
ಟಬೂಬಿಯಾ ರೋಸಿಯಾ
ಪ್ರಜಾವಾಣಿ ಚಿತ್ರ
ಬೆಂಗಳೂರಿಗರಿಗೆ ಈಗ ‘ಪಿಂಕ್ ಪೋಯಿ’ ಕಣ್ತುಂಬಿಕೊಳ್ಳುವ ಕಾಲ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದರೆ ಒಮ್ಮೆ ಕಣ್ಣೆತ್ತಿ ನೋಡುವ ಹಂಬಲ. ನೆಲಕ್ಕೆ ಬಿದ್ದ ಹೂಗಳ ರಾಶಿಯಲ್ಲಿ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳುವ ಸಂಭ್ರಮ. ಡ್ರೋನ್ ಹಾರಿಸಿ ವಿಡಿಯೊ ಮಾಡಿ, ಕ್ಯಾಮೆರಾಗಳ ಕಣ್ಣಲ್ಲಿ 'ಪಿಂಕ್ ಪೋಯಿ' ಸೌಂದರ್ಯವನ್ನು ಸೆರೆಹಿಡಿಯುವವರು ಒಂದೆಡೆಯಾದರೆ, ತರಹೇವಾರಿ ಹಾಡುಗಳನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವವರ ಸಂಖ್ಯೆಗೇನೂ ಕಡಿಮೆಯಿಲ್ಲ.
'ಉದ್ಯಾನ ನಗರಿ' ಎಂದೇ ಹೆಸರಾಗಿರುವ ಬೆಂಗಳೂರಿನಲ್ಲಿ ಈಗ ಗುಲಾಬಿ ಬಣ್ಣದ ಹೂವುಗಳ ಹಬ್ಬ. ಪುಷ್ಪ ಲೋಕದ ಸುಂದರಿ ‘ಪಿಂಕ್ ಪೋಯಿ’ ಹೆಸರಿನ 'ಟಬೂಬಿಯಾ ರೋಸಿಯಾ' ನಗರದ ಅಂದವನ್ನು ಹೆಚ್ಚಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಸೂರ್ಯನ ಎಳೆ ಬಿಸಿಲಿನಲ್ಲಂತೂ ಇನ್ನಷ್ಟು ಸುಂದರವಾಗಿ ಕಾಣುತ್ತಿವೆ.
ಒಂದು ಶತಮಾನಕ್ಕೂ ಮುಂಚೆ ಭಾರತಕ್ಕೆ ಬಂದ ದಕ್ಷಿಣ ಅಮೆರಿಕ ಮೂಲದ ಟಬೂಬಿಯಾ ಜಾತಿಯ ಮರಗಳು ಈಗ ಭಾರತದ್ದೇ ಆಗಿಹೋಗಿವೆ. ಸಾಮಾನ್ಯವಾಗಿ ಜನವರಿ ಕೊನೆಯ ವಾರದಿಂದ ಮಾರ್ಚ್‌ವರೆಗೆ ಈ ಹೂವುಗಳು ಅರಳಲು ಆರಂಭವಾಗುತ್ತವೆ. 30 ರಿಂದ 50 ಅಡಿ ತನಕ ಬೆಳೆಯುವ ಈ ಮರಗಳಲ್ಲಿ ಫೆಬ್ರುವರಿ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹೂಗಳು ಅರಳಿ ನಗರವನ್ನು ಸುಂದರಗೊಳಿಸುತ್ತಿವೆ.
ಗೊಂಚಲು ಗೊಂಚಲಾಗಿ ಬಿಡುವ ಹೂಗಳು ದಿನಕಳೆದಂತೆ ಮಾಗಿ ತಿಳಿ ಗುಲಾಬಿ ಬಣ್ಣಕ್ಕೆ ತಿರುಗಿ ಉದುರುತ್ತವೆ. ಟಬೂಬಿಯಾ ‘ಬಿಗ್ನೋನಿಯೇಸಿ’ ಕುಟುಂಬಕ್ಕೆ ಸೇರಿದ ಪುಷ್ಪ.
ಈ ಹೂವುಗಳು 'ಟ್ರಂಪೆಟ್' ಎಂಬ ಸಂಗೀತ ವಾದ್ಯದಂತೆಯೂ ಕಾಣುವುದಕ್ಕೆ 'ಪಿಂಕ್ ಟ್ರಂಪೆಟ್' ಎಂತಲೂ ಕರೆಯುತ್ತಾರೆ.
ಗುಲಾಬಿ ಬಣ್ಣದ ಟಬೂಬಿಯಾ
ಸುಂದರ ಬೆಂಗಳೂರಿಗೆ ಎಸ್.ಜಿ. ನೇಗಿನಹಾಳ ಅವರ ಕೊಡುಗೆ
ಬೆಂಗಳೂರಿನ ಅತಿದೊಡ್ಡ ಹಸಿರು ಅಭಿಯಾನಕ್ಕೆ ನಾಂದಿ ಹಾಡಿದವರು ಎಸ್.ಜಿ. ನೇಗಿನಹಾಳ ಅವರು.
ಬ್ರಿಟಿಷರ ಕಾಲದಲ್ಲಿ ಜಾನ್ ಕ್ಯಾಮರೂನ್ ಮತ್ತು ಕೃಂಬಿಗಲ್ ಅವರು ಬೆಂಗಳೂರಿನ ಹವಾಮಾನಕ್ಕೆ ಹೊಂದಿಕೆಯಾಗುತ್ತವೆ ಎಂದು ಈ ಮರಗಳನ್ನು ವಿದೇಶದಿಂದ ತರಿಸಿ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್‌ನಲ್ಲಿ ನೆಟ್ಟಿದ್ದರು.
ನಂತರ 1980ರ ದಶಕದಲ್ಲಿ ಐಎಫ್‌ಎಸ್ ಅಧಿಕಾರಿ ಎಸ್.ಜಿ ನೇಗಿನಹಾಳ ಅವರು ನಗರದಾದ್ಯಂತ ರಸ್ತೆ ಬದಿಗಳಲ್ಲಿ ಟಬೂಬಿಯಾ ಗಿಡಗಳನ್ನು ಬೃಹತ್ ಸಂಖ್ಯೆಯಲ್ಲಿ ನೆಟ್ಟಿದ್ದರು. ಹೀಗಾಗಿ ಆಧುನಿಕ ಬೆಂಗಳೂರನ್ನು ಹಸಿರುಮಯವಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
1980-90ರ ದಶಕವದು. ನಗರದಲ್ಲಿ ಜನಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿತ್ತು. ಹೊಸ ಬಡಾವಣೆಗಳು ತಲೆಯೆತ್ತುತ್ತಿದ್ದವು. ನಗರ ಬೆಳೆಯುತ್ತಿದ್ದಂತೆ ರಸ್ತೆ ಅಗಲೀಕರಣ, ಫ್ಲೈ ಓವರ್‌ಗಳ ನಿರ್ಮಾಣದ ಸಂದರ್ಭದಲ್ಲಿ ನೂರಾರು ಮರಗಳು ನೆಲಕಚ್ಚಿದ್ದವು. ಕಾಂಕ್ರೀಟ್ ಕಾಡಿನಲ್ಲಿ ಗಿಡಗಳು ಉಸಿರುಕಟ್ಟುವಿಕೆಯನ್ನು ಅನುಭವಿಸುತ್ತಿದ್ದವು. ಅರಣ್ಯ ಅಧಿಕಾರಿಗಳು ತರಹೇವಾರಿ ಗಿಡಗಳನ್ನು ನೆಟ್ಟರೂ ಅವು ಸರಿಯಾದ ಸಂರಕ್ಷಣೆಯ ಕೊರತೆಯಿಂದ ಒಣಗಿ ತಿಂಗಳಿನಲ್ಲೇ ಸಾಯುತ್ತಿದ್ದವು. ಆಗ ಗಿಡಗಳನ್ನು ನೆಡುವ ಕಾರ್ಯ ಆರಂಭಿಸಿದವರೇ ಸೇತುರಾಮ್ ಗೋಪಾಲರಾವ್ ನೇಗಿನಹಾಳ (ಎಸ್.ಜಿ ನೇಗಿನಹಾಳ). ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಇವರು, ಮಣ್ಣಿನ ಗುಣವನ್ನು ಅರಿತು ಯಾವ ಗಿಡಗಳನ್ನು ನೆಡಬಹುದು ಎಂದು ಪರಿಶೀಲಿಸಿದ್ದರು. ಆಗ ಅವರು ಆಯ್ಕೆ ಮಾಡಿಕೊಂಡಿದ್ದೇ ಟಬೂಬಿಯಾ ರೋಸಿಯಾ ಗಿಡಗಳನ್ನು. ಬಿದಿರು ಮತ್ತು ತಂತಿ ಬಲೆಗಳ ಮೂಲಕ ಗಿಡಗಳಿಗೆ ರಕ್ಷಣೆ ಒದಗಿಸಿ ಸಂರಕ್ಷಿಸುತ್ತಿದ್ದರು. ನಂತರದ ದಿನಗಳಲ್ಲಿ ಅವರ ಗಿಡ ನೆಡುವ ಪ್ರವೃತ್ತಿ ಮುಂದುವರಿದಿತ್ತು. 5 ವರ್ಷ ನಗರದ ವಿವಿಧ ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡುತ್ತಿದ್ದರು. ಸದಾ ಜನಜಂಗುಳಿ, ವಾಹನ ಓಡಾಟ ಇರುತ್ತಿದ್ದ ರಸ್ತೆಗಳಲ್ಲಿ ರಾತ್ರಿ ಸಮಯದಲ್ಲಿ ಗಿಡನೆಡುವ ಕೆಲಸ ಮಾಡುತ್ತಿದ್ದರು. ಈ ಅವಧಿಯಲ್ಲಿ ಬೆಂಗಳೂರಿನಾದ್ಯಂತ 15 ಲಕ್ಷ ಗಿಡಗಳನ್ನು ಅವರು ನೆಟ್ಟಿದ್ದರು. ಅದರ ಪರಿಣಾಮ ಈಗ ಚಳಿಗಾಲ ಮುಗಿಯುತ್ತಿದ್ದಂತೆ ಮರಗಳಲ್ಲಿ ಹೂವುಗಳು ಬಿಡಲು ಆರಂಭವಾಗುತ್ತವೆ. ಈ ಮೂಲಕ ನಗರದ ಅಂದ ಇಮ್ಮಡಿಗೊಳ್ಳುತ್ತದೆ.
ಗುಲಾಬಿ ಬಣ್ಣದ ಟಬೂಬಿಯಾ
ಎಲ್ಲೆಲ್ಲಿ ಈ ಟಬೂಬಿಯಾ ಮರಗಳನ್ನು ಹೆಚ್ಚಾಗಿ ಕಾಣಬಹುದು ಎಂದರೆ...
ಕಬ್ಬನ್ ಪಾರ್ಕ್: ಹೈಕೋರ್ಟ್ ಮತ್ತು ಲೈಬ್ರರಿ ಮುಂಭಾಗದಲ್ಲಿ ಅದ್ಭುತವಾಗಿ ಕಾಣುತ್ತವೆ.
ಲಾಲ್‌ಬಾಗ್: ಇಲ್ಲಿ ಹಳೆಯ ಮತ್ತು ಬೃಹತ್ ಮರಗಳಿವೆ.
ಜಯನಗರ ಮತ್ತು ಬಸವನಗುಡಿ: ಇಲ್ಲಿನ ರಸ್ತೆ ಬದಿಗಳಲ್ಲಿ ಗುಲಾಬಿ ಬಣ್ಣದ ಹೂವುಗಳು ಕಣ್ಮನ ಸೆಳೆಯುತ್ತವೆ.
HSR ಲೇಔಟ್ ಮತ್ತು ಕೋರಮಂಗಲ: ಇಲ್ಲಿನ ರಸ್ತೆ ಬದಿಗಳಲ್ಲಿ ಈ ಹೂವುಗಳು ಸಾಲಾಗಿ ಅರಳಿವೆ.
ಬೆಂಗಳೂರಿನ ಇನ್ನೂ ಕೆಲವು ರಸ್ತೆಗಳಲ್ಲಿ ಟಬೂಬಿಯಾ ಮರಗಳಿದ್ದು, ನಗರದ ಸೌಂದರ್ಯ ಹೆಚ್ಚಿಸುತ್ತಿವೆ.
ಹಳದಿ ಬಣ್ಣದ ಟಬೂಬಿಯಾ
ಹಳದಿ ಬಣ್ಣದ ಟಬೂಬಿಯಾಗಳ ಆಕರ್ಷಣೆ
ಟಬೂಬಿಯಾ ಕೇವಲ ಗುಲಾಬಿ ಬಣ್ಣದಲ್ಲಿ ಮಾತ್ರವಲ್ಲ. ಹಳದಿ ಬಣ್ಣದ ಹೂವುಗಳೂ ಇವೆ. ಅದು ಪ್ರತ್ಯೇಕ ಜಾತಿಯ ಮರವಾಗಿದೆ. ಇದನ್ನು ಟಬೂಬಿಯಾ ಅರ್ಜೆಂಟಿಯಾ (ಸಿಲ್ವರ್ ಟ್ರಂಪೆಟ್ ಟ್ರೀ) ಎಂದು ಕರೆಯಲಾಗುತ್ತದೆ. ಎಲೆಗಳೇ ಇಲ್ಲವೆನೋ ಎಂಬಂತೆ ಮರದ ತುಂಬಾ ಹಳದಿ ಗೊಂಚಲುಗಳೇ ಕಾಣುವ ಈ ಟಬೂಬಿಯಾಗಳೂ ಬೆಂಗಳೂರಿನ ಸೌಂದರ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ.