ADVERTISEMENT

Bengaluru Crime | ಆಸ್ತಿಗಾಗಿ ತಂದೆ ಕೊಂದ ಮಗ; ಸ್ನೇಹಿತನ ಬಂಧನ

ಕೊಲೆಗೆ ಸಹಕರಿಸಿದ ಸ್ನೇಹಿತನಿಗೆ ₹10 ಲಕ್ಷ ಆಮಿಷ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 0:04 IST
Last Updated 22 ಸೆಪ್ಟೆಂಬರ್ 2025, 0:04 IST
<div class="paragraphs"><p>ಸಾವು</p></div>

ಸಾವು

   

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಆಸ್ತಿಯ ಆಸೆಗಾಗಿ ಸ್ನೇಹಿತನ ಜತೆ ಸೇರಿ ತಂದೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಸ್ನೇಹಿತನನ್ನು ಬಂಧಿಸಲಾಗಿದೆ.

ದಾಸರಹಳ್ಳಿ ಕೆಂಪೇಗೌಡ ನಗರದ ಮಂಜಣ್ಣ (55) ಕೊಲೆಯಾದವರು.

ADVERTISEMENT

ಸೆಪ್ಟೆಂಬರ್ 2 ರಂದು ಮನೆಯ ಸೋಫಾದ ಮೇಲೆ ಮಲಗಿದ್ದ ಮಂಜಣ್ಣ ಅವರನ್ನು ಮಗ ಮನೋಜ್ ಮತ್ತು ಆತನ ಸ್ನೇಹಿತ ಪ್ರವೀಣ್ ರೆಡ್ಡಿ ಕುತ್ತಿಗೆಗೆ ಟವಲ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಹೃದಯಾಘಾತದಿಂದ ತಂದೆ ಮೃತಪಟ್ಟಿದ್ದಾರೆ ಎಂದು ಬಿಂಬಿಸಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಆರೋಪಿ ಪ್ರವೀಣ್ ರೆಡ್ಡಿಯನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮನೋಜ್‌ಗಾಗಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಜಣ್ಣ ಆರ್ಥಿಕವಾಗಿ ಸ್ಥಿತಿವಂತರಾಗಿದ್ದರು. ಐದಾರು ವಾಣಿಜ್ಯ ಮಳಿಗೆಗಳು , ನಾಲ್ಕು ನಿವೇಶನಗಳು ಹಾಗೂ ಒಂದು ವುಡ್ ವರ್ಕ್ಸ್ ಫ್ಯಾಕ್ಟರಿ ಹೊಂದಿದ್ದರು. ಇಬ್ಬರು ಗಂಡು ಮಕ್ಕಳ ಪೈಕಿ ಹಿರಿಯ ಮಗ ಮನೋಜ್ ಯಾವುದೇ ಕೆಲಸ ಮಾಡದೇ ಸುತ್ತಾಡಿಕೊಂಡಿದ್ದ. ದುಶ್ಚಟಗಳ ದಾಸನಾಗಿದ್ದು, ಹಣಕ್ಕಾಗಿ ತಂದೆಯನ್ನು ಪೀಡಿಸುತ್ತಿದ್ದ. ಬೈದು ಬುದ್ಧಿ ಹೇಳುತ್ತಿದ್ದರೂ ಆತ ಬದಲಾಗಿರಲಿಲ್ಲ.

ತಂದೆಯನ್ನು ಕೊಲೆ ಮಾಡಿದರೆ ತನಗೆ ಆಸ್ತಿ ಬರಲಿದೆ ಎಂದು ಭಾವಿಸಿದ್ದ ಮನೋಜ್, ಈ ವಿಚಾರವನ್ನು ಸ್ನೇಹಿತ ಪ್ರವೀಣ್ ರೆಡ್ಡಿಗೂ ಹೇಳಿದ್ದ. ಕೃತ್ಯಕ್ಕೆ ಸಹಕರಿಸಿದರೆ ಆಸ್ತಿ ಬಂದ ಬಳಿಕ ₹10 ಲಕ್ಷ ಕೊಡುವುದಾಗಿ ಆಮಿಷವೊಡ್ಡಿದ್ದ. ವುಡ್ ವರ್ಕ್ಸ್ ಫ್ಯಾಕ್ಟರಿಯಲ್ಲಿದ್ದ ತಂದೆಗೆ ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಮನೋಜ್ ಹೇಳಿದ್ದ. ಅದರಂತೆ ಅವರು ಮನೆಗೆ ಹೋಗಿ ಸೋಫಾದ ಮೇಲೆ ನಿದ್ದೆಗೆ ಜಾರಿದ್ದರು. 

ಇದಾದ ಕೆಲ ಹೊತ್ತಿನ ಬಳಿಕ ಮನೆಗೆ ಬಂದ ಮನೋಜ್ ಹಾಗೂ ಪ್ರವೀಣ್ ರೆಡ್ಡಿ, ಮಂಜಣ್ಣ ಅವರ ಕುತ್ತಿಗೆಗೆ ಟವೆಲ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಮಂಜಣ್ಣ ಸಾವಿನ ಬಗ್ಗೆ ಆರಂಭದಲ್ಲೇ ಅನುಮಾನಗೊಂಡಿದ್ದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿಸಿ ಕುಟುಂಬಕ್ಕೆ ಹಸ್ತಾಂತರಿಸಿದ್ದರು. ಬಳಿಕ ಕುಟುಂಬದವರು ಅಂತ್ಯಕ್ರಿಯೆ ನೆರವೇರಿಸಿದ್ದರು.

ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ 

ಮರಣೋತ್ತರ ಪ‍ರೀಕ್ಷಾ ವರದಿ ಬಂದ ಬಳಿಕ ತನಿಖೆ ನಡೆಸಿದ ಪೊಲೀಸರು, ಮೃತ ವ್ಯಕ್ತಿಯ ಮನೆ ಸುತ್ತಮುತ್ತ ಕಟ್ಟಡಗಳ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದರು. ಸೆಪ್ಟೆಂಬರ್ 2ರ ಮಧ್ಯಾಹ್ನ ಮನೋಜ್, ಪ್ರವೀಣ್ ರೆಡ್ಡಿ ಮನೆ ಪ್ರವೇಶಿಸಿ ಕೆಲ ಹೊತ್ತಿನ ಬಳಿಕ ಗಾಬರಿಯಲ್ಲಿ ಹೊರಗೆ ಹೋಗಿರುವುದು ಗೊತ್ತಾಗಿದೆ. ಈ ಬಗ್ಗೆ ಅನುಮಾನಗೊಂಡ ಪೊಲೀಸರು ಇಬ್ಬರ ಮೊಬೈಲ್ ಕರೆಗಳ ವಿವರ ಸಂಗ್ರಹಿಸಿ ಪರಿಶೀಲಿಸಿದ್ದಾರೆ. ನಂತರ ಪ್ರವೀಣ್ ರೆಡ್ಡಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ರಹಸ್ಯ ತಿಳಿಸಿದ್ದಾನೆ. ಬಳಿಕ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.