ಬೆಂಗಳೂರು: ನಗರದ ವಿವಿಧ ವಿಭಾಗಗಳ ಪೊಲೀಸರು ಈ ಬಾರಿಯೂ ಹೊಸ ವರ್ಷವನ್ನು ವಿಭಿನ್ನವಾಗಿ ಆಚರಣೆ ಮಾಡಿದರು. ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಬುಧವಾರ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಹೊಸವರ್ಷವನ್ನು ಸ್ವಾಗತಿಸಿದರು.
ಆಯಾ ವಿಭಾಗದ ಡಿಸಿಪಿಗಳು, ಎಸಿಪಿಗಳು, ಇನ್‌ಸ್ಪೆಕ್ಟರ್‌ಗಳು, ಪಿಎಸ್‌ಐಗಳು ತಮ್ಮ ವ್ಯಾಪ್ತಿಯ ಬಾಲಮಂದಿರ, ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ತೆರಳಿ ಹೊಸ ವರ್ಷವನ್ನು ಆಚರಣೆ ಮಾಡಿದರು. ಅಲ್ಲದೇ ಹೊಸ ಬಟ್ಟೆ ವಿತರಣೆ ಮಾಡಿದರು. ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಅಗತ್ಯ
ಪರಿಕರಗಳನ್ನೂ ವಿತರಣೆ ಮಾಡಲಾಯಿತು.
ಮಾತೃಶ್ರೀ ವೃದ್ಧಾಶ್ರಮದಲ್ಲಿ ಬೇಗೂರು ಠಾಣೆ ಪೊಲೀಸರು ಹೊಸ ವರ್ಷ ಆಚರಣೆ ಮಾಡಿದರು. ಇದೇ ವೇಳೆ ವೃದ್ಧರಿಗೆ ಹಣ್ಣು ಹಂಪಲು ವಿತರಣೆ ಮಾಡಿದರು. ಯಾವುದೇ ಸಮಸ್ಯೆ ಬಂದರೂ ಪೊಲೀಸರನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.
ಪೂರ್ವ ವಿಭಾಗದ ಸಂಚಾರ ಪೊಲೀಸರು, ಕ್ರಿಸ್ತು ಸೇವಾ ಸಮಾಜ ಅನಾಥಾಶ್ರಮ/ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಹಿರಿಯ ನಾಗರಿಕರ ಯೋಗಕ್ಷೇಮ ವಿಚಾರಿಸಿದರು. ಮನೋಸ್ಥೈರ್ಯ ತುಂಬಿ ಎಲ್ಲರಿಗೂ ಶುಭಾಶಯ ಕೋರಿ ಸಿಹಿಹಂಚಿ ಅವರೊಂದಿಗೆ ಕಾಲಕಳೆದರು. ಇದು ನಿವಾಸಿಗಳಲ್ಲಿ ನವೋಲ್ಲಾಸ ತರಿಸಿತು.
ಕೆ.ಆರ್. ಪುರ ಸಂಚಾರ ಠಾಣೆ ಪೊಲೀಸರು, ಶಿಶು ಮಂದಿರದ ಮಕ್ಕಳೊಂದಿಗೆ ಹೊಸ ವರ್ಷದ ಉತ್ಸಾಹವನ್ನು ಹಂಚಿಕೊಂಡರು. ಮಕ್ಕಳಿಗೆ ಸಿಹಿ ವಿತರಿಸಿ ಶುಭಾಶಯ ಕೋರಿದರು. ರಾಜಾಜಿನಗರ ಸಂಚಾರ ಠಾಣೆ ಪೊಲೀಸರು ಶ್ರೀ ವೃದ್ಧಾಶ್ರಮಕ್ಕೆ ಭೇಟಿ ನೀಡಿ ನಿವಾಸಿಗಳಿಗೆ ದಿನಬಳಕೆ ವಸ್ತು ವಿತರಿಸಿದರು.
ಪಶ್ಚಿಮ ವಿಭಾಗದ ಪೊಲೀಸರು, ಮಾಗಡಿ ರಸ್ತೆ ಪೊಲೀಸ್ ಕಾಲೊನಿಯ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬದವರೊಂದಿಗೆ ವಿನೂತನವಾಗಿ ಹೊಸ ವರ್ಷವನ್ನು ಬರಮಾಡಿಕೊಂಡರು. ಎಲೆಕ್ಟ್ರಾನಿಕ್ ಸಿಟಿ ಎಸಿಪಿ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ವ್ಯಾಪ್ತಿಯ ಹುಳಿಮಾವು, ಬೇಗೂರು ಹಾಗು ಪರಪ್ಪನ ಅಗ್ರಹಾರದ ವ್ಯಾಪ್ತಿಯ ವೃದ್ಧಾಶ್ರಮಗಳಿಗೆ ಭೇಟಿ ನೀಡಿ, ಶುಭ ಕೋರಿದರು. ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದರು. ಈಶಾನ್ಯ ವಿಭಾಗದ ಪೊಲೀಸರು, ಅಂಗವಿಕಲ ಮಕ್ಕಳಿಗೆ ಶುಭ ಕೋರಿ ಸಿಹಿ ಹಂಚಿದರು.
ಬಿ.ದಯಾನಂದ ಅವರು ಹೊಸ ವರ್ಷಾಚರಣೆಗೆ ಶುಭ ಕೋರಲು ಹೂಗುಚ್ಛ, ಸಿಹಿ ತಿನಿಸುಗಳನ್ನು ತರದಂತೆ ಸೂಚಿಸಿದ್ದರು. ಅದೇ ಹಣದಲ್ಲಿ ತಮ್ಮ ವ್ಯಾಪ್ತಿಯ ಅನಾಥಾಶ್ರಮಳಿಗೆ ದಿನಸಿ, ಸಿಹಿ ತಿನಿಸು ಅಥವಾ ಊಟದ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಅವರ ಸೂಚನೆಯಂತೆ ವಿವಿಧ ವಿಭಾಗಗಳ ಪೊಲೀಸರು ವಿಭಿನ್ನವಾಗಿ ಹೊಸ ವರ್ಷ ಆಚರಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.