ADVERTISEMENT

ಜಿಬಿಎ ಕಾಯ್ದೆಯಿಂದ ಬೆಂಗಳೂರಿಗೆ ಸಕಾರಾತ್ಮಕ ಪರಿಣಾಮ: ವಿಮೋವೆ ಫೌಂಡೇಷನ್‌ ಸಮೀಕ್ಷೆ

‘ಆಲ್ಟರ್ನೇಟೀವ್‌–25: ಸುಸ್ಥಿರ ಗ್ರೇಟರ್‌ ಬೆಂಗಳೂರು’ ಸಮೀಕ್ಷೆ ವರದಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 1:27 IST
Last Updated 19 ಜೂನ್ 2025, 1:27 IST
‘ಆಲ್ಟರ್ನೇಟೀವ್‌–25: ಸುಸ್ಥಿರ ಗ್ರೇಟರ್‌ ಬೆಂಗಳೂರು’ ಸಮೀಕ್ಷೆ ವರದಿಯನ್ನು ವಿನಯ್‌ ಸಿಂಧೆ ಅವರು ಡಿ.ಕೆ. ಶಿವಕುಮಾರ್‌ ಅವರಿಗೆ ನೀಡಿದರು
‘ಆಲ್ಟರ್ನೇಟೀವ್‌–25: ಸುಸ್ಥಿರ ಗ್ರೇಟರ್‌ ಬೆಂಗಳೂರು’ ಸಮೀಕ್ಷೆ ವರದಿಯನ್ನು ವಿನಯ್‌ ಸಿಂಧೆ ಅವರು ಡಿ.ಕೆ. ಶಿವಕುಮಾರ್‌ ಅವರಿಗೆ ನೀಡಿದರು   

ಬೆಂಗಳೂರು: ‘ಗ್ರೇಟರ್‌ ಬೆಂಗಳೂರು ಕಾಯ್ದೆ’ ನಗರದಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇಕಡ 70ರಷ್ಟು ಯುವಕರು ಅಭಿಪ್ರಾಯಪಟ್ಟಿದ್ದಾರೆ ಎಂದು ವಿಮೋವೆ ಫೌಂಡೇಷನ್‌ನ ಸಮೀಕ್ಷೆ ತಿಳಿಸಿದೆ.

ಸಾಮಾಜಿಕ ಕಾರ್ಯಕರ್ತ ವಿನಯ್‌ ಸಿಂಧೆ ಅವರು ಸ್ಥಾಪಿಸಿರುವ ‘ವಿಮೋವೆ ಫೌಂಡೇಷನ್‌’ ವತಿಯಿಂದ ‘ಆಲ್ಟರ್ನೇಟೀವ್‌–25: ಸುಸ್ಥಿರ ಗ್ರೇಟರ್‌ ಬೆಂಗಳೂರು’ ಸಮೀಕ್ಷೆ ನಡೆಸಲಾಗಿದೆ. ಒಂದು ತಿಂಗಳು ಆನ್‌ಲೈನ್‌ನಲ್ಲಿ ಸಮೀಕ್ಷೆ ನಡೆದಿದ್ದು, ‘ಗ್ರೇಟರ್‌ ಬೆಂಗಳೂರು’ (ಜಿಬಿಎ) ಕಾಯ್ದೆಯ ಬಗ್ಗೆ ಬೆಂಗಳೂರಿನಲ್ಲಿ ನೆಲಸಿರುವ ನಾಗರಿಕರ ಅಭಿಪ್ರಾಯ ಸಂಗ್ರಹಿಸಲಾಗಿದೆ.

ನಗರದಲ್ಲಿ ಸಾರ್ವಜನಿಕ ಸಾರಿಗೆ, ಸ್ವಚ್ಛ ಗಾಳಿ ಹಾಗೂ ತ್ಯಾಜ್ಯ ನಿರ್ವಹಣೆಯಲ್ಲಿ ಹಲವು ರೀತಿಯ ಕೊರತೆ ಇದ್ದು, ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ 50ರಷ್ಟು ಯುವಕರು, ಸ್ವಯಂ ಸೇವಕರಾಗಿ ಸರ್ಕಾರದೊಂದಿಗೆ ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ. ಶೇ 15ರಷ್ಟು ಮಂದಿ ಮುಂದಿನ ದಿನಗಳಲ್ಲಿ ಸ್ವಯಂ ಸೇವಕರಾಗುವುದಾಗಿ ತಿಳಿಸಿದ್ದಾರೆ.

‘ವಿಮೋವೆ ಫೌಂಡೇಷನ್‌ ‘ಆಲ್ಟರ್ನೇಟೀವ್‌–25: ಸುಸ್ಥಿರ ಗ್ರೇಟರ್‌ ಬೆಂಗಳೂರು’ ವಿಷಯವಾಗಿ, ಸಮೀಕ್ಷೆ, ಚರ್ಚೆ, ನಮ್ಮ ಅರ್ಥ್‌ ಪ್ರಶಸ್ತಿ, ಇಕೊ ಫ್ಯಾಷನ್‌ ವಾಕ್‌, ಇಂಪ್ಯಾಕ್ಟಾಥಾನ್‌ಗಳನ್ನು ಆಯೋಜಿಸಿತ್ತು. ರೇವಾ ವಿಶ್ವವಿದ್ಯಾಲಯದಲ್ಲಿ ಗ್ರ್ಯಾಂಡ್‌ ಫಿನಾಲೆ ನಡೆಯಿತು. ಸಮೀಕ್ಷೆಯ ವರದಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ನೀಡಲಾಗಿದ್ದು, ಇದರಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಕಾಯ್ದೆ ಅನುಷ್ಠಾನದಲ್ಲಿ ನಾಗರಿಕರ ಅಭಿಪ್ರಾಯಗಳನ್ನು ಕಾರ್ಯಗತಗೊಳಿಸಬಹುದಾಗಿದೆ’ ಎಂದು ವಿಮೋವೆ ಫೌಂಡೇಷನ್‌ ಸಂಸ್ಥಾಪಕ ವಿನಯ್‌ ಸಿಂಧೆ ತಿಳಿಸಿದರು.

ಸಮೀಕ್ಷೆಯಲ್ಲಿನ ಪ್ರಮುಖ ಅಂಶಗಳು

ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ 80ರಷ್ಟು ಜನರು ವೃತ್ತಿಪರರು

ಪ್ರತಿಕ್ರಿಯಿಸಿದವರಲ್ಲಿ ಶೇ 77ರಷ್ಟು ಜನರು 25 ವರ್ಷದೊಳಗಿನವರು

ಪ್ರತಿಕ್ರಿಯೆಯಲ್ಲಿ ಪುರುಷ ಹಾಗೂ ಮಹಿಳೆಯರು ಸಮ ಸಂಖ್ಯೆಯಲ್ಲಿದ್ದಾರೆ

ಶೇ 40ರಷ್ಟು ಮಂದಿಗೆ ಜಿಬಿಎ ಕಾಯ್ದೆ ಬಗ್ಗೆ ಸ್ವಲ್ಪ ಅರಿವಿದೆ

ಶೇ 30ರಷ್ಟು ಜನರು ಜಿಬಿಎ ಕಾಯ್ದೆ ಬಗ್ಗೆ ಕೇಳಿದ್ದಾರೆ

ಶೇ 30ರಷ್ಟು ಮಂದಿಗೆ ಜಿಬಿಎ ಕಾಯ್ದೆ ಗೊತ್ತಿಲ್ಲ

ಶೇ 53ರಷ್ಟು ಮಂದಿಗೆ ಜಿಬಿಎಗೆ ಮುಖ್ಯಮಂತ್ರಿ ಅಧ್ಯಕ್ಷರು ಎಂಬ ಮಾಹಿತಿ ಇದೆ

ಶೇ 64ರಷ್ಟು ಜನರಿಂದ ಕೇಂದ್ರೀಕೃತ ಪ್ರಾಧಿಕಾರದಿಂದ ಆಡಳಿತ ಉತ್ತಮವಾಗುವ ಅಭಿಪ್ರಾಯ

ಶೇ 67ರಷ್ಟು ಮಂದಿಗೆ ವಾರ್ಡ್‌ ಮಟ್ಟದ ಅಧಿಕಾರದಿಂದ ನಾಗರಿಕರಿಗೆ ಶಕ್ತಿಬರಲಿದೆ ಎಂಬ ಭಾವನೆ

ಶೇ 57ರಷ್ಟು ಜನರು ಜೀವನವೆಚ್ಚ ಹೆಚ್ಚಾಗಲಿದ್ದರೂ, ಉತ್ತಮ ಜೀವನಕ್ಕೆ ಸಹಕಾರಿಯಾಗಲಿದೆ ಎಂದಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.