ADVERTISEMENT

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆ: ಹೆಚ್ಚಿನ ಪರಿಹಾರಕ್ಕೆ ಸಂತ್ರಸ್ತರ ಆಗ್ರಹ

ಸರ್ಕಾರದ ನಿರ್ಧಾರ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 14:44 IST
Last Updated 13 ಜನವರಿ 2026, 14:44 IST
   

ಬೆಂಗಳೂರು: ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ– 1, ಬಿಬಿಸಿ) ಯೋಜನೆಗೆ ಸ್ವಾಧೀನಪಡಿಸಿಕೊಳ್ಳುತ್ತಿರುವ ಜಮೀನಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸಂತ್ರಸ್ತರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಅವಕಾಶ ನೀಡದ ಪೊಲೀಸರು, ಪ್ರತಿಭಟನಕಾರರನ್ನು ವಶಕ್ಕೆ ಪಡೆದು ಬಿಎಂಟಿಸಿ ಬಸ್‌ನಲ್ಲಿ ಸಿ.ಎ.ಆರ್‌. ಕೇಂದ್ರಕ್ಕೆ ಕರೆದೊಯ್ದು ಬಳಿಕ ಬಿಡುಗಡೆ ಮಾಡಿದರು.

ನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ವರ್ತುಲ ರಸ್ತೆ ನಿರ್ಮಾಣಕ್ಕೆ ಬಿಡಿಎ ವತಿಯಿಂದ 2005ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. 20 ವರ್ಷ ಕಳೆದರೂ ಯೋಜನೆಯಡಿ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಿಲ್ಲ. ಕಳೆದ ಸಚಿವ ಸಂಪುಟ ಸಭೆಯಲ್ಲಿ ಅವೈಜ್ಞಾನಿಕ ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆ ಪ್ರಕಾರ ಪರಿಹಾರ ನೀಡಬೇಕು ಎಂದು ಸಂತ್ರಸ್ತರು ಒತ್ತಾಯಿಸಿದರು.

‘ಬೆಂಗಳೂರು ಅಭಿವೃದ್ಧಿಗಾಗಿ ಜಮೀನು ನೀಡಲು ಸಿದ್ದರಿದ್ದೇವೆ. ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಮಾರುಕಟ್ಟೆ ದರವನ್ನು ಸರ್ಕಾರ ನೀಡಬೇಕು. ಈ ನಿಟ್ಟಿನಲ್ಲಿ ರೈತರ ಪರ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ ಭೂ ಪರಿಹಾರ ನೀಡಲು ಕ್ರಮವಹಿಸಬೇಕು. ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಸರ್ಕಾರಕ್ಕೆ ಸಲ್ಲಿಸಿರುವ ಭೂ ಪರಿಹಾರದ ವರದಿ ಕುರಿತು ಪಾರದರ್ಶಕವಾಗಿ ಮಾಹಿತಿ ನೀಡುವಂತೆ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ ಮನವಿ ಕೊಡಲು ಕಚೇರಿ ಒಳಗೆ ಬಿಡುತ್ತಿಲ್ಲ. ನಮ್ಮ ಜಮೀನಿನ ಬಳಿ ಅಧಿಕಾರಿಗಳನ್ನು ಸುಳಿಯಲು ಬಿಡುವುದಿಲ್ಲ. ಸರ್ಕಾರ ನಿಗದಿಪಡಿಸಿರುವ ಪರಿಹಾರ ಕಾನೂನಿನ ವಿರುದ್ಧವಾಗಿದೆ. ಎಲ್ಲಾ ಸರ್ಕಾರಗಳು ರೈತರಿಗೆ ಮೋಸ ಮಾಡಿವೆ’ ಎಂದು ರೈತ ಮುಖಂಡ ರಘು ಆಕ್ರೋಶ ವ್ಯಕ್ತಪಡಿಸಿದರು.

‘ವೈಜ್ಞಾನಿಕವಾಗಿ 2013ರ ಭೂಸ್ವಾಧೀನ ಕಾಯ್ದೆ ಅನುಸಾರ ಪರಿಹಾರ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ. 2005ರಲ್ಲಿ ಈ ಯೋಜನೆಗೆ ₹1 ಸಾವಿರ ಕೋಟಿ ವೆಚ್ಚವಾಗುತ್ತಿತ್ತು. ಈಗ ₹27 ಸಾವಿರ ಕೋಟಿ ಬೇಕಾಗಿದೆ. 2013ರ ಕಾಯ್ದೆ ಪ್ರಕಾರ ಪರಿಹಾರ ನೀಡಲು ₹ 1 ಲಕ್ಷ ಕೋಟಿ ಬೇಕಾಗುತ್ತದೆ. ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಲು ಅಭಿಯಾನ ಆರಂಭಿಸಲಾಗುವುದು’ ಎಂದು ಎಚ್ಚರಿಸಿದರು.

‘20 ವರ್ಷದ ಯೋಜನೆ ಇದು. ಈವರೆಗೂ ಪರಿಹಾರ ನೀಡಿಲ್ಲ. ಜಮೀನು ವಾಪಸ್ ನೀಡಿ, ಎನ್‌ಒಸಿ ಕೊಟ್ಟು ಬಿಡಲಿ.  ಮಕ್ಕಳ ಶಿಕ್ಷಣ ಮತ್ತು ಮದುವೆಗೆ ಹಣ ಬೇಕಾಗಿದೆ. ರಾಜಕಾರಣಿಗಳು ಮತ ಕೇಳಲು ಮನೆ ಬಾಗಿಲಿಗೆ ಬರುತ್ತಾರೆ. ಪರಿಹಾರ ಕೋರಿ ರೈತರು ಕಚೇರಿ ಬಾಗಿಲಿಗೆ ಬಂದರೂ ಒಳಗೆ ಬಿಡುತ್ತಿಲ್ಲ’ ಎಂದು ಸಂತ್ರಸ್ತೆ ಇಂದ್ರಮ್ಮ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.