ADVERTISEMENT

ಆನ್‌ಲೈನ್ ಬೆಟ್ಟಿಂಗ್ ಆರೋಪ: ಕಚೇರಿಗೆ ನುಗ್ಗಿ ಪೀಠೋಪಕರಣ ಧ್ವಂಸ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 0:18 IST
Last Updated 6 ಅಕ್ಟೋಬರ್ 2025, 0:18 IST
ಬೆಟ್ಟಿಂಗ್  (ಸಾಂಕೇತಿಕ ಚಿತ್ರ)
ಬೆಟ್ಟಿಂಗ್ (ಸಾಂಕೇತಿಕ ಚಿತ್ರ)   

ಬೆಂಗಳೂರು: ಆನ್‍ಲೈನ್ ಬೆಟ್ಟಿಂಗ್ ದಂಧೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ‘ನಮ್ಮ ಕರ್ನಾಟಕ ಸೇನೆ’ ಸಂಘಟನೆ ಸದಸ್ಯರು ಭಾನುವಾರ ಕೋರಮಂಗಲ ನಾಲ್ಕನೇ ಬ್ಲಾಕ್‍ನಲ್ಲಿರುವ ‘ಗೋಲ್ಡನ್ ಏಸಸ್ ಪೋಕರ್ ರೂಂ’ ಕಂಪನಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿದ್ದಾರೆ.

ಸಂಘಟನೆ ಸದಸ್ಯರು, ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಎಸೆದು ದುಂಡಾವರ್ತಿ ತೋರಿದ್ದಾರೆ. ಅಲ್ಲದೆ, ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಚೇರಿ ಕೆಲಸಗಾರರೊಂದಿಗೆ ಸದಸ್ಯರು ವಾಗ್ವಾದ ನಡೆಸಿದ್ದಾರೆ.

ದಾಳಿ ವೇಳೆ ಕಟ್ಟಡದೊಳಗೆ ಬೆಟ್ಟಿಂಗ್‍ನಲ್ಲಿ ನಿರತರಾಗಿದ್ದ ಗ್ರಾಹಕರು ಕಾಲ್ಕಿತ್ತಿದ್ದಾರೆ.

ADVERTISEMENT

‘ಕಟ್ಟಡದಲ್ಲಿ ಪ್ರತಿ ಭಾನುವಾರ ಕಾನೂನುಬಾಹಿರವಾಗಿ ಆನ್‍ಲೈನ್ ಬೆಟ್ಟಿಂಗ್ ಆಡಿಸಲಾಗುತ್ತಿದೆ. ಬೆಟ್ಟಿಂಗ್‍ನಲ್ಲಿ ಬಡ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಪೊಲೀಸರಿಗೆ ಈ ಅಕ್ರಮ ಗೊತ್ತಿದ್ದರೂ ಹಣದಾಸೆಗೆ ಕಂಪನಿ ವಿರುದ್ಧ ಕ್ರಮ ಜರುಗಿಸಿಲ್ಲ’ ಎಂದು ಸಂಘಟನೆ ಸದಸ್ಯರು ಆರೋಪಿಸಿದರು.

‘ನಮ್ಮ ಕರ್ನಾಟಕ ಸೇನೆ ಸದಸ್ಯರು, ಗೋಲ್ಡನ್ ಏಸಸ್ ಪೋಕರ್ ರೂಂ ಕಂಪನಿ ಕಟ್ಟಡಕ್ಕೆ ಅತಿಕ್ರಮ ಪ್ರವೇಶ ಮಾಡಿ ದಾಂದಲೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಸಂಘಟನೆಯ 10 ಸದಸ್ಯರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ’ ಎಂದು ಕೋರಮಂಗಲ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.