ADVERTISEMENT

ರೈತನ ಕೈಸೇರಿತು 13 ಎಕರೆ ಜಮೀನು: ಸ್ವತ್ತು ವಾಪಸ್ ಕೊಡಿಸಿದ ಬೆಂಗಳೂರು ಪೊಲೀಸರು

ಪ್ರಜಾವಾಣಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 20:16 IST
Last Updated 24 ಅಕ್ಟೋಬರ್ 2018, 20:16 IST
ಅ.16ರಂದು ಪ್ರಜಾವಾಣಿ ಫೋನ್–ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ ಕುಮಾರ್‌ ಹಾಗೂ ಅಪರಾಧ ವಿಭಾಗದ ಡಿಸಿಪಿ ಎಸ್‌.ಗಿರೀಶ್‌
ಅ.16ರಂದು ಪ್ರಜಾವಾಣಿ ಫೋನ್–ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ ಕುಮಾರ್‌ ಹಾಗೂ ಅಪರಾಧ ವಿಭಾಗದ ಡಿಸಿಪಿ ಎಸ್‌.ಗಿರೀಶ್‌   

ಬೆಂಗಳೂರು: ‘ಪ್ರಜಾವಾಣಿ’ ಫೋನ್–ಇನ್ ಕಾರ್ಯಕ್ರಮದಲ್ಲಿ ಬಂದಿದ್ದ ದೂರಿನ ಬೆನ್ನುಹತ್ತಿದ ಪೊಲೀಸರು, ಮಾಜಿ ಸೈನಿಕನ ವಶದಲ್ಲಿದ್ದ 13 ಎಕರೆ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಮೂಲ ಮಾಲೀಕನಿಗೆ ವಾಪಸ್ ಕೊಡಿಸಿದ್ದಾರೆ.

ಹೊಸಕೋಟೆ ತಾಲ್ಲೂಕು ಮುಗಬಾಳ ಗ್ರಾಮದ ರೈತ ಎ.ನಾರಾಯಣಸ್ವಾಮಿ ಆ ಜಮೀನಿನ ಒಡೆಯ. ಅ.16ರಂದು ಫೋನ್–ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿದ್ದ ಅವರು, ‘ನನ್ನ ಜಮೀನಿನ ದಾಖಲೆಗಳ ಮೇಲೆ ದೇವನಹಳ್ಳಿಯ ಜೊನ್ನಹಳ್ಳಿ ಗ್ರಾಮದ ರಾಮ್‌
ದಾಸ್ ಎಂಬುವರ ಬಳಿ ₹ 20 ಲಕ್ಷ ಸಾಲ ಪಡೆದಿದ್ದೆ. ಸಾಲ ಮರಳಿಸಿದರೂ, ಅವರು ಜಮೀನು ಪತ್ರ ಕೊಡುತ್ತಿಲ್ಲ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಬಳಿ ದೂರು ಹೇಳಿಕೊಂಡಿದ್ದರು.

ಅದನ್ನು ಗಂಭೀರವಾಗಿ ಪರಿಗಣಿಸಿದ ಕಮಿಷನರ್, ದೂರನ್ನು ಪರಿಶೀಲಿಸಿ ತ್ವರಿತವಾಗಿ ಕ್ರಮ ತೆಗೆದುಕೊಳ್ಳುವಂತೆ ಚಿಕ್ಕಜಾಲ ಪೊಲೀಸರಿಗೆ ಸೂಚಿಸಿದ್ದರು. ಆನಂತರ ರಾಮ್‌ದಾಸ್ ಅವರನ್ನು ಕರೆಸಿ ವಿಚಾರಣೆ ನಡೆಸಿದ ಪೊಲೀಸರು, ಜಮೀನಿನ ಪತ್ರಗಳು ಹಾಗೂ ಖಾಲಿ ಚೆಕ್‌ಗಳನ್ನು ನಾರಾಯಣಸ್ವಾಮಿ ಅವರಿಗೆ ಕೊಡಿಸಿದ್ದಾರೆ.

‘ದಾಖಲೆಗಳನ್ನು ಪಡೆಯಲು ಎರಡೂವರೆ ವರ್ಷಗಳಿಂದ ಒದ್ದಾಡುತ್ತಿದ್ದೆ. ದೂರು ಕೊಟ್ಟರೂ ರಾಮ್‌ದಾಸ್ ಮಾಜಿ ಸೈನಿಕನೆಂಬ ಕಾರಣಕ್ಕೆ ಪೊಲೀಸರೂ ಕ್ರಮ ತೆಗೆದುಕೊಂಡಿರಲಿಲ್ಲ. ‘ಪ್ರಜಾವಾಣಿ’ ಪತ್ರಿಕೆಯಿಂದ, ಕಮಿಷನರ್ ಅವರಿಂದ, ಚಿಕ್ಕಜಾಲ ಪೊಲೀಸರಿಂದ ಜಮೀನು ಮತ್ತೆ ಕೈಸೇರಿತು. ಎಲ್ಲರಿಗೂ ನಮ್ಮ ಕುಟುಂಬ ಋಣಿಯಾಗಿರುತ್ತದೆ’ ಎನ್ನುತ್ತ ನಾರಾಯಣಸ್ವಾಮಿ ದುಃಖತಪ‍್ತರಾದರು.

‘ಹಿರಿಯೂರಿನ ಕಸ್ತೂರಿ ರಂಗಪ್ಪನಹಳ್ಳಿಯಲ್ಲಿ ನನ್ನ ಜಮೀನಿದೆ. ವ್ಯವಸಾಯ ಮಾಡಲೆಂದು ಶೇ 1ರ ಬಡ್ಡಿ ದರದಲ್ಲಿ ರಾಮ್‌ದಾಸ್ ಬಳಿ 2015ರಲ್ಲಿ ಸಾಲ ಪಡೆದಿದ್ದೆ. ಅದಕ್ಕೆ ಪ್ರತಿಯಾಗಿ ಜಮೀನು ಸ್ವತ್ತನ್ನು ಹಿರಿಯೂರು ಉಪನೋಂದಣಾಧಿಕಾರಿ ಕಚೇರಿಯಲ್ಲಿ ರಾಮ್‌ದಾಸ್‌ ಹೆಸರಿಗೆ ವರ್ಗಾಯಿಸಿದ್ದೆ’ ಎಂದರು.

‘ದಿನ ಕಳೆದಂತೆ ಬಡ್ಡಿ ದರ ಹೆಚ್ಚಿಸುತ್ತ ಹೋದ ಅವರು, ಜಮೀನನ್ನು ಕಬಳಿಸುವುದಕ್ಕೇ ಸಂಚು ರೂಪಿಸಿದರು.’

‘ಆ ವಿಚಾರ ಗೊತ್ತಾದ ಕೂಡಲೇ, ಸಂಬಂಧಿಗಳ ಬಳಿ ಸಾಲ ಮಾಡಿ 2016ರ ಏಪ್ರಿಲ್ 29ರಂದು ರಾಮ್‌ದಾಸ್ ಪತ್ನಿಯ ಬ್ಯಾಂಕ್ ಖಾತೆಗೆ ₹20 ಲಕ್ಷ ಹಾಕಿಬಿಟ್ಟಿದ್ದೆ. ಆದರೆ, ತಮ್ಮ ಖಾತೆಗೆ ಹಣ ಬಂದೇ ಇಲ್ಲ ಎಂದು ಸುಳ್ಳು ಹೇಳಿದ ರಾಮ್‌ದಾಸ್ ಹಾಗೂ ಅವರ ತಮ್ಮ ಶಿವಪ್ರಸಾದ್, ನಿತ್ಯ ಮನೆ ಬಳಿ ಬಂದು ಸಾಲ ಮರಳಿಸುವಂತೆ ಗಲಾಟೆ ಮಾಡುತ್ತಿದ್ದರು. ಜೀವ ಬೆದರಿಕೆಯನ್ನೂ ಹಾಕುತ್ತಿದ್ದರು. ಹೀಗಾಗಿ, ಮನೆ ತೊರೆದು ಎರಡು ವರ್ಷ ಯಲಹಂಕ ಸಮೀಪದ ದ್ವಾರಕಾನಗರದ ಪೇಯಿಂಗ್ ಗೆಸ್ಟ್ ಕಟ್ಟಡವೊಂದರಲ್ಲಿ ಉಳಿದುಕೊಂಡಿದ್ದೆ. ಆದರೂ, ಅವರಿಂದ ಪತ್ನಿ–ಮಕ್ಕಳಿಗೆ ತೊಂದರೆ ಆಗುತ್ತಲೇ ಇತ್ತು.’

‘ಇತ್ತೀಚೆಗೆ ನನ್ನನ್ನು ಪತ್ತೆ ಹಚ್ಚಿದ್ದ ಅವರು, ನಾಲ್ಕು ಖಾಲಿ ಚೆಕ್‌ಗಳನ್ನು ಕಿತ್ತುಕೊಂಡು ಅವುಗಳಿಗೆ ಬಲವಂತವಾಗಿ ಸಹಿ ಹಾಕಿಸಿಕೊಂಡಿದ್ದರು. ಇದರಿಂದಾಗಿ ಆ ಸೋದರರ ಹೆಸರು ಬರೆದಿಟ್ಟು ಕುಟುಂಬ ಸದಸ್ಯರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೆವು. ಈ ವಿಚಾರ ಕುಟುಂಬದ ಆಪ್ತರೊಬ್ಬರಿಗೆ ಗೊತ್ತಾಗಿ, ಬೈದು ಬುದ್ಧಿ ಹೇಳಿದ್ದರು.’

‘ಕರೆ ಮಾಡಿದಾಗ ಕಮಿಷನರ್ 15 ನಿಮಿಷ ನನ್ನ ಕಷ್ಟ ಆಲಿಸಿದರು. ಅವರ ಸೂಚನೆಯಂತೆ ಚಿಕ್ಕಜಾಲ ಠಾಣೆಗೆ ತೆರಳಿದೆವು. ಪೊಲೀಸರು ನೆರವಾದರು. ಇದೇ ಸೋಮವಾರ ರಾಮ್‌ದಾಸ್ ನನ್ನನ್ನು ಹಿರಿಯೂರು ಉಪನೋಂದಣಾಧಿಕಾರಿ ಕಚೇರಿಗೆ ಕರೆದುಕೊಂಡು ಹೋಗಿ, ಆಧಾರ ಪತ್ರಗಳನ್ನು ಬಿಡುಗಡೆ ಮಾಡಿಸಿಕೊಟ್ಟರು’ ಎಂದು ನಾರಾಯಣಸ್ವಾಮಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.