ನಗರದ ಎನ್.ಆರ್. ಕಾಲೊನಿಯಲ್ಲಿ ನೆಟ್ಟಕಲ್ಲಪ್ಪ ವೃತ್ತದಿಂದ ಎನ್.ಆರ್. ಕಾಲೊನಿ–ಕಟ್ಟೆ ಭವನ ರಸ್ತೆಯನ್ನು ಅಗೆದು ಹಾಕಿರುವುದು
ಪ್ರಜಾವಾಣಿ ಚಿತ್ರ: ರಂಜು ಪಿ.
ಬೆಂಗಳೂರು: ನರಸಿಂಹರಾಜ ಕಾಲೊನಿ (ಎನ್.ಆರ್.ಕಾಲೊನಿ) ವೃತ್ತದಿಂದ ನೆಟ್ಟಕಲ್ಲಪ್ಪ ವೃತ್ತದವರೆಗಿನ ರಸ್ತೆಯನ್ನು ವೈಟ್ ಟಾಪಿಂಗ್ ಕಾಮಗಾರಿಗಾಗಿ ಅಗೆದು ಹಾಕಿರುವುದರಿಂದ ಎನ್.ಆರ್. ಕಾಲೊನಿ ದೂಳುಮಯವಾಗಿದೆ. ಜನರಿಗೆ ಓಡಾಡುವುದಕ್ಕೆ ಸಮಸ್ಯೆಯಾಗಿದೆ. ಸುತ್ತಮುತ್ತಲಿನ ನಿವಾಸಿಗಳು ದೂಳು ಮಧ್ಯೆ ಬದುಕು ಕಳೆಯುವಂತಾಗಿದೆ.
ಬಿಬಿಎಂಪಿಯಿಂದ ವೈಟ್ ಟಾಪಿಂಗ್ ಕಾಮಗಾರಿ, ಜಲಮಂಡಳಿಯಿಂದ ಒಳಚರಂಡಿ ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಜೊತೆಗೆ ಮಳೆನೀರು ಚರಂಡಿಯನ್ನೂ ನಿರ್ಮಿಸಲಾಗುತ್ತಿದೆ. ಕೆಲವೆಡೆ ರಸ್ತೆ ಬದಿಯಲ್ಲಿ ಅಗೆದು ಪೈಪ್ ಹಾಕಿ ಮುಚ್ಚಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ನೆಲ ಅಗೆದು ಹಾಗೆ ಬಿಡಲಾಗಿದೆ. ರಸ್ತೆಯ ಎರಡೂ ಕಡೆ ಒಟ್ಟೊಟ್ಟಿಗೆ ಕಾಮಗಾರಿ ನಡೆಸುತ್ತಿರುವುದರಿಂದ ವಾಹನ ಪಾರ್ಕಿಂಗ್‌ಗೂ ಸಮಸ್ಯೆಯಾಗಿದೆ. ಈ ರಸ್ತೆಯಲ್ಲಿ ಬಸ್ ಸಂಚಾರವೇ ಸ್ಥಗಿತಗೊಂಡಿದೆ. ಕಟ್ಟೆ ಭವನ ರಸ್ತೆಯಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಒಳ ರಸ್ತೆಗಳು ಈ ರಸ್ತೆಯನ್ನು ಸಂಪರ್ಕಿಸುವ ಜಾಗದಲ್ಲಿ ಅಗೆದಿರುವುದರಿಂದ ವಾಹನಗಳೆಲ್ಲ ಸುತ್ತಿಬಳಸಿ ಹೋಗಬೇಕಿದೆ. ತ್ಯಾಗರಾಜನಗರ, ಉತ್ತರಹಳ್ಳಿ ಕಡೆ ಹೋಗುವವರಿಗೆ ಇಲ್ಲಿ ಬಸ್ ಸಂಪರ್ಕ ಇಲ್ಲದೇ ಆಟೊ ಮಾಡಿಕೊಂಡು ತೆರಳಬೇಕಾದ ಅನಿವಾರ್ಯ ಸ್ಥಿತಿ ಉಂಟಾಗಿದೆ. ಒಳರಸ್ತೆಗಳಲ್ಲಿ ವಾಹನದಟ್ಟಣೆ ಹೆಚ್ಚಾಗಿದೆ.
’ಇಲ್ಲಿನ ರಸ್ತೆ ಹಾಳಾಗಿರಲಿಲ್ಲ. ಆದರೂ, ಅಭಿವೃದ್ಧಿ ಹೆಸರಲ್ಲಿ ಅಗೆದು ಹಾಕಿದ್ದಾರೆ. ಅಂಗಡಿ, ಹೋಟೆಲ್, ಬೇಕರಿಗಳಿಗೆ ಹೋಗುವಂತಿಲ್ಲ. ಎಲ್ಲ ಕಡೆ ದೂಳು ತುಂಬಿದೆ. ಜೊತೆಗೆ ವಾಹನಗಳನ್ನು ಪಾರ್ಕಿಂಗ್ ಮಾಡಲು ಸಾಧ್ಯವಾಗದ ಕಾರಣ, ಜನಸಂಚಾರವೇ ಕಡಿಮೆಯಾಗಿದೆ’ ಎಂದು ಎನ್.ಆರ್. ಕಾಲೊನಿ 3ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ ನಿವಾಸಿ ಅನೂಜ್ ತಿಳಿಸಿದರು.
‘ಮೂರೂವರೆ ತಿಂಗಳಿನಿಂದ ಕಷ್ಟ ಅನುಭವಿಸುತ್ತಿದ್ದೇವೆ. ಜನರು ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ. ನಾವು ಇಲ್ಲೇ ವ್ಯಾಪಾರ ಮಾಡುತ್ತಿರುವುದರಿಂದ ದೂಳು ಹೊಟ್ಟೆ ಸೇರುತ್ತಿದೆ’ ಎಂದು ಬೇಕರಿ ವ್ಯಾಪಾರಸ್ಥ ಹೇಮಂತ್ ಅಸಹಾಯಕತೆ ತೋಡಿಕೊಂಡರು.
ಸಮಯ ಬೇಕು: ನಗರದ ವಿವಿಧ ಭಾಗಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಒಳಚರಂಡಿ ಕೊಳವೆ ಅಳವಡಿಕೆ, ಮಳೆನೀರಿನ ಚರಂಡಿ ನಿರ್ಮಾಣ ಸಹಿತ ಮೂಲ ಅವಶ್ಯಕತೆಗಳೊಂದಿಗೆ ಕಾಮಗಾರಿ ನಡೆಸಬೇಕಿರುವುದರಿಂದ ಹೆಚ್ಚು ಸಮಯ ಬೇಕಾಗುತ್ತದೆ. ಆದಷ್ಟು ಬೇಗ ಕೆಲಸವನ್ನು ಪೂರ್ಣಗೊಳಿಸಲೆಂದೇ ಎರಡೂ ಕಡೆ ಏಕಕಾಲದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಒಳಚರಂಡಿ, ಚರಂಡಿ, ಯುಟಿಲಿಟಿ ಪೈಪ್ ಅಳವಡಿಸುವ ಕೆಲಸ ಮುಗಿದ ಬಳಿಕ ಕಾಂಕ್ರಿಟ್ ಹಾಕಿದ ನಂತರ, ಪಾದಚಾರಿ ಮಾರ್ಗ ನಿರ್ಮಾಣ ಕಾರ್ಯ ನಡೆಯಲಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್ ಪ್ರತಿಕ್ರಿಯೆ ನೀಡಲು ಕರೆ ಸ್ವೀಕರಿಸಲಿಲ್ಲ.
ಸುಮಾರು ನಾಲ್ಕು ತಿಂಗಳಿನಿಂದ ಕಾಮಗಾರಿ ನಡೆಯುತ್ತಿದೆ. ಫೆಬ್ರುವರಿ–ಮಾರ್ಚ್ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಇಲ್ಲಿ ಕಾಮಗಾರಿ ನಡೆಯುತ್ತಿರುವ ವೇಗ ನೋಡಿದರೆ ಮಾರ್ಚ್ ಅಲ್ಲ ಆನಂತರ ಆರು ತಿಂಗಳು ಬೇಕಾಗಬಹುದು. ನಾವು ಅಭಿವೃದ್ಧಿ ಬೇಡ ಎಂದು ಹೇಳುವುದಿಲ್ಲ. ಕಾಮಗಾರಿಯನ್ನು ವೇಗವಾಗಿ ಮಾಡುವ ಮೂಲಕ ಜನರಿಗೆ ಸಮಸ್ಯೆ ಕಡಿಮೆ ಮಾಡಬೇಕು.-ನಾರಾಯಣ ಸ್ವಾಮಿ, ಬಾಲಾಜಿ ಎಂಟರ್‌ಪ್ರೈಸಸ್
ನಮ್ಮ ಸ್ಟುಡಿಯೊದ ಗಾಜು ಒರೆಸಿ ಒರೆಸಿ ಸಾಕಾಗಿ ಹೋಗಿದೆ. ಒಮ್ಮೆ ಒರೆಸಿದರೆ ಕೆಲವೇ ಹೊತ್ತಿನಲ್ಲಿ ಮತ್ತೆ ದೂಳು ಕುಳಿತಿರುತ್ತದೆ. ಈ ರಸ್ತೆ ಅಗೆದು ಹಾಕಿದ ಮೇಲೆ ಹೊಸ ಗ್ರಾಹಕರಲ್ಲ ಕಾಯಂ ಗ್ರಾಹಕರೂ ಬರುತ್ತಿಲ್ಲ. ವ್ಯಾಪಾರ ಸಂಪೂರ್ಣ ಬಿದ್ದು ಹೋಗಿದೆ. ಅದಕ್ಕೆ ಸುಮ್ಮನೆ ಗಾಜು ಒರೆಸಿಕೊಂಡು ಕೂರುವುದೇ ಕೆಲಸವಾಗಿದೆ. ದೂಳು ತಿಂದು ನಮ್ಮ ಆರೋಗ್ಯವೂ ಕೆಟ್ಟು ಹೋಗಿದೆ.--ಪಳನಿ ಎಸ್.ಎ. ಫೋಟೊ ಪಾಯಿಂಟ್
ಯಾವಾಗ ಕಾಮಗಾರಿ ಮುಗಿಯುತ್ತದೋ ಎಂದು ಕಾದು ಕುಳಿತಿದ್ದೇವೆ. ಗ್ರಾಹಕರೇ ಬರುತ್ತಿಲ್ಲ. ದೂಳು ಏಳದಂತೆ ದಿನಕ್ಕೆ ಎರಡು ಬಾರಿ ನೀರು ಚಿಮುಕಿಸಬೇಕು. ಆದರೆ ಬಿಬಿಎಂಪಿಯಾಗಲಿ ಒಳಚರಂಡಿ ಮಂಡಳಿಯಾಗಲಿ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಂಗಡಿಯವರೇ ತಮ್ಮ ತಮ್ಮ ಅಂಗಡಿಗಳ ಮುಂದೆ ನೀರು ಹಾಕುತ್ತಿದ್ದಾರೆ. ಬೇಗ ಕಾಮಗಾರಿ ಪೂರ್ಣಗೊಳಿಸಬೇಕು.-ಸ್ವಾಮಿ, ಟೇಲರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.