ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ನಗರದ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಆರೋಪಿಗಳ ಪರವಾಗಿ ವರದಿ ಸಲ್ಲಿಸಲು ₹ 1 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ, ಠಾಣೆಯ ಪಿಎಸ್‌ಐ ಮತ್ತು ಪಿಐ ಅನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಆವಲಹಳ್ಳಿ ನಿವಾಸಿ ಕೇಶವಮೂರ್ತಿ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರಲ್ಲಿ, ಅವರ ಹೆಸರನ್ನು ಕೈಬಿಡಲು ಪಿಐ ಶಿವಾಜಿ ರಾವ್ ಮತ್ತು ಪಿಎಸ್‌ಐ ಶಿವಾನಂದ ಜಿ. ಅವರು ₹6 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಕೇಶವಮೂರ್ತಿ ಅವರು ಲೋಕಾಯಕ್ತ ಪೊಲೀಸರಿಗೆ ದೂರು ನೀಡಿದ್ದರು.
ಲೋಕಾಯುಕ್ತ ಡಿವೈಎಸ್‌ಪಿ ಗಿರೀಶ್ ಅವರ ಮಾರ್ಗದರ್ಶನದಂತೆ ಕಾರ್ಯಾಚರಣೆ ರೂಪಿಸಲಾಗಿತ್ತು. ಲೋಕಾಯುಕ್ತ ಪೊಲೀಸರ ಸೂಚನೆಯಂತೆ ಕೇಶವಮೂರ್ತಿ ಅವರು ಕೆಂಪೇಗೌಡ ನಗರ ಪೊಲೀಸ್ ಠಾಣೆಯ ಬಳಿಯಲ್ಲೇ ಪಿಐ ಮತ್ತು ಪಿಎಸ್‌ಐಗೆ ₹ 1 ಲಕ್ಷ ನೀಡಿದ್ದರು.
ಈ ವೇಳೆಯೇ ದಾಳಿ ನಡೆಸಿ, ಇಬ್ಬರನ್ನೂ ಬಂಧಿಸಿದರು. ₹1 ಲಕ್ಷ ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.