ADVERTISEMENT

‘ಲಕ್ಷ ಮಹಿಳೆಯರಲ್ಲಿ 34 ಮಂದಿಗೆ ಸ್ತನ ಕ್ಯಾನ್ಸರ್‌’

ಪೌರಕಾರ್ಮಿಕರಿಗೆ ಸಾಂಕ್ರಾಮಿಕವಲ್ಲದ ರೋಗ ಪರೀಕ್ಷೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 19:03 IST
Last Updated 30 ಜುಲೈ 2019, 19:03 IST
ನಗರದ ಕೆಎಲ್‌ಇ ದಂತವಿಜ್ಞಾನ ಆಸ್ಪತ್ರೆಯಲ್ಲಿ ಮಂಗಳವಾರ ಪೌರಕಾರ್ಮಿಕರೊಬ್ಬರ ದಂತ ತಪಾಸಣೆ ನಡೆಸಿದ ವೈದ್ಯೆ
ನಗರದ ಕೆಎಲ್‌ಇ ದಂತವಿಜ್ಞಾನ ಆಸ್ಪತ್ರೆಯಲ್ಲಿ ಮಂಗಳವಾರ ಪೌರಕಾರ್ಮಿಕರೊಬ್ಬರ ದಂತ ತಪಾಸಣೆ ನಡೆಸಿದ ವೈದ್ಯೆ   

ಬೆಂಗಳೂರು: ‘ಕೆಲವು ವರ್ಷಗಳ ಹಿಂದೆ ದೇಶದಲ್ಲಿ ಲಕ್ಷ ಮಹಿಳೆಯರಲ್ಲಿ 27 ಮಂದಿಗೆ ಸ್ತನ ಕ್ಯಾನ್ಸರ್‌ ಇರುತ್ತಿತ್ತು. ಈಗ ಈ ಸಂಖ್ಯೆ 34ಕ್ಕೆ ಏರಿದೆ. ಬೆಂಗಳೂರಿನಲ್ಲಿಯೇ ಲಕ್ಷ ಮಹಿಳೆಯರಲ್ಲಿ 16 ಮಂದಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ’ ಎಂದುಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ ನಿರ್ದೇಶಕ ಡಾ. ಸಿ. ರಾಮಚಂದ್ರ ತಿಳಿಸಿದರು.

ಬಿಬಿಎಂಪಿಯ ಪೌರಕಾರ್ಮಿಕರಿಗಾಗಿ ಆಯೋಜಿಸಿದ್ದ ‘ಸಾಂಕ್ರಮಿಕವಲ್ಲದ ರೋಗ ಪರೀಕ್ಷಾ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 35ರಿಂದ 65 ವರ್ಷ ವಯಸ್ಸಿನವರಲ್ಲಿ ಕ್ಯಾನ್ಸರ್‌ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಪರೀಕ್ಷೆಗೆ ಒಳಪಡುವ ಸಾವಿರ ಜನರ ಪೈಕಿ ಸರಾಸರಿ ಇಬ್ಬರು ಕ್ಯಾನ್ಸರ್‌ ರೋಗ ಹೊಂದಿರುವುದು ಪತ್ತೆಯಾಗುತ್ತಿದೆ’ ಎಂದರು.

ADVERTISEMENT

‘ಈ ಮಾರಕ ಕಾಯಿಲೆ ಬಗ್ಗೆ ಅರಿವು ಅಗತ್ಯ. ಕ್ಯಾನ್ಸರ್‌ ಚಿಕಿತ್ಸೆಗಾಗಿ ಸರ್ಕಾರ ಹಣ ಬಿಡುಗಡೆ ಮಾಡುತ್ತದೆ. ಪರೀಕ್ಷೆ ಮತ್ತು ಜಾಗೃತಿ ಕಾರ್ಯಕ್ರಮಗಳಿಗೂ ಅನುದಾನ ಬಿಡುಗಡೆ ಮಾಡಬೇಕಾದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಎನ್‌ಸಿಡಿಐಆರ್‌ ನಿರ್ದೇಶಕ ಡಾ. ಪ್ರಶಾಂತ್‌ ಮಾಥುರ್‌, ‘ಶೇ 60ರಷ್ಟು ಕ್ಯಾನ್ಸರ್‌ ಗುಣಪಡಿಸಬಹುದಾಗಿರುತ್ತದೆ. ಆದರೆ,ಪ್ರಾರಂಭದಲ್ಲಿಯೇ ರೋಗ ಪತ್ತೆ ಹಚ್ಚಬೇಕು’ ಎಂದರು.

ಈ ಕಾರ್ಯಕ್ರಮದ ಅನ್ವಯ, ಬಿಬಿಎಂಪಿಯ ಪಶ್ಚಿಮ ವಲಯದಲ್ಲಿ ಮುಂದಿನ ನಾಲ್ಕು ತಿಂಗಳಲ್ಲಿ 3000 ಪೌರಕಾರ್ಮಿಕ ಆರೋಗ್ಯ ಪರೀಕ್ಷೆ ನಡೆಸಲಾಗುವುದು. ಮಧುಮೇಹ, ಅಧಿಕ ರಕ್ತದೊತ್ತಡ, ಬಾಯಿ, ಗರ್ಭ ಹಾಗೂ ಸ್ತನ ಕ್ಯಾನ್ಸರ್‌ ಪರೀಕ್ಷೆ ನಡೆಸಲಾಗುವುದು ಮತ್ತು ಈ ರೋಗಗಳ ಕುರಿತು ಜಾಗೃತಿ ಮೂಡಿಸಲಾಗುವುದು.

ಬಿಬಿಎಂಪಿ, ನಗರದ ಕೆಎಲ್‌ಇ ದಂತ ವಿಜ್ಞಾನ ಸಂಸ್ಥೆ, ಬಿ.ಪ್ಯಾಕ್‌ ಸಂಸ್ಥೆಗಳು ಈ ಕಾರ್ಯಕ್ಕೆ ಕೈಜೋಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.