ADVERTISEMENT

ಪೊಲೀಸ್‌ ಲಾಠಿಗೆ ‘ಮದುವೆ ಗಂಡು ತನ್ವೀರ್‌’ ಕನಸಿಗೆ ಬ್ರೇಕ್‌

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 0:50 IST
Last Updated 24 ಏಪ್ರಿಲ್ 2019, 0:50 IST
   

‘ಬೈ ಕ್‌ ಚಲಾಯಿಸುವ ವೇಳೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದೆ ಎಂಬ ಒಂದೇ ಕಾರಣಕ್ಕಾಗಿ ಪೊಲೀಸರು ನನ್ನನ್ನು ಮನಬಂದಂತೆ ಥಳಿಸಿದ್ದಾರೆ. ನಾನು ಮಾಡಿದ ಘನಘೋರ ತಪ್ಪಾದಾರೂ ಏನು?’

ಡಿ.ಜೆ. ಹಳ್ಳಿ ಪೊಲೀಸರಿಂದ ತೀವ್ರ ಹಲ್ಲೆಗೊಳಗಾಗಿ ಕ್ವೀನ್ಸ್‌ ರಸ್ತೆಯ ಶಿಫಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ 23 ವರ್ಷದ ಯುವಕ ಮೊಹಮ್ಮದ್‌ ತನ್ವೀರ್‌ ಮುಂದಿಟ್ಟ ಪ್ರಶ್ನೆ ಇದು.

ಪೊಲೀಸರು ನಡೆಸಿದ ಹಲ್ಲೆಯಿಂದ ಕಿಡ್ನಿಗಳಿಗೆ ತೀವ್ರ ಪೆಟ್ಟು ಬಿದ್ದ ಕಾರಣ ತೀವ್ರ ನಿಗಾ ಘಟಕದಲ್ಲಿಡಲಾಗಿದ್ದು ಡಯಾಲಿಸಿಸ್‌ ಮಾಡಲಾಗುತ್ತಿದೆ. ಎದ್ದು ಕುಳಿತುಕೊಳ್ಳಲಾಗದ ಸ್ಥಿತಿಯಲ್ಲಿರುವ ತನ್ವೀರ್‌ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿಕೊಂಡೇ ಪೊಲೀಸರ ದೌರ್ಜನ್ಯವನ್ನು ‘ಮೆಟ್ರೊ’ ಮುಂದೆ ಬಿಡಿಸಿಟ್ಟ.

ADVERTISEMENT

‘ಏಪ್ರಿಲ್‌ 10ರಂದು ತಡರಾತ್ರಿ ರಸ್ತೆಯಲ್ಲಿ ತಡೆದ ಪೊಲೀಸರು ಅಶ್ಲೀಲ ಶಬ್ದಗಳಿಂದ ನಿಂದಿಸಿದರು. ಇದನ್ನು ಆಕ್ಷೇಪಿಸಿದಾಗ ಸ್ಥಳಕ್ಕೆ ಹೊಯ್ಸಳವಾಹನ ಕರೆಸಿ ಠಾಣೆಗೆ ಕರೆದೊಯ್ದರು. ಇಡೀ ರಾತ್ರಿ ಠಾಣೆಯಲ್ಲಿ 10–12 ಪೊಲೀಸರು ನನ್ನನ್ನು ಬಟ್ಟೆ ಕಳಚಿ ಹಿಗ್ಗಾಮುಗ್ಗಾ ಥಳಿಸಿದರು. ಅವರು ಹೊಡೆದ ರಭಸಕ್ಕೆ ಲಾಠಿಗಳು ಮೂರು ತುಂಡುಗಳಾಗಿ ಮುರಿದು ಹೋಗಿವೆ’ ಎಂದು ತನ್ವೀರ್‌ ಕಣ್ಣೀರು ಒರೆಸಿಕೊಂಡ.

ನೀವು ಏನಾದರೂ ವಾದ ಮಾಡಿದಿರಾ? ಎಂದಾಗ, ‘ಮಾಮೂಲಿ ನನ್ನನ್ನು ಸಮರ್ಥಿಸಿಕೊಳ್ಳಲು ಮಾತನಾಡಿದ್ದು ಬಿಟ್ಟರೆ ಬೇರೇನೂ ಹೇಳಿಲ್ಲ. ಪೊಲೀಸ್‌ ನನ್ನ ಧರ್ಮ ನಿಂದಿಸುತ್ತ ಜೋರು ಮಾಡಿದ. ನಿಮ್ಮನ್ನೆಲ್ಲ ಮುಗಿಸ್ಬೇಕು ಎನ್ನುವರ್ಥದಲ್ಲಿ ಬೈಯುತ್ತ ಲಾಠಿ ಬೀಸುತ್ತಿದ್ದ. ನಾನು ಅದಕ್ಕೆ ಜೋರು ದನಿಯಲ್ಲೇ ವಾದಿಸಿದೆ. ಆತ ನನ್ನನ್ನು ಬಿಡದೇ ಥಳಿಸಿದ’ ಎನ್ನುವಾಗ ಆತನ ಧ್ವನಿ ಕ್ಷೀಣಿಸುತ್ತಿತ್ತು. ಆತನ ಸಹೋದರ ಪಕ್ಕಕ್ಕೆ ಕರೆದು ‘ನಿಮ್ಮ ಎಲ್ಲ ಪ್ರಶ್ನೆಗಳಿಗೆ ನಾನು ಉತ್ತರಿಸುತ್ತೇನೆ’ ಎಂದ.

‘ಇದೇ ಮೇ 3ರಂದು ತನ್ವೀರ್‌ ಮದುವೆ ನಿಶ್ಚಯವಾಗಿತ್ತು. ಅದಕ್ಕೂ ಮುನ್ನ ಈ ಅನಿರಿಕ್ಷಿತ ಕಹಿ ಘಟನೆ ನಡೆದಿದೆ. ತನ್ವೀರ್‌ ಚೇತರಿಸಿಕೊಳ್ಳಲು ಕನಿಷ್ಠ ಇನ್ನೂ 15 ದಿನ ಬೇಕಾಗಬಹುದು ಎಂದು ವೈದ್ಯರು ಹೇಳಿರುವ ಕಾರಣ ಮದುವೆಯನ್ನು ಮುಂದೂಡಬೇಕಾಗಿ ಬಂತು. ಈ ಸ್ಥಿತಿಯಲ್ಲಿ ನಾವು ಏನು ಮಾಡಬೇಕು ತೋಚದಂತಾಗಿದೆ’ ಎಂದು ತನ್ವೀರ್‌ ಸಹೋದರ ಮುದಸ್ಸರ್‌ ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.

‘ನನ್ನ ತಮ್ಮನ ಎರಡೂ ಕಿಡ್ನಿ ಕೆಲಸ ಮಾಡುತ್ತಿಲ್ಲ. ಈಗ ಐದು ಬಾರಿ ಡಯಾಲಿಸಿಸ್‌ ನಡೆಸಲಾಗಿದೆ. ಈಗಲೂ ಅದೇ ಸ್ಥಿತಿ ಮುಂದುವರಿದಿದೆ. ಈಗ ಕೊಂಚ ಪರವಾಗಿಲ್ಲ ಮಾತನಾಡುತ್ತಿದ್ದಾನೆ. ಅಷ್ಟರಮಟ್ಟಿಗೆ ಆತನ ಆರೋಗ್ಯ ಸ್ಥಿತಿ ಕೊಂಚ ಸುಧಾರಿಸಿದೆ. 12 ದಿನಗಳಿಂದ ಕುಟುಂಬ ಸದಸ್ಯರು, ಬಂಧು, ಬಳಗ ಆಸ್ಪತ್ರೆಯಲ್ಲಿಯೇ ಬೀಡು ಬಿಟ್ಟಿದೆ. ಆಸ್ಪತ್ರೆ ಬಿಲ್‌ ಎರಡು ಲಕ್ಷ ರೂಪಾಯಿ ದಾಟಿದೆ’ ಎನ್ನುತ್ತಾರೆ ಮುದಸ್ಸಿರ್‌.

ಯಾರೂ ಆರ್ಥಿಕ ಸಹಾಯ ಮಾಡಲಿಲ್ಲವೇ? ಎಂದಾಗ, ‘ಇಲ್ಲ ಈತನಕ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ. ಆಸ್ಪತ್ರೆಯ ಖರ್ಚನ್ನು ನಾವೇ ಭರಿಸುತ್ತಿದ್ದೇವೆ‘ ಎಂದರು.

‘ಕಾವಲ್ ಭೈರಸಂದ್ರದ ಮೊಹಮ್ಮದ್‌ ತನ್ವೀರ್‌ ಸಮಾಜಮುಖಿ ಯುವಕ. ಸಾಮಾಜಿಕ ಕಾಳಜಿಯ ಹಲವಾರು ಕಾರ್ಯಗಳನ್ನು ಮಾಡುತ್ತ ಏರಿಯಾದಲ್ಲೇ ಒಳ್ಳೆಯ ಹುಡುಗನೆಂದು ಮೆಚ್ಚುಗೆ ಪಡೆದವ. ಪೀಸ್‌ ಫಾರ್‌ ಹ್ಯೂಮ್ಯಾನಿಟಿ ಟ್ರಸ್ಟ್‌ ಎನ್ನುವ ಸಂಘಟನೆಯ ಸಕ್ರಿಯ ಸದಸ್ಯ. ಹಲವಾರು ಸಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಸರ್ಕಾರದ ಯೋಜನೆಗಳನ್ನು ಪಡೆಯಲು ಬಡವರಿಗೆ ನೆರವಾಗುತ್ತಿದ್ದಾನೆ.ಒಂದು ವೇಳೆ ತನ್ವೀರ್‌ ಕಿಡ್ನಿಗಳಿಗೆ ಹಾನಿಯಾದರೆ, ಆತನನ್ನು ಥಳಿಸಿದ ಪೊಲೀಸರೇ ಕಿಡ್ನಿ ದಾನ ಮಾಡಬೇಕು’ ಎನ್ನುವುದು ಆಸ್ಪತ್ರೆಗೆ ಭೇಟಿ ನೀಡಿದ್ದ ಟ್ರಸ್ಟ್‌ ಅಧ್ಯಕ್ಷ ಸಲೀಂ ಪಾಷಾ ಬೇಡಿಕೆ.

‘ವ್ಯವಸ್ಥೆ ವಿರುದ್ಧ ನಮ್ಮ ತಕರಾರು ಇಲ್ಲ. ನನ್ನ ತಮ್ಮನ ಮೇಲೆ ಈ ರೀತಿ ಅಮಾನುಷ ಹಲ್ಲೆ ಮಾಡಿದ ತಪ್ಪಿತಸ್ಥ ಪೊಲೀಸರ ವಿರುದ್ಧ ಇಲಾಖೆ ಶಿಸ್ತುಕ್ರಮ ಜರುಗಿಸಬೇಕು. ಇತರ ಪೊಲೀಸರಿಗೂ ಅದು ಪಾಠ ವಾಗಬೇಕು. ಸಾರ್ವಜನಿಕರೊಂದಿಗಿನ ಪೊಲೀಸರ ವರ್ತನೆಯಲ್ಲಿ ಬದಲಾವಣೆಯಾಗಬೇಕು. ನನ್ನ ತಮ್ಮನಿಗೆ ಒದಗಿದ ಸ್ಥಿತಿ ಮುಂದೆ ಯಾರಿಗೂ ಬರಬಾರದು ಎಂಬುವುದಷ್ಟೇ ನನ್ನ ಕಾಳಜಿ’ ಎಂದು ಮುದಸ್ಸರ್‌ ಸಾಮಾಜಿಕ ಕಾಳಜಿ ವ್ಯಕ್ತಪಡಿಸಿದರು.

ಇಬ್ಬರನ್ನು ಅಮಾನತು ಮಾಡಿರುವುದಾಗಿ ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಏನೂ ಆಗುವುದಿಲ್ಲ. ಆರು ತಿಂಗಳ ನಂತರ ಮತ್ತೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಪೊಲೀಸರ ವರ್ತನೆ ಬದಲಾಗಬೇಕು ಎನ್ನುವುದು ಆಸ್ಪತ್ರೆಯಲ್ಲಿದ್ದ ಯುವಕನ ಸಂಬಂಧಿಗಳ ಒತ್ತಾಸೆ.ತಪ್ಪಿತಸ್ಥ ಪೊಲೀಸರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದೇವೆ. ನಮ್ಮ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ ಎನ್ನುವುದು ಸಂಬಂಧಿಗಳು ನಿಲುವು. ಸಾಮಾಜಿಕ ಜಾಲತಾಣಗಳಲ್ಲಿ #jsticefor tanveer ಅಭಿಯಾನ ಆರಂಭಿಸಲಾಗಿದ್ದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ವೈದ್ಯರು ಹೇಳುವುದೇನು?

‘ತನ್ವೀರ್‌ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದ್ದು ಡಯಾಲಿಸಿಸ್‌ ನಡೆಸಲಾಗುತ್ತಿದೆ. ಆತನನ್ನು ಆಸ್ಪತ್ರೆಗೆ ಕರೆ ತಂದಾಗ ಕಿಡ್ನಿ ಕೆಲಸ ಮಾಡುತ್ತಿರಲಿಲ್ಲ. ರಕ್ತದೊತ್ತಡ ಇಳಿದಿತ್ತು. ಸ್ನಾಯುಗಳು ತೀವ್ರ ಹಾನಿಗೊಳಗಾಗಿದ್ದು ಅದರಲ್ಲಿಯ ಪ್ರೋಟಿನ್‌ ರಕ್ತದ ಮೂಲಕ ಕಿಡ್ನಿ ಸೇರಿ ತೊಂದರೆ ಉಲ್ಬಣಿಸಿರುವ ಸಾಧ್ಯತೆ ಇದೆ ಎಂದು ಆತನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳುತ್ತಾರೆ.

‘ಇನ್ನೂ ವಯಸ್ಸಿನ ಹುಡುಗ. ಆದ ತೀವ್ರ ಗಾಯಗಳನ್ನು ಸಹಿಸಿಕೊಳ್ಳಬಹುದು ಎನ್ನುವ ನಂಬಿಕೆ ಇದೆ. ಈಗಲೇ ಏನನ್ನೂ ಹೇಳಲಾಗದು. ದೇಹದ ಎಲ್ಲೆಡೆ ಏಟುಗಳು ಬಲವಾಗಿ ಬಿದ್ದಿರುವುದರಿಂದ ಆತ ಬಳಲಿದ್ದಾನೆ. ಆತನ ಬಿಪಿ ಕೂಡ ಇದ್ದಕ್ಕಿದ್ದಂತೆ ತುಂಬ ಇಳಿದಿತ್ತು. ನ್ಯುಮೊನಿಯಾ ಕೂಡ ಕಾಣಿಸಿಕೊಂಡಿತ್ತು. ಎರಡೂ ಕಿಡ್ನಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಚೇತರಿಸಿಕೊಳ್ಳುವುದಕ್ಕೆ ಇನ್ನೂ ಎರಡು ವಾರವಾದರೂ ಬೇಕು. ಇದಕ್ಕಿಂತ ಹೆಚ್ಚು ವಿವರಗಳನ್ನು ನಾನು ನೀಡುವುದು ಸರಿಯಲ್ಲ’ ಎಂದು ತನ್ವೀರ್‌ ದೇಹಸ್ಥಿತಿಯ ಬಗ್ಗೆ ವಿವರಿಸಿದ ಡಾಕ್ಟರ್‌ ಮುಖದಲ್ಲಿ ಯುವಕನ ಗುಣಪಡಿಸುವ ಭರವಸೆಯ ಮಿಂಚಿತ್ತು.

***

ವ್ಯವಸ್ಥೆ ವಿರುದ್ಧ ನಮ್ಮ ತಕರಾರು ಇಲ್ಲ. ಆದರೆ, ನನ್ನ ತಮ್ಮನ ಮೇಲೆ ಈ ರೀತಿ ಅಮಾನುಷ ಹಲ್ಲೆ ಮಾಡಿದ ತಪ್ಪಿತಸ್ಥ ಪೊಲೀಸರ ವಿರುದ್ಧ ಇಲಾಖೆ ಶಿಸ್ತುಕ್ರಮ ಜರುಗಿಸಬೇಕು. ಸಾರ್ವಜನಿಕರೊಂದಿಗಿನ ಪೊಲೀಸರ ವರ್ತನೆಯಲ್ಲಿ ಬದಲಾವಣೆಯಾಗಬೇಕು. ನನ್ನ ತಮ್ಮನಿಗೆ ಒದಗಿದ ಸ್ಥಿತಿ ಮುಂದೆ ಯಾರಿಗೂ ಬರಬಾರದು ಎಂಬುವುದಷ್ಟೇ ನನ್ನ ಕಾಳಜಿ.
ಮುದಸ್ಸರ್‌, ತನ್ವೀರ್‌ ಸಹೋದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.