ಪೊಲೀಸ್
ಸಾಂದರ್ಭಿಕ ಚಿತ್ರ
ಬೆಂಗಳೂರು: ಪೊಲೀಸ್ ಅಧಿಕಾರಿ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬೆದರಿಸಿ, ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡುತ್ತಿದ್ದ 16 ಆರೋಪಿಗಳನ್ನು ಎಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಎಚ್ಎಸ್ಆರ್ ಲೇಔಟ್ 27ನೇ ಮುಖ್ಯರಸ್ತೆಯಲ್ಲಿ ನಕಲಿ ಬಿಪಿಎಲ್ ಕಂಪೆನಿ ತೆರೆದು ಜನರಿಗೆ ಕರೆ ಮಾಡಿ ವಂಚಿಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಇನ್‌ಸ್ಪೆಕ್ಟರ್ ಹರೀಶ್ ಕುಮಾರ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. 40ಕ್ಕೂ ಹೆಚ್ಚು ಕಂಪ್ಯೂಟರ್ ಸೇರಿದಂತೆ ಇತರೆ ಉಪಕರಣಗಳನ್ನ ವಶಕ್ಕೆ ಪಡೆದುಕೊಂಡಿದ್ಧಾರೆ.
ಪ್ರಕರಣ ತನಿಖೆಯನ್ನು ಆಗ್ನೇಯ ವಿಭಾಗ ಸೈಬರ್ ಕ್ರೈಂ ಠಾಣೆ ಪೊಲೀಸರು ನಡೆಸುತ್ತಿದ್ಧಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಟ್ಸ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ವಂಚಕರು ಕಳೆದ ಎರಡು ವರ್ಷಗಳ ಹಿಂದೆ ಬಿಪಿಓ ಕಂಪನಿ ತೆರೆದಿದ್ದರು. ಕಟ್ಟಡದ ಎರಡು ಮಹಡಿಗಳಲ್ಲಿ ಒಟ್ಟು 20 ರಿಂದ 25 ಮಂದಿ ಕೆಲಸ ಮಾಡುತ್ತಿದ್ದರು. ಆನ್ ಲೈನ್ ನಲ್ಲಿ ಕೆಲಸವೆಂದು ಹೇಳಿ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಂಡು ಸಾರ್ವಜನಿಕರಿಗೆ ಹೇಗೆ ವಂಚಿಸಬೇಕೆಂದು ತರಬೇತಿ ನೀಡುತ್ತಿದ್ದರು. ಬಳಿಕ ಅಮೆರಿಕ ಸೇರಿ ವಿವಿಧ ದೇಶಗಳ ಪ್ರಜೆಗಳಿಗೆ ರಾತ್ರಿ ವೇಳೆ ಪೊಲೀಸರು ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳ ಸೋಗಿನಲ್ಲಿ ಕರೆ ಮಾಡಿ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬೆದರಿಸಿ ಸಹಾಯ ಮಾಡುವುದಾಗಿ ನಂಬಿಸಿ ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.