ADVERTISEMENT

ರಾತ್ರಿ ಕರ್ಫ್ಯೂ; ಅಲ್ಲಲ್ಲಿ ಬ್ಯಾರಿಕೇಡ್: ಮೇಲ್ಸೇತುವೆಗಳಲ್ಲಿ ಸಂಚಾರ ಬಂದ್‌

ವಾಹನ ಸವಾರರಿಗೆ ಪೊಲೀಸರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 22:12 IST
Last Updated 10 ಏಪ್ರಿಲ್ 2021, 22:12 IST
ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದರೂ ಪಿಇಎಸ್‌ ಕಾಲೇಜಿನ ವೀರಭದ್ರನಗರ ಸಿಗ್ನಲ್‌ ಸಮೀಪ ಅನಗತ್ಯವಾಗಿ ತಿರುಗಾಡುತ್ತಿದ್ದವರನ್ನು ಪೊಲೀಸ್‌ ಸಿಬ್ಬಂದಿ ಶನಿವಾರ ರಾತ್ರಿ ತಡೆದು ವಿಚಾರಿಸಿದರು –ಪ್ರಜಾವಾಣಿ ಚಿತ್ರ
ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದರೂ ಪಿಇಎಸ್‌ ಕಾಲೇಜಿನ ವೀರಭದ್ರನಗರ ಸಿಗ್ನಲ್‌ ಸಮೀಪ ಅನಗತ್ಯವಾಗಿ ತಿರುಗಾಡುತ್ತಿದ್ದವರನ್ನು ಪೊಲೀಸ್‌ ಸಿಬ್ಬಂದಿ ಶನಿವಾರ ರಾತ್ರಿ ತಡೆದು ವಿಚಾರಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಶನಿವಾರದಿಂದಲೇ ನಗರದಲ್ಲಿ ರಾತ್ರಿ ಕರ್ಫ್ಯೂ ಜಾರಿಯಾಗಿದ್ದು, ಮೊದಲ ದಿನ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಗಸ್ತು ತಿರುಗಿದರು. ವಾಹನಗಳು ಸಂಚರಿಸದಂತೆ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿದ್ದು ಕಂಡುಬಂತು.

ಮೊದಲ ದಿನ ಎಚ್ಚರಿಕೆ: ರಾತ್ರಿ ಕರ್ಫ್ಯೂ ಜಾರಿ ಬಗ್ಗೆ ಮಾಹಿತಿ ಇದ್ದರೂ ಹಲವರು ರಾತ್ರಿ 10 ಗಂಟೆ ನಂತರವೂ ನಗರ
ದಲ್ಲಿ ಸಂಚರಿಸುತ್ತಿದ್ದರು. ಅವರನ್ನು ತಡೆದಿದ್ದ ಪೊಲೀಸರು, ಎಚ್ಚರಿಕೆ ನೀಡಿ ಕಳುಹಿಸಿದರು. ಮಾಸ್ಕ್‌ ಧರಿಸದ ಕೆಲವರಿಗೆ ದಂಡವನ್ನೂ ವಿಧಿಸಿದರು. ಏಪ್ರಿಲ್ 20ರವರೆಗೆ ರಾತ್ರಿ 10 ಗಂಟೆಯಿಂದ ಮರುದಿನ ನಸುಕಿನ 5 ಗಂಟೆಯವರೆಗೂ ಕರ್ಫ್ಯೂ ಜಾರಿಯಲ್ಲಿರಲಿದೆ.

ಹೆಚ್ಚು ಜನ ಸೇರುವ ಮೆಜೆಸ್ಟಿಕ್‌, ತುಮಕೂರು ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಬಳ್ಳಾರಿ ರಸ್ತೆಗಳಲ್ಲಿ ಪೊಲೀಸರು ಶನಿವಾರ ಬಿಗಿ ಬಂದೋಬಸ್ತ್‌ ಕೈಗೊಂಡಿದ್ದರು. ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಕಮರ್ಷಿಯಲ್‌ ಸ್ಟೀಟ್‌, ಇಂದಿರಾನಗರ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿದ್ದ ಹೋಟೆಲ್‌ಗಳು, ಪಬ್‌, ಬಾರ್, ರೆಸ್ಟೋರೆಂಟ್‌ಗಳು ರಾತ್ರಿ 10 ಗಂಟೆಗೆ ಬಂದ್ ಆಗಿದ್ದವು. ಪೊಲೀಸರು ಈ ಪ್ರದೇಶಗಳಲ್ಲಿ ವಿಶೇಷವಾಗಿ ಪರಿಶೀಲನೆ ನಡೆಸಿದರು. ಅನಗತ್ಯವಾಗಿ ವಾಹನ ನಿಲ್ಲಿಸಿಕೊಂಡಿದ್ದ ವಾಹನ ಚಾಲಕರನ್ನು ಸ್ಥಳದಿಂದ ಕಳುಹಿಸಿದರು.

ADVERTISEMENT

ಚಿಕ್ಕಪೇಟೆ, ಬಳೇಪೇಟೆ, ಉಪ್ಪಾರಪೇಟೆ, ಕಾಟನ್‌ಪೇಟೆ, ಕೆ.ಆರ್‌.ಮಾರುಕಟ್ಟೆ, ಎಸ್‌.ಪಿ. ರಸ್ತೆ ಹಾಗೂ ಸುತ್ತಮುತ್ತಲ ಸ್ಥಳಗಳಲ್ಲೂ ಪೊಲೀಸರು ವಿಶೇಷ ನಿಗಾ ವಹಿಸಿದ್ದರು. ಕಾರ್ಪೋರೇಷನ್ ವೃತ್ತ, ಹೆಬ್ಬಾಳ, ಇಂದಿರಾನಗರ, ಪಶ್ಚಿಮ ಕಾರ್ಡ್ ರಸ್ತೆ, ಮಾಗಡಿ ರಸ್ತೆ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ನಿಲ್ಲಿಸಿ ಪೊಲೀಸರು ವಾಹನಗಳ ಪರಿಶೀಲನೆ ನಡೆಸಿದರು.

ತುರ್ತು ಸೇವೆ ಸಲ್ಲಿಸುವ ಹಾಗೂ ಕಚೇರಿಗೆ ಹೊರಟಿದ್ದ ವ್ಯಕ್ತಿಗಳ ಗುರುತಿನ ಚೀಟಿ ಪರಿಶೀಲಿಸಿ ಬಿಟ್ಟು ಕಳುಹಿಸಿದರು.

ಮೇಲ್ಸೇತುವೆಗಳಲ್ಲಿ ಸಂಚಾರ ಬಂದ್: ಮೆಜೆಸ್ಟಿಕ್ ಬಳಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ, ಮೈಸೂರು ರಸ್ತೆಯ ಬಿಜಿಎಸ್ ಮೇಲ್ಸೇತುವೆ, ಹೆಬ್ಬಾಳ ಮೇಲ್ಸೇತುವೆ, ರಿಚ್ಮಂಡ್ ವೃತ್ತದ ಮೇಲ್ಸೇತುವೆ, ತುಮಕೂರು ರಸ್ತೆಯ ಹಾಗೂ ಸುತ್ತಮುತ್ತಲ ಪ್ರಮುಖ ಮೇಲ್ಸೇತುವೆಗಳಲ್ಲಿ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ.

ಮೇಲ್ಸೇತುವೆ ಆರಂಭವಾಗುವ ಹಾಗೂ ಅಂತ್ಯಗೊಳ್ಳುವ ಸ್ಥಳಗಳಲ್ಲಿ ರಸ್ತೆಗೆ ಅಡ್ಡವಾಗಿ ಬ್ಯಾರಿಕೇಡ್‌ಗಳನ್ನು ನಿಲ್ಲಿಸಲಾಗಿತ್ತು. ಸಂಚಾರ ಪೊಲೀಸರು, ವಾಹನಗಳು ಹೋಗದಂತೆ ತಡೆದರು. ಕೆಲವರ ವಾಹನಗಳಲ್ಲಿ ಜಪ್ತಿ ಸಹ ಮಾಡಿದರು.

ಎರಡು ಬದಿಯ ಸಂಚಾರಕ್ಕೆ ಅವಕಾಶವಿದ್ದ ರಸ್ತೆಗಳಲ್ಲಿ, ಒಂದು ಬದಿಯಲ್ಲಿ ಮಾತ್ರ ತುರ್ತು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಹಗಲಿನಲ್ಲೇ ಮಾಹಿತಿ ನೀಡಿದ ‘ಹೊಯ್ಸಳ’ ಸಿಬ್ಬಂದಿ

ನಗರದಲ್ಲಿ ಹಲವು ಠಾಣೆ ವ್ಯಾಪ್ತಿಗಳಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಸುತ್ತಾಡಿದ ಹೊಯ್ಸಳ ವಾಹನದ ಸಿಬ್ಬಂದಿ, ರಾತ್ರಿ ಕರ್ಫ್ಯೂ ಬಗ್ಗೆ ಜನರಿಗೆ ಮಾಹಿತಿ ನೀಡಿದರು.

ಮೈಕ್ ಹಿಡಿದು ಕೂಗಿದ ಸಿಬ್ಬಂದಿ, ‘ಕೊರೊನಾದಿಂದ ಜನರನ್ನು ರಕ್ಷಿಸಲು ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಜನರು ಸಹಕರಿಸಬೇಕು. ರಾತ್ರಿ 10 ಗಂಟೆಯೊಳಗೆ ಮನೆ ಸೇರಿ. ಅಂಗಡಿ, ಮಳಿಗೆಗಳನ್ನು ಬಂದ್ ಮಾಡಿ. ಪೊಲೀಸರ ಜೊತೆ ಸಹಕರಿಸಿ’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.