ADVERTISEMENT

ನಮ್ಮ ಭೂಮಿ ನಮ್ಮ ಹಕ್ಕು: ಗ್ರಾಮಗಳ ರೈತರು ಒಕ್ಕೊರಲಿನ ಸಂದೇಶ

ಡಾ.ಶಿವರಾಮ ಕಾರಂತ ಬಡಾವಣೆ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 9:49 IST
Last Updated 24 ಮಾರ್ಚ್ 2021, 9:49 IST
ಪ್ರತಿಭಟನಾಕಾರರನ್ನು ಉದ್ದೇಶಿಸಿ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು
ಪ್ರತಿಭಟನಾಕಾರರನ್ನು ಉದ್ದೇಶಿಸಿ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು   

ಬೆಂಗಳೂರು: ಡಾ.ಶಿವರಾಮ ಕಾರಂತ ಬಡಾವಣೆ ಯೋಜನೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೈಬಿಡಬೇಕು ಎಂದು ಒತ್ತಾಯಿಸಿ ಈ ಬಡಾವಣೆಗೆ ಗೊತ್ತುಪಡಿಸಿರುವ ಗ್ರಾಮಗಳ ನಿವಾಸಿಗಳು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ನಮ್ಮ ಭೂಮಿ ನಮ್ಮ ಹಕ್ಕು. ನಮ್ಮ ಇಚ್ಛೆಗೆ ವಿರುದ್ದವಾಗಿ ಜಮೀನು ಕಿತ್ತುಕೊಳ್ಳಲು ಬಿಡುವುದಿಲ್ಲ ಎಂದು ಈ ಗ್ರಾಮಗಳ ರೈತರು ಒಕ್ಕೊರಲಿನ ಸಂದೇಶ ಸಾರಿದರು.

ಅರಮನೆ ಮೈದಾನದ ಗೇಟ್ ನಂಬರ್ 9 ರಿಂದ ಬಿಡಿಎ ಕೇಂದ್ರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ರೈತರು ಉದ್ದೇಶಿಸಿದ್ದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ಬಿಡಿಎ ಕೇಂದ್ರ ಕಚೇರಿ ಬಳಿ ಬ್ಯಾರಿಕೇಡ್ ಅಳವಡಿಸಿ ಪ್ರತಿಭಟನಾಕಾರರನ್ನು ತಡೆದರು.

ADVERTISEMENT

ಬಳಿಕ ರೈತರು ಮೌರ್ಯ ವೃತ್ತದಲ್ಲಿ ಪ್ರತಿಭಟನೆ ಮುಂದುವರಿಸಿದರು.

ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, 'ಜನ ನ್ಯಾಯ ಕೇಳಲು ಬಂದಾಗ ಪೊಲೀಸರನ್ನು ಮುಂದೆ ಬಿಟ್ಟು ತಡೆಯುತ್ತೀರಾ. ಇದಾ ನಿಮ್ಮ ಪ್ರಜಾಪ್ರಭುತ್ವ. ಈ ಪ್ರವೃತ್ತಿ ಮುಂದುವರಿಸಿದರೆ ನಿಮ್ಮ ಗುಂಡಿಯನ್ನು ನೀವೇ ತೋಡಿಕೊಂಡಂತೆ' ಎಂದು ಎಚ್ಚರಿಕೆ ನೀಡಿದರು.

ಸುಪ್ರಿಂ ಕೋರ್ಟ್ 2018ರಲ್ಲಿ ನ್ಯಾ. ಕೇಶವನಾರಾಯಣ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಅದರ ವರದಿ ಏನಾಯಿತು ಎಂದು ಪ್ರಶ್ನಿಸಿದರು.

'ಬಿಡಿಎ ಸುಪ್ರೀಂ ಕೋರ್ಟ್‌ನ ದಾರಿ ತಪ್ಪಿಸಿ ದೊಡ್ಡ ತಪ್ಪು ಮಾಡಿದೆ. ಸುಪ್ರೀಂ ಕೋರ್ಟ್ ಕೂಡಾ ರೈತರ ಅರ್ಜಿಯನ್ನು ಪರಿಗಣಿಸಲೇ ಇಲ್ಲ. ಇದರಿಂದ ಸರ್ಕಾರ ನಡೆಸಿದ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಸಿಗಲಿದೆ' ಎಂದರು.

'ನಾವು ಪ್ರಸ್ತುತ ಸುಪ್ರೀಂ ಕೋರ್ಟ್ ರಚಿಸಿರುವ ನ್ಯಾ.ಚಂದ್ರಶೇಖರ ಸಮಿತಿಯ ಪರವಾಗಿಯೂ ಇಲ್ಲ ವಿರುದ್ಧವಾಗಿಯೂ ಇಲ್ಲ. ಸಮಿತಿ ನನಗೂ ನೋಟಿಸ್ ಜಾರಿ ಮಾಡಿದೆ. ಇದಕ್ಕೆ ಉತ್ತರಿಸಲು ಸಿದ್ಧ'. 'ಈ ಬಡಾವಣೆ ನಿರ್ಮಾಣವಾದರೆ ರೈತರಿಗೆ ಅನ್ಯಾಯವಾಗುತ್ತದೆ. ಇದನ್ನು ಕೈಬಿಡಿ ಎಂದಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇವೆ' ಎಂದರು.

ಶಾಸಕ ವಿಶ್ವನಾಥ್ ವಿರುದ್ಧ ಹರಿಹಾಯ್ದ ಚಂದ್ರಶೇಖರ್, 'ಅವರು ಬಿಡಿಎ ಅಧ್ಯಕ್ಷರಾಗುವ ಮುನ್ನ ಈ ಬಡಾವಣೆ ಬಗ್ಗೆ ಒಂದು ನಿಲುವು ಹೊಂದಿದ್ದರು. ಈಗ ಬೇರೆಯೇ ರೀತಿ ಮಾತನಾಡುತ್ತಿದ್ದಾರೆ' ಎಂದರು.
'ಈ ಪ್ರತಿಭಟನೆ ಯಶಸ್ವಿ ಆಗಬಾರದು ಎಂಬ ಕಾರಣಕ್ಕೆ ಗ್ರಾಮಗಳಿಗೆ ಪೊಲೀಸರನ್ನು ರಾತ್ರೊ ರಾತ್ರಿ ಕಳುಹಿಸಿ ವಶಕ್ಕೆ ಪಡೆದಿದ್ದಾರೆ. ಇವತ್ತು ಪ್ರತಿಭಟನಾಕಾರರಿಗೆ ಊಟದ ವ್ಯವಸ್ಥೆ ಕಲ್ಪಿಸಿದ ಸ್ಥಳೀಯ ಮುಖಂಡ ಸೀತಾರಾಮ್ ಅವರನ್ನು ಬಂಧಿಸಿದ್ದಾರೆ. ಇದು ಯಾವ ನ್ಯಾಯ' ಎಂದು ಪ್ರಶ್ನಿಸಿದರು.

ಸ್ಥಳೀಯ ಮುಖಂಡ ಬೆಟ್ಟಹಳ್ಳಿ ವೆಂಕಟೇಶ್ ಮಾತನಾಡಿ, 'ಬಿಡಿಎ ಅಧಿಕಾರಿಗಳು ಒಂದು ಪ್ರಕಟಣೆ ಹೊರಡಿಸಿ ಈ ಗ್ರಾಮಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನೀಡಿದ್ದ ಮಂಜೂರಾತಿಗಳನ್ನು ರದ್ದುಪಡಿಸಿದ್ದೇವೆ ಎಂದು ಹೇಳಿದ್ದಾರೆ. ಹಾಗಾದರೆ ಆ ಮಂಜೂರಾತಿ ನೀಡಿದ್ದ ಅಧಿಕಾರಿಗಳ ಸಂಬಳ ಮತ್ತು ಭತ್ಯೆಯನ್ನೂ ಹಿಂದಕ್ಕೆ ಪಡೆಯುತ್ತೀರಾ' ಎಂದು ಪ್ರಶ್ನಿಸಿದರು.

ಚರ್ಚೆಗೆ ಕರೆದ ಮುಖ್ಯಮಂತ್ರಿ: ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತುಕತೆಗೆ ಆಹ್ವಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.