ADVERTISEMENT

ಸಮಾಧಿ ಮೇಲೆ ಕಟ್ಟಡ ನಿರ್ಮಿಸಿ: ಕಬ್ಬನ್‌ಪಾರ್ಕ್‌ನಲ್ಲಿ ಕಟ್ಟಡಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 18:19 IST
Last Updated 3 ನವೆಂಬರ್ 2019, 18:19 IST
ಕಬ್ಬನ್ ಪಾರ್ಕ್ ನಡಿಗೆದಾರರ ಸಂಘಟನೆಯ ನೇತೃತ್ವದಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.
ಕಬ್ಬನ್ ಪಾರ್ಕ್ ನಡಿಗೆದಾರರ ಸಂಘಟನೆಯ ನೇತೃತ್ವದಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.   

ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಾಣ ವಿರೋಧಿಸಿ ಭಾನುವಾರ ಪ್ರತಿಭಟನೆ ಮಾಡಲಾಯಿತು.ಕಬ್ಬನ್ ಪಾರ್ಕ್ ನಡಿಗೆದಾರರ ಸಂಘಟನೆಯ ನೇತೃತ್ವದಲ್ಲಿ ಬೆಳಿಗ್ಗೆ 7ರಿಂದಲೇ ಪ್ರಾರಂಭವಾದ ಪ್ರತಿಭಟನೆ 11ರವರೆಗೆ ಮುಂದುವರಿಯಿತು.ಪರಿಸರ ಹೋರಾಟಗಾರರು, ವಿವಿಧ ಸಂಘ–ಸಂಸ್ಥೆಗಳ ಸದಸ್ಯರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎಂದಿನಂತೆ ವಾಯುವಿಹಾರಕ್ಕೆ ಬಂದಿದ್ದವರೂ ಪ್ರತಿಭಟನೆಗೆ ಕೈಜೋಡಿಸಿದರು.

‘ಕಬ್ಬನ್ ಉದ್ಯಾನದ ವಾತಾವರಣ ಹಾಳು ಮಾಡಬೇಡಿ’, ‘ಕಟ್ಟಡ ನಿರ್ಮಾಣ ನಿಲ್ಲಿಸಿ ಕಬ್ಬನ್ ಪಾರ್ಕ್ ಉಳಿಸಿ’ ‘ಲಾಲ್‌ಬಾಗ್‌ನಂತೆ ಕಬ್ಬನ್ ಉದ್ಯಾನ ಅಭಿವೃದ್ಧಿಗೊಳಿಸಿ’ ಎಂಬ ಘೋಷಣೆ ಕೂಗಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ‘ಕಬ್ಬನ್‌ ಉದ್ಯಾನದಲ್ಲಿ ಯಾವುದೇ ಕಾರಣಕ್ಕೂ ಏಳು ಮಹಡಿ ಕಟ್ಟಡ ನಿರ್ಮಿಸಲು ಬಿಡುವುದಿಲ್ಲ. ಒಂದು ವೇಳೆ, ಇದೇ ಅಂತಿಮ ನಿರ್ಧಾರವಾದರೆ ನಮ್ಮ ಹೆಣದ ಮೇಲೆ ಕಟ್ಟಡ ನಿರ್ಮಿಸಿ’ ಎಂದು ಸವಾಲು ಹಾಕಿದರು.

ADVERTISEMENT
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು

‘ಕಬ್ಬನ್‌ ಉದ್ಯಾನ ಮೊದಲು 300 ಎಕರೆ ಪ್ರದೇಶದಲ್ಲಿ ಹರಡಿಕೊಂಡಿತ್ತು. ಈಗ ಅದು 150 ಎಕರೆಗೆ ಇಳಿದಿದೆ ಎಂದು ಅಧಿಕಾರಿಗಳೇ ಹೇಳುತ್ತಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಈ ಉದ್ಯಾನವೇ ಮಾಯವಾಗಿಬಿಡುತ್ತದೆ. ಸರ್ಕಾರವೇ ಎದ್ದು ಬೇಲಿ ಮೇಯ್ದಂತೆ ಆಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅಧಿಕಾರಿಗಳು ಸಂವಿಧಾನ ರಕ್ಷಕರಾಗಬೇಕು. ಸರ್ಕಾರ ತಪ್ಪು ಮಾಡುತ್ತಿದ್ದರೆ ತಿದ್ದಬೇಕು. ಆದರೆ, ಈ ಕೆಲಸವಾಗುತ್ತಿಲ್ಲ. ಜನ ಎಚ್ಚೆತ್ತುಕೊಳ್ಳದಿದ್ದರೆ ಕಬ್ಬನ್‌ ಉದ್ಯಾನವನ್ನು ಸರ್ಕಾರ ರುದ್ರಭೂಮಿಯನ್ನಾಗಿ ಮಾಡಿಬಿಡುತ್ತದೆ. ಇಲ್ಲಿ ಯಾವ ಕಟ್ಟಡ ನಿರ್ಮಿಸಲೂ ಬಿಡುವುದಿಲ್ಲ. ಈ ಹೋರಾಟಕ್ಕೆ ನಗರದ ಎಲ್ಲರೂ ಕೈಜೋಡಿಸಬೇಕು’ ಎಂದರು.

ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿ, ‘ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದಾಗಿತ್ತು. ಈಗಿನ ಕೋರ್ಟ್‌ಗಳು ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರಂತೆ ನಡೆದುಕೊಳ್ಳುತ್ತಿವೆ. ಉದ್ಯಾನಗಳು ಕಣ್ಮರೆಯಾದರೆ ದೆಹಲಿಯಂತೆ ಬೆಂಗಳೂರು ಕೂಡ ಗ್ಯಾಸ್‌ ಚೇಂಬರ್‌ ಆಗಿಬಿಡುತ್ತದೆ’ ಎಂದರು.

ಕಬ್ಬನ್‌ಪಾರ್ಕ್‌ನಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ನಟಿ ವಸುಂಧರಾ ದಾಸ್ ಇತರರು ಪಾಲ್ಗೊಂಡಿದ್ದರು.

ಕಬ್ಬನ್‌ ಪಾರ್ಕ್‌ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್‌, ‘ಕಬ್ಬನ್‌ ಉದ್ಯಾನದಲ್ಲಿ ಮೊದಲು ಅನೈತಿಕ ಚಟುವಟಿಕೆ ನಡೆಯುತ್ತಿದ್ದವು. ನಾವು ಹೋರಾಟ ಮಾಡಿದ ಮೇಲೆ ಈಗ ಕಡಿಮೆಯಾಗಿದೆ. ನಿರಂತರ ಹೋರಾಟದಿಂದ ಸರ್ಕಾರಿ ರಜಾ ದಿನಗಳಲ್ಲಿ ಉದ್ಯಾನದೊಳಗೆ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಈಗ ಈ ನಿರ್ಧಾರದ ವಿರುದ್ಧವೂ ಹೋರಾಡಬೇಕು. ಸದ್ಯ,ಹೈಕೋರ್ಟ್‌ ಏಕಸದಸ್ಯ ಪೀಠ ಈಗ ಇದಕ್ಕೆ ಅನುಮತಿ ನೀಡಿದೆ. ಈ ಆದೇಶದ ವಿರುದ್ಧ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು’ ಎಂದರು.

ವಕೀಲ ಎನ್.ಪಿ.ಅಮೃತೇಶ್‌, ‘ಉದ್ಯಾನದಲ್ಲಿ ಹೊಸ ಕಟ್ಟಡ ನಿರ್ಮಿಸುವ ಕುರಿತು ನ್ಯಾಯಾಲಯವೇ ಅರ್ಜಿ ಹಾಕಿಕೊಂಡು, ನ್ಯಾಯಾಲಯವೇ ಅನುಮತಿ ನೀಡುತ್ತಿದೆ. ಸರ್ಕಾರಿ ಜಾಗವನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳಬಾರದು’ ಎಂದರು.

‘1970ರಲ್ಲಿ ಉತ್ತರಾಖಂಡದಲ್ಲಿ ಪರಿಸರ ಸಂರರಕ್ಷಣೆಗಾಗಿ ನಡೆದ ‘ಚಿಪ್ಕೋ ಚಳುವಳಿ’ ಮಾದರಿಯ ಹೋರಾಟಕ್ಕೆ ಸಜ್ಜಾಗುವಂತಹ ಅನಿವಾರ್ಯತೆಯನ್ನು ರಾಜ್ಯ ಸರ್ಕಾರ ಸೃಷ್ಟಿಸಿದೆ’ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಸಂಚಿತ್‌ ಸಹಾನಿ ಹೇಳಿದರು.

ನಟಿ ಅಕ್ಷತಾ ರಾವ್‌, ‘ಪರಿಸರ ನಮಗೆ ಪ್ರಾಣವಿದ್ದಂತೆ. ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ’ ಎಂದರು.

‘ಪರಿಕ್ರಮ’ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಲ್ಲದೆ, ಪರಿಸರ ಹೋರಾಟಗಾರರಾದ ರವಿಚಂದ್ರ, ವೆಂಕಟೇಶ್‌, ಬೆಮೆಲ್‌ ದೇಸಾಯಿ, ನರೇಶ್‌, ಬಿ.ಎಚ್. ರಂಗನಾಥ್‌ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬೃಹತ್‌ ಪ್ರತಿಭಟನೆಗೆ ನಿರ್ಧಾರ
ಹೊಸ ಕಟ್ಟಡ ನಿರ್ಮಿಸಲು ಉದ್ದೇಶಿಸಿರುವ ಜಾಗದಲ್ಲಿ ಇದೇ ಶನಿವಾರ (ನ.16) ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲು ನಡಿಗೆದಾರರ ಸಂಘ ನಿರ್ಧರಿಸಿದೆ.

‘ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಲಾಗುವುದು. ಸಾವಿರಾರು ಜನ ಸೇರಲಿದ್ದಾರೆ. ನಗರದ ಎಲ್ಲರೂ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು’ ಎಂದು ಸಂಘದ ಅಧ್ಯಕ್ಷ ಉಮೇಶ್‌ ವಿನಂತಿಸಿದರು.

**
7 ಮಹಡಿ ಕಟ್ಟಡ ಕಟ್ಟುವ ಅಗತ್ಯವಿದ್ದರೂ, ಅದನ್ನು ಕಬ್ಬನ್‌ ಪಾರ್ಕ್‌ನಲ್ಲೇ ಏಕೆ ನಿರ್ಮಿಸ<br/>ಬೇಕು? ದಯವಿಟ್ಟು ಪಾರ್ಕ್‌ ಇರುವ ಹಾಗೆಯೇ ಉಳಿಸಬೇಕು.
–ವಸುಂಧರಾ ದಾಸ್, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.