ADVERTISEMENT

48 ಉಪನ್ಯಾಸಕರ ಪರಿಷ್ಕೃತ ಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 21:43 IST
Last Updated 1 ಸೆಪ್ಟೆಂಬರ್ 2022, 21:43 IST

ಬೆಂಗಳೂರು: ಪದವಿಪೂರ್ವ ಕಾಲೇಜು ಉಪನ್ಯಾಸಕರ ಖಾಲಿ ಹುದ್ದೆ ಭರ್ತಿಗೆ 2020ರಲ್ಲಿ ಪ್ರಕಟಿಸಿದ್ದ ಹೆಚ್ಚುವರಿ ಪಟ್ಟಿಯಲ್ಲಿನ 48 ಅಭ್ಯರ್ಥಿಗಳ ಪರಿಷ್ಕೃತ ಪಟ್ಟಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಗುರುವಾರ ಬಿಡುಗಡೆ ಮಾಡಿದೆ.

ರಾಜ್ಯದ ವಿವಿಧ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇದ್ದ 1,203 ಹುದ್ದೆಗಳಿಗೆ 2015ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. 2018 ಡಿಸೆಂಬರ್‌ನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆ ನಡೆಸಿತ್ತು.

ವಿವಿಧ ವಿಷಯ, ಮೀಸಲಾತಿ ಆಧಾರದಲ್ಲಿ ಸಿದ್ಧವಾಗಿದ್ದ ಆಯ್ಕೆಪಟ್ಟಿ ಅನುಸಾರ ಅಭ್ಯರ್ಥಿಗಳಿಗೆ 2020ರಲ್ಲಿ ನೇಮಕಾತಿ ಆದೇಶ ನೀಡಲಾಗಿತ್ತು. ಅಂದು 48 ಅಭ್ಯರ್ಥಿಗಳು ವಿವಿಧ ಕಾರಣಗಳಿಂದ ಉಪನ್ಯಾಸಕರ ಹುದ್ದೆಗೆ ವರದಿ ಮಾಡಿಕೊಂಡಿರಲಿಲ್ಲ. ಖಾಲಿ ಉಳಿದಿದ್ದ ಆ ಹುದ್ದೆಗಳಿಗೆ ಈಚೆಗೆ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಜ್ಯೇಷ್ಠತೆ ಉಲ್ಲಂಘಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿತ್ತು. ಈ ಕುರಿತು ‘ಪ್ರಜಾವಾಣಿ’ ಆ.27ರ ಸಂಚಿಕೆಯಲ್ಲಿ ‘ನಿಯಮ ಉಲ್ಲಂಘಿಸಿ ನೇಮಕ’ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು.

ಪರಿಷ್ಕೃತ ಪಟ್ಟಿಗೆ ಆಕ್ಷೇಪಣೆಗಳು ಇದ್ದರೆ ಸೆ.8ರ ಸಂಜೆ 5.30ರ ಒಳಗೆ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.