ADVERTISEMENT

ಮೂರ್ಖ, ದಡ್ಡ, ಕಿಲ್‌ ಯೂ: ಅಧಿಕಾರಿ ಬೈಗುಳ; ಡಿಸಿಎಂ ಮಧ್ಯಪ್ರವೇಶಕ್ಕೆ ಆಗ್ರಹ

ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್‌ ವಿರುದ್ಧ ನೌಕರರ ಅಳಲು |

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 22:15 IST
Last Updated 26 ಡಿಸೆಂಬರ್ 2025, 22:15 IST
   

ಬೆಂಗಳೂರು: ‘ನೌಕರರಿಗೆ ಮೂರ್ಖ, ದಡ್ಡ, ಐ ವಿಲ್‌ ಕಿಲ್‌ ಯೂ, ಐ ವಿಲ್‌ ಹ್ಯಾಂಗ್‌ ಯೂ ಎಂದು ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು’ ಎಂದು ಜಿಬಿಎ -ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು ಮನವಿ ಮಾಡಿದೆ.

‘ಮುನೀಶ್‌ ಮೌದ್ಗಿಲ್‌ ಅವರು ಎರಡು ವರ್ಷ ಎಂಟು ತಿಂಗಳ ಹಿಂದೆ ಅವೈಜ್ಞಾನಿಕ ತಂತ್ರಾಂಶ ಜಾರಿಗೆ ತಂದಿದ್ದು, ಪ್ರತಿ ದಿನ ಬೆಳಿಗ್ಗೆ 8.30ಕ್ಕೆ ಅಧಿಕಾರಿಗಳು ಮತ್ತು ನೌಕರರೊಂದಿಗೆ ವಿಡಿಯೊ ಸಂವಾದ ನಡೆಸುತ್ತಿದ್ದಾರೆ. ಆ ಸಂದರ್ಭದಲ್ಲಿ ಅವಾಚ್ಯವಾಗಿ ನಿಂದಿಸುತ್ತಾರೆ. ಬೆಳಿಗ್ಗೆ ಮನೆಯಲ್ಲಿ ಹೆತ್ತವರು ಮಕ್ಕಳು, ಪತಿ/ಪತ್ನಿ ಮುಂದೆಯೇ ಮಾನಸಿಕ ಚಿತ್ರಹಿಂಸೆ ಅನುಭವಿಸುವಂತಾಗಿದೆ’ ಎಂದು ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್‌ ಅವರು ಶಿವಕುಮಾರ್‌ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ದೂರಿದ್ದಾರೆ.

‘ಉನ್ನತ ಅಧಿಕಾರಿಗಳಿಂದ ಹಿಡಿದು ಪಾಲಿಕೆಯ ಉಪ ಆಯುಕ್ತರು, ಕಂದಾಯ ಅಧಿಕಾರಿ, ಸಹ ಕಂದಾಯ ಅಧಿಕಾರಿ, ಮೌಲ್ಯ ಮಾಪಕರು, ಕಂದಾಯ ಪರಿವೀಕ್ಷಕರು/ಕಂದಾಯ ವಸೂಲಿಗಾರರವರೆಗೆ ಎಲ್ಲರೂ ಬೈಗುಳಗಳಿಗೆ ತುತ್ತಾಗುತ್ತಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

‘ಬೆಂಗಳೂರು ಸಿಟಿ ಕಾರ್ಪೊರೇಷನ್, ಬೆಂಗಳೂರು ಮಹಾನಗರ ಪಾಲಿಕೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿ 30 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಇಲ್ಲಿವರೆಗೆ ಇಂಥ ಅಧಿಕಾರಿಯನ್ನು ನೋಡಿಲ್ಲ. ಪಾಲಿಕೆ ಅಧಿಕಾರಿಗಳು, ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಆತ್ಮಸ್ಥೆರ್ಯ ಕುಗ್ಗಿಸಿ ಕೆಲಸ ತೆಗೆದುಕೊಳ್ಳುವ, ಮಾನಸಿಕ ಕಿರುಕುಳ ನೀಡುವ ಅಧಿಕಾರಿಯನ್ನು ಕಂಡಿಲ್ಲ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.