ADVERTISEMENT

ಸುರಂಗ ರಸ್ತೆ | ವಾಹನ ದಟ್ಟಣೆ ನಿವಾರಣೆಗೆ ಪರಿಹಾರವಲ್ಲ: ತಜ್ಞರ ಅಭಿಮತ

ಸುರಂಗ ರಸ್ತೆ ಪ್ರವೇಶ–ನಿರ್ಗಮನದಲ್ಲಿ ‘ಬಾಟಲ್‌ ನೆಕ್‌’ಗಳ ವೃದ್ಧಿ

ಆರ್. ಮಂಜುನಾಥ್
Published 2 ಜುಲೈ 2025, 22:39 IST
Last Updated 2 ಜುಲೈ 2025, 22:39 IST
–
   

ಬೆಂಗಳೂರು: ನಗರವು ವೃತ್ತಾಕಾರದಲ್ಲಿ ಅಭಿವೃದ್ಧಿ ಆಗಿದೆ. ಯಾವುದೋ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸುರಂಗ ರಸ್ತೆ ನಿರ್ಮಿಸುವುದರಿಂದ ವಾಹನ ದಟ್ಟಣೆ ಕಡಿಮೆ ಆಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಬೆಂಗಳೂರು ತನ್ನ ಕೇಂದ್ರ ಭಾಗದಿಂದ ವೃತ್ತಾಕಾರವಾಗಿ ಎಲ್ಲೆಡೆ ಕ್ಷಿಪ್ರವಾಗಿ ಬೆಳವಣಿಗೆ ಆಗಿದೆ ಹಾಗೂ ಇನ್ನೂ ಆಗುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಭಾಗದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸುರಂಗ ರಸ್ತೆ ನಿರ್ಮಿಸುವುದರಿಂದ ಹೆಚ್ಚಿನ ಪ್ರಯೋಜನ ಆಗುವುದಿಲ್ಲ. ಬದಲಿಗೆ, ಸುರಂಗ ರಸ್ತೆಯ ಪ್ರವೇಶ–ನಿರ್ಗಮನ ಸ್ಥಳಗಳಲ್ಲಿ ‘ಬಾಟಲ್‌ ನೆಕ್‌’ಗಳ ಸಂಖ್ಯೆ ವೃದ್ಧಿಯಾಗಲಿದೆ’ ಎಂದು ಸಂಚಾರ ತಜ್ಞ ಪ್ರೊ. ಎಂ.ಎನ್‌. ಶ್ರೀಹರಿ ಹೇಳಿದರು.

‘ವಾಹನ ದಟ್ಟಣೆ ಕಡಿಮೆ ಮಾಡಲು ಕೇಂದ್ರ ಭಾಗದಲ್ಲಿ ಮೇಲ್ಸೇತುವೆ ಅಥವಾ ರಸ್ತೆ ವಿಸ್ತರಣೆ ಕಾಮಗಾರಿ ಮಾಡುವುದು ಕಷ್ಟಸಾಧ್ಯವಾಗಿದೆ. ಭೂಸ್ವಾಧೀನಕ್ಕೆ ಸಾವಿರಾರು ಕೋಟಿ ವೆಚ್ಚವಾಗಲಿದೆ. ಇದಕ್ಕೆ ಪರ್ಯಾಯವಾಗಿ ಭೂಮಿಯ ಕೆಳಗೆ ರಸ್ತೆ ನಿರ್ಮಿಸುವ ಯೋಜನೆ ಒಂದು ಪರ್ಯಾಯ ಆಯ್ಕೆ ಆಗಿದ್ದರೂ, ಅದರಿಂದಾಗುವ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ ಅಧಿಕವಾಗಿದೆಯಾದರೂ, ಸಾಮಾನ್ಯ ಜ್ಞಾನ ಕಡಿಮೆಯಾಗಿದೆ ’ ಎಂದರು.

ADVERTISEMENT

‘ಬೆಂಗಳೂರಿನ ಭೂಗರ್ಭದಲ್ಲಿ ಹೆಚ್ಚಾಗಿ ಕಲ್ಲಿನ ಪದರಗಳಿವೆ. ಗ್ರಾನೈಟ್‌ ಕಲ್ಲುಗಳು ಹೇರಳವಾಗಿವೆ. ‘ಹಾರ್ಡ್‌ರಾಕ್‌’ ಹೆಚ್ಚು ಸಿಗುತ್ತದೆ. ಹೀಗಾಗಿ, ಸುರಂಗವನ್ನು ಕೊರೆಯುವ ಕಾರ್ಯಕ್ಕೆ ಹೆಚ್ಚು ಶ್ರಮ ಅಗತ್ಯ. ಸುರಂಗ ಕೊರೆಯಲು ವಿದೇಶಗಳಿಂದ ಬರುವ ಅತ್ಯಾಧುನಿಕ ಯಂತ್ರಗಳು (ಟಿಪಿಎಂ) ಈ ಕೆಲಸವನ್ನು ಮಾಡುತ್ತವೆಯಾದರೂ, ಅದರ ಹಿಂದಿನ ಪರಿಣತಿ ಮೇಲೆ ಯಶಸ್ಸು ನಿಂತಿರುತ್ತದೆ. ನಮ್ಮ ಮೆಟ್ರೊ ನಿರ್ಮಾಣದ ಸಂದರ್ಭದಲ್ಲಿ ಹಲವು ಬಾರಿ ಟಿಪಿಎಂಗಳು ಕೈಕೊಟ್ಟಿವೆ. ಅದಕ್ಕಿಂತ ಹೆಚ್ಚಿನ ಸುರಕ್ಷತೆ ಸುರಂಗ ರಸ್ತೆಯಲ್ಲಿ ಇರಬೇಕಾಗುತ್ತದೆ’ ಎಂದು ಹೇಳಿದರು.

‘ಹಾರ್ಡ್‌ರಾಕ್‌ ಹೆಚ್ಚಿರುವ ನಗರದ ಭೂಗರ್ಭದಲ್ಲಿ ಭೂಕುಸಿತದಂತಹ ಸಮಸ್ಯೆ ಎದುರಾಗುವ ಸಂಭವ ಕಡಿಮೆ. ಆದರೆ, ಹತ್ತಾರು ಕಿ.ಮೀ ಉದ್ದ ಸಂಚರಿಸುವಾಗ ಏನಾದರೂ ಸಮಸ್ಯೆಯಾದರೆ ಅದಕ್ಕೆ ಕ್ಷಿಪ್ರವಾಗಿ ಪರಿಹಾರ ಕಲ್ಪಿಸುವ ಯೋಜನೆಗೆ ಹೆಚ್ಚು ಪ್ರಾಮುಖ್ಯ ನೀಡಬೇಕು. ಅಲ್ಲದೆ, ಸುರಂಗದಲ್ಲಿ ನೀರು ಜಿನುಗದಂತೆ ಹಾಗೂ ಮಳೆ ನೀರು ಸೇರಿಕೊಳ್ಳದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಸುರಂಗ ರಸ್ತೆಯಲ್ಲಿ ಬೋಟ್‌ ನೀಡಬೇಕಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ಸಿಂಗಪುರ ಮಾದರಿಯಾಗಲಿ: ‘ಸುರಂಗ ರಸ್ತೆಯಿಂದ ನಮ್ಮ ಮೆಟ್ರೊ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಹೆಬ್ಬಾಳ– ಸಿಲ್ಕ್‌ ಬೋರ್ಡ್‌ ಕಾರಿಡಾರ್‌ನಲ್ಲಿ ಮೆಟ್ರೊ ಸಂಚಾರವನ್ನು ಯೋಜಿಸಲಾಗಿದೆ. ಅದಕ್ಕೂ ಸಾವಿರಾರು ಕೋಟಿ ವೆಚ್ಚ ಮಾಡಲಾಗುತ್ತದೆ. ಸುರಂಗ ರಸ್ತೆಯಿಂದ ಮೆಟ್ರೊ ಪ್ರಯಾಣಿಕರ ಸಂಖ್ಯೆ ಶೇ 5ರಷ್ಟು ಕಡಿಮೆಯಾಗುತ್ತದೆ. ಇದರಿಂದ ರಾಜ್ಯದ ಹಣಕಾಸಿನ ಮೇಲೆ ಮತ್ತಷ್ಟು ಹೊರೆಯಾಗುತ್ತದೆ. 57 ಲಕ್ಷ ಜನಸಂಖ್ಯೆ ಹೊಂದಿರುವ ಸಿಂಗಪುರದಲ್ಲಿ ಕೇವಲ 6.24 ಲಕ್ಷ ಕಾರುಗಳಿವೆ. 3.6 ಕೋಟಿ ಜನಸಂಖ್ಯೆ ಹೊಂದಿರುವ ಟೋಕಿಯೊದಲ್ಲಿ ಕೇವಲ 30 ಲಕ್ಷ ಖಾಸಗಿ ವಾಹನಗಳಿವೆ. ಟೋಕಿಯೊದಲ್ಲಿ ಸಾಮೂಹಿಕ ಸಾರಿಗೆಯಲ್ಲಿ ದೈನಂದಿನ ರೈಲು ಪ್ರಯಾಣಿಕರ ಸಂಖ್ಯೆ ನಾಲ್ಕು ಕೋಟಿ, ಬೆಂಗಳೂರಿನಲ್ಲಿ ಈ ಸಂಖ್ಯೆ ಆರು ಲಕ್ಷದ ಆಸುಪಾಸಿನಲ್ಲಿದೆ. 2017ರಲ್ಲಿ ಸಿಂಗಪುರವು ಭೂಗತ ರಸ್ತೆ ಯೋಜನೆ ರದ್ದುಗೊಳಿಸಿ ಸಾರ್ವಜನಿಕ ಸಾರಿಗೆಯನ್ನು ವಿಸ್ತರಿಸುವತ್ತ ಗಮನಹರಿಸಿತು. ಸಿಂಗಪುರ ಮಾದರಿಯಾಗಿರಿಸಿಕೊಂಡಿರುವ ಬೆಂಗಳೂರು ಅದನ್ನೇ ಪಾಲಿಸಿದರೆ ಉತ್ತಮ’ ಎಂದು ಸಿವಿಕ್‌– ಬೆಂಗಳೂರು ಸಂಸ್ಥೆಯ ಕಾರ್ಯಕಾರಿ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್‌ ಹೇಳಿದರು.

ಪ್ರಯಾಣಿಕರ ಸುರಕ್ಷತೆಯೇ ಸವಾಲು: ಶ್ರೀಹರಿ

‘ಲಂಡನ್‌ನಲ್ಲಿ 50 ವರ್ಷಗಳ ಹಿಂದೆಯೇ ಸುರಂಗ ರಸ್ತೆ ನಿರ್ಮಿಸಲಾಗಿದೆ. ಅಲ್ಲಿ ಜನರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ. ಜನರ ಪ್ರಾಣಕ್ಕೆ ಹೆಚ್ಚು ಪ್ರಾಮುಖ್ಯವಿದ್ದು ಎಷ್ಟು ವೆಚ್ಚವನ್ನಾದರೂ ಮಾಡುತ್ತಾರೆ. ಆದರೆ ನಮ್ಮ ವ್ಯವಸ್ಥೆಯಲ್ಲಿ ಅತಿ ಕಡಿಮೆ ‘ಕೋಟ್‌’ ಮಾಡುವವರಿಗೆ ಟೆಂಡರ್‌ ನೀಡಿ ಕಾಮಗಾರಿ ನಡೆಸಲಾಗುತ್ತದೆ. ಅಂದರೆ ವೆಚ್ಚ ಕಡಿಮೆ ಮಾಡುವುದಕ್ಕೆ ಆದ್ಯತೆ. ಅದಾದ ಮೇಲೆ ಕಿಕ್‌ ಬ್ಯಾಕ್‌ ಕಮಿಷನ್‌ನಲ್ಲಿ ಹಲವು ಪರ್ಸೆಂಟ್‌ ಹೋಗುತ್ತದೆ. ಆದ್ದರಿಂದ ಸಾವಿರಾರು ಕೋಟಿಗಳನ್ನು ವೆಚ್ಚ ಮಾಡಿ ನಿರ್ಮಿಸುವ ಸುರಂಗ ರಸ್ತೆಯಲ್ಲಿ ಅತಿಹೆಚ್ಚು ಶುಲ್ಕವನ್ನು ಪಾವತಿಸಿ ಸಂಚರಿಸುವಾಗ ಅದು ಗುಣಮಟ್ಟದಿಂದ ಕೂಡಿದೆಯೇ ಸುರಕ್ಷಿತವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ’ ಎಂದು ಸಂಚಾರ ತಜ್ಞ ಪ್ರೊ. ಎಂ.ಎನ್‌. ಶ್ರೀಹರಿ ಹೇಳಿದರು.

ಸಾರ್ವಜನಿಕ ಸಾರಿಗೆ ವೃದ್ಧಿಯಾಗಲಿ: ಕಾತ್ಯಾಯಿನಿ

‘ಸುರಂಗ ರಸ್ತೆಗಳಿಗೆ ಸುಮಾರು ₹40 ಸಾವಿರ ಕೋಟಿ ವೆಚ್ಚ ಮಾಡುವ ಬದಲು ಬೆಂಗಳೂರಿಗೆ ಬಹು-ಮಾದರಿಯ ಸಾರ್ವಜನಿಕ ಸಾರಿಗೆಯ ಮೂಲಸೌಕರ್ಯ ಹೆಚ್ಚಿಸಬೇಕು. ನಮ್ಮ ಮೆಟ್ರೊ ಉಪನಗರ ರೈಲು ಮತ್ತು ಮುಖ್ಯ ರಸ್ತೆಗಳನ್ನು ಅಭಿವೃದ್ಧಿಮಾಡಬಹುದು. ಬಿಎಂಟಿಸಿ ಬಸ್‌ಗಳನ್ನು 18 ಸಾವಿರಕ್ಕೆ ಹೆಚ್ಚಿಸಿ ಕೊನೆಯ ಮೈಲಿ ಸಂಪರ್ಕಕ್ಕೆ ಸೇವೆ ನೀಡಬಹುದು. ಸಾರ್ವಜನಿಕ ಸಾರಿಗೆ ಪ್ರಯಾಣ ದರವನ್ನು ಎರಡು ಪಟ್ಟು ಕಡಿಮೆ ಮಾಡಬಹುದು ಅಥವಾ ದಕ್ಷಿಣ ಅಮೆರಿಕದ ನಗರಗಳಂತೆ ಉಚಿತ ಮಾಡಿ ಪ್ರಯಾಣಿಕರ ಸಂಖ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸಬಹುದು’ ಎಂದು ಸಿವಿಕ್‌– ಬೆಂಗಳೂರು ಸಂಸ್ಥೆಯ ಕಾರ್ಯಕಾರಿ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್‌ ಸಲಹೆ ನೀಡಿದರು.

2023ರಿಂದ ಸುರಂಗ ರಸ್ತೆ ಜಪ!

  • 2023ರ ಜೂನ್‌ನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸುರಂಗ ರಸ್ತೆ ನಿರ್ಮಿಸುವುದಾಗಿ ಪ್ರಸ್ತಾಪಿಸಿದ್ದರು

  • ತುಮಕೂರು ರಸ್ತೆ ಬಳ್ಳಾರಿ ರಸ್ತೆ ಮತ್ತು ಹಳೇ ಮದ್ರಾಸ್‌ ರಸ್ತೆಗಳನ್ನು ಸಂಪರ್ಕಿಸುವ ಮೈಸೂರು ರಸ್ತೆ ಮತ್ತು ಹೊಸೂರು ರಸ್ತೆಯಲ್ಲಿ ₹50 ಸಾವಿರ ವೆಚ್ಚದ 30 ಕಿ.ಮೀ ಉದ್ದದ ಸುರಂಗ ಮಾರ್ಗದ ಯೋಜನೆ ಸಿದ್ಧವಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) 2023ರ ಜೂನ್‌ನಲ್ಲಿ ತಿಳಿಸಿತ್ತು

  • ದೆಹಲಿಯಲ್ಲಿರುವ 1.3 ಕಿ.ಮೀ ಸುರಂಗ ರಸ್ತೆ ಮುಂಬೈನಲ್ಲಿ ನಿರ್ಮಾಣ ಹಂತದಲ್ಲಿರುವ 7.75 ಕಿ.ಮೀ ಸುರಂಗ ರಸ್ತೆಯನ್ನು ಪ್ರಸ್ತಾಪಿಸಿದ್ದ ಎನ್‌ಎಚ್‌ಎಐ ಶೇ 40ರಷ್ಟು ವೆಚ್ಚ ಭರಿಸಿ ಉಳಿದಿದ್ದನ್ನು ಬಿಒಟಿ ಮಾದರಲ್ಲಿ ನಿರ್ಮಿಸಲಾಗುತ್ತದೆ ಎಂದು ಹೇಳಿತ್ತು

  • ಸಂಚಾರ ಸುಗಮಗೊಳಿಸಲು 60 ಕಿ.ಮೀ ಸುರಂಗ ರಸ್ತೆ ನಿರ್ಮಿಸಲಾಗುತ್ತದೆ ಡಿಪಿಆರ್‌ ಸಿದ್ಧಪಡಿಸಿ ಪ್ರಾಯೋಗಿಕವಾಗಿ ಹೆಬ್ಬಾಳದಿಂದ ಮೇಖ್ರಿ ವೃತ್ತದವರೆಗೆ 3 ಕಿ.ಮೀ ರಸ್ತೆಯನ್ನು ಕೂಡಲೇ ಪ್ರಾರಂಭಿಸಲಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ 2024ರ ಜನವರಿಯಲ್ಲಿ ಹೇಳಿದ್ದರು

  • 2024ರಿಂದ ಡಿಪಿಆರ್‌ ಸಿದ್ಧವಾಗುತ್ತಿದೆ ಶೀಘ್ರವೇ ಟೆಂಡರ್‌ ಆಹ್ವಾನಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.