಿಯನ್ನು ರೂಪಿಸಲಾಗುವುದು ಎಂದು ಕೌಶಲಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ ತಿಳಿಸಿದರು.

ಎಸ್‌ಡಿಎ, ಕೆಎಸ್‌ಡಿಸಿ ಮತ್ತು ಅಸಿಸ್‌ಟೆಕ್ ಫೌಂಡೇಷನ್ ಜಂಟಿಯಾಗಿ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ಅಂಗವಿಕಲರಿಗಾಗಿ ಶನಿವಾರ ಆಯೋಜಿಸಿದ್ದ ‘ಜಾಬ್ ಹಬ್ಬ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 20 ಲಕ್ಷಕ್ಕೂ ಹೆಚ್ಚು ಅಂಗವಿಕಲರಿದ್ದಾರೆ. ಕಾರ್ಪೊರೇಟ್ ಕ್ಷೇತ್ರದಲ್ಲಿ ಅಂಗವಿಕಲರ ಸಂಖ್ಯೆ ಕಡಿಮೆ ಇದೆ. ಈ ನಿಟ್ಟಿನಲ್ಲಿ ಕೆಲವೊಂದು ಬದಲಾವಣೆ ತರುವ ತುರ್ತು ಇದೆ.  ಖಾಸಗಿ ವಲಯದಲ್ಲಿ ಅಂಗವಿಕಲರಿಗೆ ಶೇ 5ರಷ್ಟು ಉದ್ಯೋಗ ಮೀಸಲಾತಿ ಕಲ್ಪಿಸಲು ಸರ್ಕಾರ ಈಗಾಗಲೇ ‘ಕರ್ನಾಟಕ ಉದ್ಯೋಗ ಮತ್ತು ಶಿಕ್ಷಣದಲ್ಲಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಮಸೂದೆ–2025’ ರೂಪಿಸಿದೆ. ಇದು ದೇಶದಲ್ಲಿಯೇ ಪರಿಣಾಮಕಾರಿ ಕಾನೂನಾಗಿದೆ. ಇದಲ್ಲದೇ ಕರ್ನಾಟಕ ಕೌಶಲ ಅಭಿವೃದ್ಧಿ ನೀತಿ 2025–32 ಅನ್ನು ಕೂಡ ರೂಪಿಸಿದ್ದೇವೆ’ ಎಂದು ವಿವರ ನೀಡಿದರು.

ADVERTISEMENT

ಕೌಶಲ, ಕೈಗಾರಿಕಾ ಪಾಲುದಾರಿಕೆ, ಮೂಲಸೌಕರ್ಯ ಮತ್ತು ತಂತ್ರಜ್ಞಾನಕ್ಕೆ ಪೂರಕವಾದ ತರಬೇತಿ ನೀಡಲು ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿಯವರ ಕೌಶಲ ಕರ್ನಾಟಕ ಯೋಜನೆಯು (ಸಿಎಂಕೆಕೆವೈ) ಅಂಗವಿಕಲರಿಗೆ ತರಬೇತಿ ನೀಡಲು ಅವಕಾಶ ಒದಗಿಸಿದೆ. ‘ಜಾಬ್‌ ಹಬ್ಬ’ದ ಮೂಲಕ ಕರ್ನಾಟಕದಿಂದ ಕೆಲವು ಯಶಸ್ವಿ ಕಥೆಗಳು ಹೊರಹೊಮ್ಮಲಿ ಎಂದು ಆಶಿಸಿದರು.

ಕೌಶಲಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್‌.ಎಂ. ನಾಗರಾಜ, ಅಸಿಸ್‌ ಟೆಕ್ ಸಹ ಸಂಸ್ಥಾಪಕ ಪ್ರತೀಕ್, ಭಾರತ ಅಂಧರ ಕ್ರಿಕೆಟ್ ತಂಡದ ನಾಯಕ ಶೇಖರ್ ನಾಯ್ಕ್, ಬಿಎಂಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಎನ್. ರಘುಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.