ADVERTISEMENT

ಬೆಂಗಳೂರು | ಸೈಬರ್ ವಂಚನೆ, ಡಿಜಿಟಲ್ ವ್ಯಸನ ಹೆಚ್ಚಳ: ಪೊಲೀಸರು, ವೈದ್ಯರ ಕಳವಳ

ಪ್ರಾಂಶುಪಾಲರ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 22 ಜನವರಿ 2025, 15:19 IST
Last Updated 22 ಜನವರಿ 2025, 15:19 IST
<div class="paragraphs"><p>ಕಾರ್ಯಕ್ರಮದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಿಗೆ ಸಿಪಿಆರ್ ತರಬೇತಿ ನೀಡಲಾಯಿತು </p></div>

ಕಾರ್ಯಕ್ರಮದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಿಗೆ ಸಿಪಿಆರ್ ತರಬೇತಿ ನೀಡಲಾಯಿತು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ನಾನಾ ರೀತಿಯ ಆನ್‌ಲೈನ್‌ ವಂಚನೆಗಳು ನಡೆಯುತ್ತಿದ್ದು, ವಂಚಕರ ಬಲೆಗೆ ಬೀಳದಿರಲು ಎಚ್ಚರಿಕೆಯಿಂದ ವ್ಯವಹರಿಸಬೇಕಿದೆ. ಇದೇ ಅವಧಿಯಲ್ಲಿ ಡಿಜಿಟಲ್ ವ್ಯಸನಿಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಮಕ್ಕಳು ಸೇರಿ ವಿವಿಧ ವಯೋಮಾನದವರು ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆಗಳಿರುತ್ತವೆ’ ಎಂದು ವಿಷಯ ತಜ್ಞರು ಕಳವಳ ವ್ಯಕ್ತಪಡಿಸಿದರು. 

ADVERTISEMENT

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಾಂಶುಪಾಲರ ವಿಚಾರ ಸಂಕಿರಣದಲ್ಲಿ ಆನ್‌ಲೈನ್ ಸುರಕ್ಷತೆ ಬಗ್ಗೆ ತಜ್ಞರು ವಿಚಾರ ಮಂಡಿಸಿದರು. 

ಸೈಬರ್ ಸುರಕ್ಷತೆ ಬಗ್ಗೆ ಮಾತನಾಡಿದ ಸಿಐಡಿ ಸೈಬರ್‌ ಕ್ರೈಂ ವಿಭಾಗದ ಡಿವೈಎಸ್‌ಪಿ ಕೆ.ಎನ್. ಯಶವಂತ ಕುಮಾರ್, ‘ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿರುವ ಈ ಅವಧಿಯಲ್ಲಿ ಆನ್‌ಲೈನ್‌ ವಂಚನೆಗೆ ತುತ್ತಾಗುತ್ತಿರುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ವೈಯಕ್ತಿಕ ದತ್ತಾಂಶಗಳನ್ನು ಸಂಗ್ರಹಿಸಿ, ಮಾರಾಟ ಮಾಡಲಾಗುತ್ತಿದೆ. ಡೀಪ್ ಫೇಕ್ ತಂತ್ರಜ್ಞಾನವನ್ನು ಬಳಸಿಕೊಂಡು, ಧ್ವನಿಗಳನ್ನೂ ನಕಲು ಮಾಡಲಾಗುತ್ತಿದೆ. ಈ ಮೂಲಕ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ಲಾಟರಿ, ಕ್ರೆಡಿಟ್ ಕಾರ್ಡ್, ಬಹುಮಾನ, ನಕಲಿ ಆ್ಯಪ್‌ ಮತ್ತು ವೆಬ್‌ಸೈಟ್ ಸೇರಿ ವಿವಿಧ ಮಾರ್ಗಗಳಲ್ಲಿ ವಂಚನೆ ನಡೆಯುತ್ತಿದೆ. ಆದ್ದರಿಂದ ಆನ್‌ಲೈನ್ ವ್ಯವಸ್ಥೆಯಡಿ ಎಚ್ಚರದಿಂದ ಕಾರ್ಯನಿರ್ವಹಿಸಬೇಕು. ಯೋಚಿಸದೆ ಯಾವುದೇ ನಿರ್ಧಾರಕ್ಕೆ ಬರಬಾರದು’ ಎಂದರು. 

‘ಆ್ಯಪ್‌ಗಳಿಗೆ ಬಲವಾದ ಪಾಸ್‌ವರ್ಡ್‌ಗಳನ್ನು ಇಟ್ಟುಕೊಳ್ಳಬೇಕು. ಅನಗತ್ಯ ಆ್ಯಪ್‌ಗಳನ್ನು ಮೊಬೈಲ್‌ನಂತಹ ಡಿಜಿಟಲ್ ಸಾಧನಗಳಲ್ಲಿ ಇರಿಸಿಕೊಳ್ಳಬಾರದು. ಸೈಬರ್ ವಂಚನೆಗಳು ನಡೆದಲ್ಲಿ ಕೂಡಲೇ 1930ಕ್ಕೆ ಕರೆ ಮಾಡಿ, ದೂರು ನೀಡಬೇಕು. ಇದರಿಂದ ಹಣ ಮರಳಿ ಪಡೆಯುವ ಅವಕಾಶಗಳು ಇರಲಿವೆ. ಪೂರ್ವಾಪರ ಪರಿಶೀಲಿಸದೆ ಮಾಹಿತಿ, ಹಣವನ್ನು ನೀಡಬಾರದು’ ಎಂದು ಕಿವಿಮಾತುಗಳನ್ನು ಹೇಳಿದರು. 

ಅತಿಯಾದ ಮೊಬೈಲ್ ಬಳಕೆ: ಯುವಜನರಲ್ಲಿ ಡಿಜಿಟಲ್ ವ್ಯಸನದ ಬಗ್ಗೆ ಮಾತನಾಡಿದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಪ್ರಾಧ್ಯಾಪಕ ಡಾ. ಮನೋಜ್ ಕುಮಾರ್ ಶರ್ಮಾ, ‘ಕೋವಿಡ್‌ ಬಳಿಕ ಮೊಬೈಲ್‌ನಂತಹ ಡಿಜಿಟಲ್ ಸಾಧನಗಳ ಬಳಕೆಯ ಅವಧಿ ಹೆಚ್ಚಿದೆ. ಮಕ್ಕಳು ಹಾಗೂ ವಯಸ್ಕರು ತಡರಾತ್ರಿವರೆಗೂ ಡಿಜಿಟಲ್‌ ಸಾಧನಗಳನ್ನು ಬಳಸುವುದರಿಂದ ನಿದ್ದೆಯಲ್ಲಿ ವ್ಯತ್ಯಯವಾಗಿ, ಮಾನಸಿಕ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಂಭವ ಇರಲಿದೆ. ಮಕ್ಕಳು ಓದಿನಲ್ಲಿ ಏಕಾಗ್ರತೆ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಡಿಜಿಟಲ್ ಸಾಧನಗಳ ಅತಿಯಾದ ಬಳಕೆಗೆ ಕಡಿವಾಣ ಹಾಕಬೇಕಿದೆ’ ಎಂದರು. 

‘ಮಕ್ಕಳ ನಡವಳಿಕೆ ಆಧರಿಸಿ, ಅವರು ಎದುರಿಸುತ್ತಿರುವ ಮಾನಸಿಕ ಅನಾರೋಗ್ಯ ಸಮಸ್ಯೆಗಳನ್ನು ಗುರುತಿಸಬೇಕು. ಉತ್ತಮ ಆಹಾರ ಸೇವನೆ, ನಿಗದಿತ ಸಮಯದ ನಿದ್ದೆ, ದೈಹಿಕ ಚಟುವಟಿಕೆ ಹಾಗೂ ಕುಟುಂಬದ ಜತೆಗೆ ಸಮಯ ಕಳೆಯುವ ಮೂಲಕ ಮಕ್ಕಳು ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕು. ಡಿಜಿಟಲ್ ವ್ಯಸನಕ್ಕೆ ಸಂಬಂಧಿಸಿದಂತೆ ಸಹಾಯವಾಣಿ ಸಂಖ್ಯೆ 9480829675ಕ್ಕೆ ಸಂಪರ್ಕಿಸಬಹುದು’ ಎಂದು ಹೇಳಿದರು.

ಸಿಪಿಆರ್ ಬಗ್ಗೆ ಪ್ರಾತ್ಯಕ್ಷಿಕೆ

ಕಾರ್ಯಕ್ರಮದಲ್ಲಿ ಹೃದಯ ಶ್ವಾಸಕೋಶ ಕಾಯಿಲೆಯ ಪ್ರಾಥಮಿಕ ಚಿಕಿತ್ಸೆಯ (ಸಿಪಿಆರ್) ಪ್ರಾತ್ಯಕ್ಷಿಕೆಯನ್ನು ಮಣಿಪಾಲ್ ಆಸ್ಪತ್ರೆಯ ವೈದ್ಯರನ್ನೊಳಗೊಂಡ ನೀಡಿತು. ಸಿಪಿಆರ್ ಮಹತ್ವದ ಬಗ್ಗೆಯೂ ವಿವರಿಸಿ ವಿವಿಧ ಪ್ರಾಂಶುಪಾಲರಿಗೂ ಮಾನವಾಕೃತಿಯ ಮಾದರಿಗಳನ್ನು ಬಳಸಿಕೊಂಡು ಈ ಬಗ್ಗೆ ತರಬೇತಿ ನೀಡಲಾಯಿತು. 

‘ಹಠಾತ್ ಹೃದಯಾಘಾತದ ಸಂದರ್ಭದಲ್ಲಿ ವ್ಯಕ್ತಿಯನ್ನು ಪ್ರಾಣಾ‍ಪಾಯದಿಂದ ಪಾರು ಮಾಡಲು ಸಿಪಿಆರ್ ಸಹಾಯಕ. ನಿಂತಿರುವ ಹೃದಯದ ಬಡಿತವನ್ನು ಪುನಃ ಪ್ರಾರಂಭವಾಗುವಂತೆ ಮಾಡುವ ಪ್ರಕ್ರಿಯೆಯೇ ಸಿಪಿಆರ್. ಹೃದಯಾಘಾತ ಅಥವಾ ಹೃದಯ ಸ್ತಂಭನ ಉಂಟಾದಾಗ ತಕ್ಷಣ ತುರ್ತು ಚಿಕಿತ್ಸೆ ಒದಗಿಸದಿದ್ದಲ್ಲಿ ಜೀವಕ್ಕೆ ಅಪಾಯ ಆಗಲಿದೆ. ಆದ್ದರಿಂದ ಸಿಪಿಆರ್‌ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು’ ಎಂದು ಮಣಿಪಾಲ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಡಾ. ಮೆಬಲ್ ವಾಸ್‌ನಾಯಕ್ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.