ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಮಂಗಳವಾರ ಹೊಸ ವರ್ಷಾಚರಣೆಯ ಸಂಭ್ರಮಕ್ಕಾಗಿ ನೆರೆದಿದ್ದ ಜನಸ್ತೋಮ
ಪ್ರಜಾವಾಣಿ ಚಿತ್ರ: ಎಚ್. ಜಿ. ಪ್ರಶಾಂತ್
ಬೆಂಗಳೂರು: ಹಲವು ಸಿಹಿ–ಕಹಿ ಅನುಭವಗಳನ್ನು ನೀಡಿದ ‘2024’ಕ್ಕೆ ನಗರದ ಜನರು ಮಂಗಳವಾರ ಮಧ್ಯರಾತ್ರಿ ವಿದಾಯ ಹೇಳಿ, ಸಂಭ್ರಮದಿಂದ ಹೊಸ ಕನಸುಗಳೊಂದಿಗೆ ನವವರ್ಷವನ್ನು ಸ್ವಾಗತಿಸಿದರು.
ಮಧ್ಯರಾತ್ರಿ 12 ಗಂಟೆಯಾಗುತ್ತಿದ್ದಂತೆ ಆಗಸದಲ್ಲಿ ಸಿಡಿಮದ್ದುಗಳ ಚಿತ್ತಾರ ಮೂಡಿತು. ಯುವಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಖುಷಿಯ ಅಲೆಯಲ್ಲಿ ಜನರು ಮಿಂದೆದ್ದರು. ಶಾಂಪೇನ್ ಚಿಮ್ಮಿಸಿದರು. ಹಾಡು, ನೃತ್ಯ, ಕೇಕೆ ಹಾಗೂ ಶಿಳ್ಳೆಗಳ ಮೂಲಕ ಜನ ಹೊಸ ವರ್ಷಕ್ಕೆ ಸ್ವಾಗತ ಕೋರಿದರು. ಹಲವರು ಕೇಕ್ ಕತ್ತರಿಸಿ, ಹಂಚಿಕೊಂಡು ತಿಂದರು.
ರಸ್ತೆಗಳು, ಹೋಟೆಲ್, ಪಬ್, ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ನೆಚ್ಚಿನ ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದ ಯುವಕ–ಯುವತಿಯರು, ‘ವೆಲ್‌ಕಮ್–2025’, ‘ಹ್ಯಾಪಿ ನ್ಯೂ ಇಯರ್’, ‘ಹೊಸ ವರ್ಷದ ಶುಭಾಶಯಗಳು’ ಎಂಬ ಘೋಷಣೆ ಮೊಳಗಿಸಿದರು.
ಈ ಸಂಭ್ರಮ ವರ್ಷಪೂರ್ತಿ ಮುಂದುವರೆಯಲಿ ಎಂದು ಶುಭಾಶಯ ವಿನಿಮಯ ಮಾಡಿಕೊಂಡರು. ಆತ್ಮೀಯ ಅಪ್ಪುಗೆ ಹೊಸ ಬಾಂಧವ್ಯಗಳನ್ನು ಬೆಸೆದಿತ್ತು.
ಹೋಟೆಲ್, ಪಬ್, ಪಾರ್ಟಿ ಹಾಲ್‌ಗಳಲ್ಲಿ ಕೆಲವರು ಸಂತೋಷ ಕೂಟಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದರೆ, ಹಲವರು ತಮ್ಮ ಸ್ನೇಹಿತರ ಕೊಠಡಿಗಳು, ಮನೆಯ ಚಾವಣಿ ಮೇಲೆ ವೇದಿಕೆ ಸಿದ್ಧಪಡಿಸಿಕೊಂಡಿದ್ದರು. ತೇಲಿ ಬರುತ್ತಿದ್ದ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ, ಮದಿರೆ ಹೀರುತ್ತ ‘ನಶೆ’ಯಲ್ಲಿ ತೇಲುತ್ತಿದ್ದರು.
ಕೆಲವು ಬಡಾವಣೆಗಳಲ್ಲಿ ಮಕ್ಕಳು, ಗೃಹಿಣಿಯರು ಪಾಶ್ಚಾತ್ಯ ಸಂಗೀತ, ಸಿನಿಮಾ ಹಾಡುಗಳಿಗೆ ನೃತ್ಯ ಮಾಡುತ್ತ ಸಂಭ್ರಮಿಸಿದರು.
ಎಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ ಹಾಗೂ ಪೇಯಿಂಗ್ ಗೆಸ್ಟ್ ಕಟ್ಟಡಗಳಲ್ಲಿ ಹೊಸ ವರ್ಷದ ಸಂಭ್ರಮ ಹೆಚ್ಚು ಕಾಣಿಸಿತು. ಕೆಲವರು ವಾಹಿನಿಗಳಲ್ಲಿನ ಹೊಸ ವರ್ಷದ ಕಾರ್ಯಕ್ರಮಗಳನ್ನು ವೀಕ್ಷಿಸುತ್ತ ಕಾಲ ಕಳೆದರು.
ಚರ್ಚ್ ಸ್ಟ್ರೀಟ್‌ನ ಪಬ್‌ವೊಂದರಲ್ಲಿ ಯುವಕ ಯುವತಿಯರು ಹೊಸ ವರ್ಷವನ್ನು ಸ್ವಾಗತಿಸಿದರು
ನಗರದ ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ಒಪೆರಾ ಜಂಕ್ಷನ್, ರೆಸ್ಟ್‌ಹೌಸ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ರಿಚ್ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಮಲ್ಲೇಶ್ವರದ ಸಂಪಿಗೆ ರಸ್ತೆ ಹಾಗೂ ಹೊಸೂರು ರಸ್ತೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಪಬ್, ರೆಸ್ಟೋರೆಂಟ್‌ಗಳು ಭರ್ತಿಯಾಗಿದ್ದವು. ರಸ್ತೆಗಳು ರಂಗೇರಿದ್ದವು.
ಕೋರಮಂಗಲ, ಇಂದಿರಾನಗರದ 100 ಅಡಿ ರಸ್ತೆಯ ಹಳೇ ಮದ್ರಾಸ್ ರಸ್ತೆ, 12ನೇ ಮುಖ್ಯರಸ್ತೆಯ 80 ಅಡಿ ರಸ್ತೆಯ–ಡಬಲ್ ರೋಡ್ ಜಂಕ್ಷನ್, ಮಹದೇವಪುರದ ಐಟಿಪಿಎಲ್ ಮುಖ್ಯರಸ್ತೆ, ಗರುಡಾಚಾರ್ ಪಾಳ್ಯ, ಕೋರಮಂಗಲದ ನ್ಯಾಷನಲ್ ಗೇಮ್ ವಿಲೇಜ್, ಯುಕೊ ಬ್ಯಾಂಕ್ ರಸ್ತೆ, ವೈಡಿ ಮಠ ರಸ್ತೆ, ಬ್ಯಾಟರಾಯನಪುರದ ಮಾಲ್ ಆಫ್ ಏಷಿಯಾ, ರಾಜಾಜಿನಗರದ ಓರಾಯನ್ ಮಾಲ್‌ಗಳ ಮುಂದೆ ಜನರು ಜಮಾಯಿಸಿ, ಸಂಭ್ರಮದಿಂದ ಹೊಸ ವರ್ಷ ಆಚರಿಸಿದರು.
ಬ್ರಿಗೇಡ್ ರಸ್ತೆಯಲ್ಲಿ ಯುವತಿಯರ ಸಂಭ್ರಮ
ಫೀನಿಕ್ಸ್ ಮಾಲ್, ವೈಟ್‌ಫೀಲ್ಡ್, ಬೆಳ್ಳಂದೂರು, ಕೊತ್ತನೂರು, ಎಚ್‌ಎಸ್‌ಆರ್ ಲೇಔಟ್‌ಗಳ ಜನರು ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದರು.
ನಗರದಲ್ಲಿ ಮಂಗಳವಾರ ಮಧ್ಯರಾತ್ರಿ 1 ಗಂಟೆ ವರೆಗೆ ಹೊಸ ವರ್ಷಾಚರಣೆಗೆ ಪೊಲೀಸರು ಅವಕಾಶ ಕಲ್ಪಿಸಿದ್ದರು. ಹಲವೆಡೆ ಅವಧಿಗೂ ಮೀರಿ ಆಚರಣೆ ನಡೆಯಿತು.
ರಾತ್ರಿ 10 ಗಂಟೆ ಬಳಿಕ ಎಂ.ಜಿ ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆಯತ್ತ ಬರುವ ಜನರ ಸಂಖ್ಯೆ ಹೆಚ್ಚಾಗಿತ್ತು. ಸ್ಥಳದಲ್ಲಿದ್ದ ಪೊಲೀಸರು ದಟ್ಟಣೆ ನಿಯಂತ್ರಣಕ್ಕೆ ಹರಸಾಹಸಪಟ್ಟರು. ರಸ್ತೆಗಳಲ್ಲಿ ಗುಂಪು ಗುಂಪಾಗಿ ಕೇಕೆ ಹಾಕುತ್ತಾ ಸಾಗಿದರು.
ಹಲವು ಅಪಾರ್ಟ್ ಮೆಂಟ್‌ಗಳು ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದ್ದವು. ಅಪಾರ್ಟ್‌ಮೆಂಟ್ ಸಂಘದವರೂ ಪಾರ್ಟಿಗಳನ್ನು ಆಯೋಜಿಸಿದ್ದರು. ಹಾಡು, ನೃತ್ಯ ಸಂಗೀತ ಕಾರ್ಯಕ್ರಮಗಳು ನಡೆದವು.
ರಾಜರಾಜೇಶ್ವರಿ ನಗರ, ಮಹಾಲಕ್ಷ್ಮಿ ಬಡಾವಣೆ, ಅಶೋಕ ನಗರ, ಮತ್ತಿಕೆರೆ, ಕೆಂಗೇರಿ, ಬಸವನಗುಡಿ, ಜಯನಗರ, ಜೆಪಿ ನಗರ, ಪೀಣ್ಯ, ಮಲ್ಲೇಶ್ವರ, ಶೇಷಾದ್ರಿಪುರ, ದೀಪಾಂಜಲಿ ನಗರ, ಸುಬ್ರಹ್ಮಣ್ಯ ನಗರ, ಯಶವಂತಪುರ, ಜಾಲಹಳ್ಳಿ, ದಾಸರಹಳ್ಳಿ, ಎಚ್‌ಎಸ್‌ಆರ್ ಲೇಔಟ್, ಇಂದಿರಾನಗರ, ದೊಮ್ಮಲೂರು ಸೇರಿ ನಗರದ ಎಲ್ಲೆಡೆ ಹೊಸವರ್ಷವನ್ನು ಅದ್ಧೂರಿಯಿಂದ ಸ್ವಾಗತಿಸಲಾಯಿತು.
ಕಳೆದ ವರ್ಷ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ನೂಕುನುಗ್ಗಲು ಉಂಟಾಗಿತ್ತು. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ ಈ ಬಾರಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿತ್ತು.
ಯುಬಿ ಸಿಟಿಯಲ್ಲಿ ಹೊಸ ವರ್ಷದ ಸ್ವಾಗತದಲ್ಲಿ ಸಿಡಿಮದ್ದಿನ ಸೊಬಗು
ಭರ್ಜರಿ ಮದ್ಯ ವ್ಯಾಪಾರ
ಪಬ್ ಮತ್ತು ಬೇಕರಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ಬೇಕರಿಗಳಲ್ಲಿ ವಿಭಿನ್ನವಾದ ಕೇಕ್ ತಯಾರಿಸಲಾಗಿತ್ತು. ಬೆಳಿಗ್ಗೆಯಿಂದಲೂ ಬೇಕರಿಗಳ ಮುಂದೆ ಜನದಟ್ಟಣೆ ಕಂಡುಬಂತು. ವಿವಿಧ ಮಾದರಿಯ, ಆಕೃತಿಯ, ಬಣ್ಣದ, ಸವಿಯ ಕೇಕ್‌ಗಳು ಮಾರಾಟವಾದವು.
ಬಾರ್, ಪಬ್, ವೈನ್ ಸ್ಟೋರ್ ಸೇರಿದಂತೆ ಮದ್ಯದಂಗಡಿಗಳಲ್ಲಿ ಭರ್ಜರಿ ವ್ಯಾಪಾರ ಇತ್ತು. ಮಂಗಳವಾರ ಮಧ್ಯಾಹ್ನದಿಂದಲೇ ಮದ್ಯದಂಗಡಿಗಳಲ್ಲಿ ಭಾರಿ ಜನದಟ್ಟಣೆ ಕಂಡುಬಂತು.
ನಗರದ ಪಬ್, ರೆಸ್ಟೋರೆಂಟ್ , ರೆಸಾರ್ಟ್‌ಗಳು ಜನರಿಂದ ಭರ್ತಿಯಾಗಿದ್ದವು. ರೆಸಾರ್ಟ್‌ನ ಹೊರ ಆವರಣದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೆಲವರು ಹೊರ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಮಡಿಕೇರಿ, ಮಂಗಳೂರು, ಉಡುಪಿ, ಮೂಡಿಗೆರೆ, ಶಿವಮೊಗ್ಗಕ್ಕೆ ಹೊಸ ವರ್ಷಾಚರಣೆಗೆ ತೆರಳಿದ್ದರು.
ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಸಂಭ್ರಮವನ್ನು ಕಣ್ತುಂಬಿಕೊಂಡ ಪುಟಾಣಿ – ಪ್ರಜಾವಾಣಿ ಚಿತ್ರ
ಕಿಕ್ಕಿರಿದು ತುಂಬಿದ ಮೆಟ್ರೊ
ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ಗಳಲ್ಲಿ ಹೆಚ್ಚಿನ ಜನರು ಬಂದ ಕಾರಣ ‘ನಮ್ಮ ಮೆಟ್ರೊ’ ಪ್ರಯಾಣಿಕರಿಂದ ತುಂಬಿ ಹೋಗಿತ್ತು. ರಾತ್ರಿ 11 ಗಂಟೆ ಬಳಿಕ ನಿಂತುಕೊಳ್ಳುವುದಕ್ಕೂ ಜಾಗ ಇಲ್ಲದಷ್ಟು ಜನರು ಸೇರಿದ್ದರು.
ಜನದಟ್ಟಣೆಯ ಕಾರಣ ಎಂ.ಜಿ. ರಸ್ತೆಯ ಮೆಟ್ರೊ ನಿಲ್ದಾಣದಿಂದ ತೆರಳಲು ಅವಕಾಶ ಇರಲಿಲ್ಲ. 11ರ ಬಳಿಕ ಎಂ.ಜಿ. ರಸ್ತೆ ನಿಲ್ದಾಣದಲ್ಲಿ ನಿಲುಗಡೆ ನೀಡುವುದನ್ನು ನಿಲ್ಲಿಸಲಾಯಿತು. ಎಂ.ಜಿ. ರಸ್ತೆಯಿಂದ ಟ್ರಿನಿಟಿ ನಿಲ್ದಾಣ ಅಥವಾ ಕಬ್ಬನ್ ಪಾರ್ಕ್ ನಿಲ್ದಾಣಕ್ಕೆ ತೆರಳಿ ಮೆಟ್ರೊದಲ್ಲಿ ಪ್ರಯಾಣಿಸಿದರು.
ರಾತ್ರಿ 2.45ರ ವರೆಗೂ ಮೆಟ್ರೊ ಸೇವೆಯನ್ನು ವಿಸ್ತರಿಸಲಾಗಿತ್ತು. ಪ್ರತಿ 10 ನಿಮಿಷಕ್ಕೊಂದು ರೈಲು ಸಂಚರಿಸಿದವು. ಕೊನೆಯ ಮೆಟ್ರೊ ಮೆಜೆಸ್ಟಿಕ್‌ನಿಂದ 2.45ಕ್ಕೆ ಹೊರಟಿತು.
ಸುರಕ್ಷತೆಯ ಕ್ರಮವಾಗಿ ನಗರದ ಶಿವಾನಂದ ವೃತ್ತದ ಮೇಲ್ಸೇತುವೆಯಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು
ಮಾಸ್ಕ್ ನಿಷೇಧ, ಮೇಲ್ಸೇತುವೆ ಬಂದ್
ಮಂಗಳವಾರ ರಾತ್ರಿ 9ರಿಂದಲೇ ನಗರದ ಹಲವು ಮೇಲ್ಸೇತುವೆಗಳಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಇದರಿಂದ ದೂರದ ಸ್ಥಳಕ್ಕೆ ತೆರಳಬೇಕಾದವರು ಪರ್ಯಾಯ ಮಾರ್ಗದಲ್ಲಿ ಸಂಚರಿಸಿದರು.
ಹೆಣ್ಣೂರು, ಐಟಿಸಿ, ಬಾಣಸವಾಡಿ, ಲಿಂಗರಾಜಪುರ, ಕಲ್ಪಳ್ಳಿ, ದೊಮ್ಮಲೂರು, ನಾಗವಾರ, ಮೇಡಹಳ್ಳಿ, ಎಎಂ ರಸ್ತೆ, ದೇವರಬಿಸನಹಳ್ಳಿ, ಮಹದೇವಪುರ, ದೊಡ್ಡಕ್ಕುಂದಿ ಮೇಲ್ಸೇತುವೆಯಲ್ಲಿ ರಾತ್ರಿ ಪೂರ್ತಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದವರನ್ನು ಪೊಲೀಸರು ತಪಾಸಣೆಗೆ ಒಳಪಡಿಸಿ, ದಂಡ ವಿಧಿಸಿದರು.
ಯುಬಿ ಸಿಟಿಯಲ್ಲಿ ಕುಣಿದು ಕುಪ್ಪಳಿಸಿದ ಯುವಜನರು - ಪ್ರಜಾವಾಣಿ ಚಿತ್ರ
ಪೀಪಿ ಬಳಕೆಗೆ ನಿಷೇಧ: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಪೀಪಿ ಬಳಕೆ ಹಾಗೂ ವಿ–ಮಾಸ್ಕ್‌ಗೆ ನಿಷೇಧ ಹೇರಲಾಗಿತ್ತು. ಆದರೂ ಪೀಪಿ ಊದುತ್ತಾ ತೆರಳಿದ ದೃಶ್ಯ ಕಾಣಿಸಿತು. ಕೆಲವು ರಸ್ತೆಗಳಲ್ಲಿ ಯುವಕ– ಯುವತಿಯರು ತಲೆಯ ಮೇಲೆ ಬಣ್ಣದ ಕ್ಯಾಪ್ ಧರಿಸಿದ್ದು ಕಂಡುಬಂತು.
ಮಹಾತ್ಮ ಗಾಂಧಿ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸ್ ಬಂದೋಬಸ್ತ್ ಕಂಡುಬಂತು. ಮಂಗಳವಾರ ಸಂಜೆಯಿಂದಲೇ ಪೊಲೀಸರು ತಮ್ಮ ಸ್ಥಳಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ಬಾರಿ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದೋಬಸ್ತ್‌ಗೆ ಬಳಕೆ ಮಾಡಿಕೊಳ್ಳಲಾಗಿತ್ತು.
ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ, ಕೇಂದ್ರ ವಿಭಾಗದ ಡಿಸಿಪಿ ಶೇಖರ್, ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ನಗರ ಪ್ರದಕ್ಷಿಣೆ ಹಾಕಿದರು. ಬಂದೋಬಸ್ತ್ ಪರಿಶೀಲಿಸಿದರು.
ಎಲ್ಲೆಲ್ಲಿ ಏನು ನಡೆಯಿತು...
ಕೋರಮಂಗಲದಲ್ಲಿ ಕಣ್ಮರೆಯಾಗಿದ್ದ ಮಗುವನ್ನು ಪತ್ತೆಹಚ್ಚಿ ತಾಯಿ ಮಡಿಲು ಸೇರಿಸಿದ ಪೊಲೀಸರು
ರಾತ್ರಿ 12 ಕಳೆಯುತ್ತಿದ್ದಂತೆಯೇ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದ ಯುವಕ –ಯುವತಿಯರನ್ನು ಸ್ಥಳದಿಂದ ಪೊಲೀಸರು ಚದುರಿಸಿದರು
ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಮದ್ಯದ ಅಮಲಿನಲ್ಲಿ ತೂರಾಡುತ್ತಾ ಬಂದವರಿಗೆ ಪೊಲೀಸರು ಬುದ್ಧಿಮಾತು ಹೇಳಿ ಕಳುಹಿಸಿದರು
ನಿರ್ಬಂಧ ನಡುವೆಯೂ ಲೌಡ್ ಸ್ಪೀಕರ್, ಪಟಾಕಿ ಸಿಡಿಸಿದ್ದು ಕಂಡುಬಂತು
ಅನುಮತಿ ಪಡೆದ ಕಡೆ ಮಾತ್ರ ಹೆಚ್ಚು ಜನರು ಸೇರಿ ಆಚರಣೆಗೆ ಅವಕಾಶ ಕಲ್ಪಿಸಲಾಗಿತ್ತು
ಮದ್ಯ ಸೇವಿಸಿ ವಾಹನ ಚಾಲನೆ ಹಾಗೂ ವ್ಹೀಲಿ ನಡೆಸಿದ್ದವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡರು
ಅನುಚಿತ ವರ್ತನೆ ಮಾಡಿದ್ದವರನ್ನು ವಶಕ್ಕೆ ಪಡೆದುಕೊಂಡರು
ಹಲವು ಪಬ್ ಹಾಗೂ ರೆಸ್ಟೋರೆಂಟ್‌ಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ ಪರಿಶೀಲಿಸಿದರು
ಬ್ರಿಗೇಡ್ ರಸ್ತೆಯಲ್ಲಿ ಪೊಲೀಸರ ಜತೆ ವಾಗ್ವಾದ
ಎಂ.ಜಿ ರಸ್ತೆಯಲ್ಲಿ ರಾತ್ರಿ 1ರ ನಂತರವೂ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಜನರನ್ನು ಪೊಲೀಸರು ಚದುರಿಸಿದರು – ಚಿತ್ರ: ಎಚ್. ಜಿ. ಪ್ರಶಾಂತ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.