ADVERTISEMENT

ಸಮಯೋಚಿತ ಓದಿನಿಂದ ಪರೀಕ್ಷೆ ಸಲೀಸು: ಶಾಸಕ ಆರ್. ಮಂಜುನಾಥ್

ದಾಸರಹಳ್ಳಿಯಲ್ಲಿ ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್‌ನ ‘ಮಾಸ್ಟರ್ ಮೈಂಡ್’ ವಿಶೇಷ ಸಂಚಿಕೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 20:18 IST
Last Updated 7 ಮಾರ್ಚ್ 2023, 20:18 IST
ಕಾಳ ಸ್ತ್ರೀ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಪ್ರಜಾವಾಣಿ----’– ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಸಮೂಹ ಆರಂಭಿಸಿರುವ ‘ಮಾಸ್ಟರ್ ಮೈಂಡ್’ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು.
ಕಾಳ ಸ್ತ್ರೀ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ‘ಪ್ರಜಾವಾಣಿ----’– ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಸಮೂಹ ಆರಂಭಿಸಿರುವ ‘ಮಾಸ್ಟರ್ ಮೈಂಡ್’ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು.   

ಪೀಣ್ಯ ದಾಸರಹಳ್ಳಿ: 'ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ ಸಮಯೋಚಿತವಾಗಿ ಓದಬೇಕು. ಪರೀಕ್ಷೆ ಸಂದರ್ಭದಲ್ಲಿ ಓದಿನ ಜೊತೆಗೆ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಆಗ ಮಾತ್ರ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಬಹುದು' ಎಂದು ಶಾಸಕ ಆರ್. ಮಂಜುನಾಥ್ ಸಲಹೆ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗುರಿಯಾಗಿಸಿಕೊಂಡು ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಪತ್ರಿಕಾ ಸಮೂಹದ ವಿಶೇಷ ಸಂಚಿಕೆಯನ್ನು ದಾಸರಹಳ್ಳಿ ಕಾಳಸ್ತ್ರೀ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಬಿಡುಗಡೆ ಮಾಡಿದರು. ನಂತರ ‘ಪ್ರಜಾವಾಣಿ’ ಆಯೋಜಿಸಿದ್ದ, ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಬೋಧನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ತಾತನ ಕಾಲದಿಂದ ಪ್ರಜಾವಾಣಿ ಸಾಮಾಜಿಕ ಕಳಕಳಿಯೊಂದಿಗೆ ಪ್ರಕಟವಾಗುತ್ತಾ ಬಂದಿದೆ. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಹೊರತಂದಿರುವ ಮಾಸ್ಟರ್ ಮೈಂಡ್ ಸಂಚಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ' ಎಂದು ತಿಳಿಸಿದರು.

ADVERTISEMENT

‘ಪ್ರಜಾವಾಣಿ’ ಪತ್ರಿಕೆಯ ಮುಖ್ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಮಾತನಾಡಿ, 'ನಗೆಯನ್ನು ಡೌನ್‌ಲೋಡ್ ಮಾಡಬೇಕು, ಹಗೆಯನ್ನು ಡಿಲೀಟ್ ಮಾಡಬೇಕು. ಅಂದರೆ ನಕಾರಾತ್ಮಕ ಸುದ್ದಿಗಳನ್ನು ಡಿಲೀಟ್ ಮಾಡಬೇಕು' ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

'1948 ರಲ್ಲಿ ಆರಂಭಗೊಂಡ ಪ್ರಜಾವಾಣಿ ಪತ್ರಿಕೆ 75 ವರ್ಷಗಳಿಂದ ನಿಜವಾಗಿ ಪ್ರಜೆಗಳ ವಾಣಿಯಾಗಿ ಕೆಲಸ ಮಾಡುತ್ತಾ ಬಂದಿದೆ. ಸಾಮಾಜಿಕ ಕಳಕಳಿಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲೆಂದು ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳು, ಮಾಸ್ಟರ್ ಮೈಂಡ್ ವಿಶೇಷ ಸಂಚಿಕೆಯನ್ನು ಪ್ರಕಟಿಸಿವೆ. ಮುಂಬರುವ ಜೂನ್ 1 ರಿಂದ ಶಾಲಾ ಆವೃತ್ತಿ ಆರಂಭವಾಗಲಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪ್ರಶ್ನೋತ್ತರಗಳನ್ನು ನೀಡಲಾಗುತ್ತಿದೆ' ಎಂದು ತಿಳಿಸಿದರು.

ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಅವರ ತಂಡದ ಡಾ.ಎಲ್. ಸವಿತಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಂದರ್ಭದಲ್ಲಿ ಉಪಯೋಗವಾಗುವಂತಹ ಪ್ರೇರಣಾತ್ಮಕ ಉಪನ್ಯಾಸ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥ್ ನಾರಾಯಣ್, ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಶಿಕ್ಷಣ ನೀಡಿ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ಮುಖ್ಯ ಶಿಕ್ಷಕ ಜಿ.ಎಸ್. ಬಾಲಕೃಷ್ಣ, ಎಸ್ ಡಿಎಂಸಿ ಅಧ್ಯಕ್ಷೆ ಲತಾ ಕುಂದರಗಿ, ಸಹ ಶಿಕ್ಷಕ ದೇವರಾಜು ಕೆಎಸ್, ದಾಸರಹಳ್ಳಿ ವಾರ್ಡ್ ಜೆಡಿಎಸ್ ಅಧ್ಯಕ್ಷ ತಮ್ಮಣ್ಣ ಅವರೂ ಇದ್ದರು. ಶಾಲೆಯ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

*

ನಾವು ಓದಿ ಹೇಗೆ ಸಾಧನೆ ಮಾಡಬೇಕು ಎಂಬುದನ್ನು ಶಿಕ್ಷಣ ತಜ್ಞರಾದ ಸವಿತಾ ಮೇಡಂ ವಿವರಿಸಿದ್ದಾರೆ. ಅದರ ಜೊತೆಗೆ ‘ಮಾಸ್ಟರ್ ಮೈಂಡ್’ ಆವೃತ್ತಿಯನ್ನು ಓದುವುದರಿಂದ ಮುಂದೆ ದೊಡ್ಡ ಹುದ್ದೆಗಳನ್ನು ಪಡೆಯಬಹುದು.
-ವರುಣ್, 10ನೇ ತರಗತಿ

*
ಜೀವನದಲ್ಲಿ ನಾವು ಹೇಗೆ ಪರೀಕ್ಷೆಗಳನ್ನು ಎದುರಿಸಬೇಕು, ಹೇಗೆ ಓದಬೇಕು ಎಂಬುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೇಗೆ ತಯಾರಿ ಮಾಡಿಕೊಳ್ಳಬೇಕೆಂದು ‘ಮಾಸ್ಟರ್ ಮೈಂಡ್’ ದಾರಿ ತೋರುತ್ತದೆ.
-ಬಿಂದಿಯಾ, ಹತ್ತನೇ ತರಗತಿ

*
‘ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್’ ತಂದಿರುವ ‘ಮಾಸ್ಟರ್ ಮೈಂಡ್’ ಸಂಚಿಕೆ ವಿದ್ಯಾರ್ಥಿಗಳಿಗೆ ಐಪಿಎಸ್, ಐಎಎಸ್, ಕೆಎಎಸ್, ಎಸ್‌ಡಿಸಿ, ಎಫ್‌ಡಿಸಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ.
-ಬಾಲಕೃಷ್ಣ ಜಿ.ಎಸ್, ಮುಖ್ಯ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.