ADVERTISEMENT

ನಗರ ಬಿಡದಂತೆ ಪೊಲೀಸರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 22:50 IST
Last Updated 4 ಜೂನ್ 2020, 22:50 IST
ಭಾಸ್ಕರ್ ರಾವ್
ಭಾಸ್ಕರ್ ರಾವ್   

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂಥ ಸಂದರ್ಭದಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ನಗರ ಬಿಟ್ಟು ಹೋಗಬಾರದೆಂದು ಕಮಿಷನರ್ ಭಾಸ್ಕರ್ ರಾವ್ ಗುರುವಾರ ಆದೇಶ ಹೊರಡಿಸಿದ್ದಾರೆ.

ಹೊರ ರಾಜ್ಯದಿಂದ ಬರುತ್ತಿರುವವರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪೊಲೀಸರಿಗೂ ಸೋಂಕು ತಗುಲುತ್ತಿದ್ದು, ಇದೇ ಕಾರಣಕ್ಕೆ ಈ ಆದೇಶ ಹೊರಡಿಸಲಾಗಿದೆ.

‘ಠಾಣೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನಿತ್ಯ ದ್ರಾವಣ ಸಿಂಪಡಿಸಬೇಕು. ಸಿಬ್ಬಂದಿಗೆ ಆರೋಗ್ಯ ಸಮಸ್ಯೆಯಾದರೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು. ಕರ್ತವ್ಯದ ವೇಳೆ ಸಿಬ್ಬಂದಿ ಸ್ಯಾನಿಟೈಸರ್, ಮಾಸ್ಕ್ ಬಳಸಬೇಕು. ಸೋಂಕು ತಗುಲಿದ ಸಿಬ್ಬಂದಿಯ ಆರೈಕೆಗೆ ಆಯಾ ಡಿಸಿಪಿಗಳು ಒತ್ತು ನೀಡಬೇಕು. ಸಿಬ್ಬಂದಿ ಹಿರಿಯ ಅಧಿಕಾರಿಗಳ ಲಿಖಿತ ಅಪ್ಪಣೆ ಇಲ್ಲದೆ ನಗರ ಬಿಟ್ಟು ಎಲ್ಲಿಗೂ ಹೋಗಬಾರದು’ ಎಂದೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಪೊಲೀಸರಿಗೆ ಧೈರ್ಯ ತುಂಬಿದ ಡಿಜಿ–ಐಜಿಪಿ
ಬೆಂಗಳೂರು:
ಪೊಲೀಸರಲ್ಲೂ ಕೊರೊನಾ ಸೋಂಕು ಕಂಡುಬರುತ್ತಿರುವುದರಿಂದ ಇಲಾಖಾ ಸಿಬ್ಬಂದಿ ಹಾಗೂ ಅವರ ಕುಟುಂಬದವರಲ್ಲಿ ಧೈರ್ಯ ತುಂಬುವ ಕೆಲಸವನ್ನು ಇಲಾಖೆ ಮಾಡುತ್ತಿದೆ.

ತಮ್ಮ ಕಚೇರಿಯಲ್ಲಿ ಗುರುವಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಡಿಜಿ–ಐಜಿಪಿ ಪ್ರವೀಣ್ ಸೂದ್ ಅವರು, ಪೊಲೀಸರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ಪರಿಸ್ಥಿತಿ ಎದುರಿಸಲು ಪೊಲೀಸರು ಯಾವ ರೀತಿ ಅಣಿಯಾಗಬೇಕೆಂದು ಚರ್ಚಿಸಿದರು.

‘ನಿಯಂತ್ರಿತ ಪ್ರದೇಶ (ಕಂಟೈನ್‌ಮೆಂಟ್) ಹಾಗೂ ವಲಯಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಬೇಕು. ಪೌಷ್ಟಿಕ ಆಹಾರ ಸೇವಿಸುವಂತೆ ಹೇಳಬೇಕು’ ಎಂದೂ ಅವರು ಅಧಿಕಾರಿಗಳಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.