ADVERTISEMENT

ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ವಿಚಾರಣೆ ನಡೆಸಿ: ಪುರುಷೋತ್ತಮ ಬಿಳಿಮಲೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 15:42 IST
Last Updated 26 ಜೂನ್ 2025, 15:42 IST
ಪುರುಷೋತ್ತಮ ಬಿಳಿಮಲೆ
ಪುರುಷೋತ್ತಮ ಬಿಳಿಮಲೆ   

ಬೆಂಗಳೂರು: ‘ಹೈಕೋರ್ಟ್‌ನಲ್ಲಿ ಕನ್ನಡದಲ್ಲಿಯೇ ವಿಚಾರಣೆ ನಡೆಸುವ ವ್ಯವಸ್ಥೆಯನ್ನು ಜಾರಿ ಮಾಡಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಆಗ್ರಹಿಸಿದ್ದಾರೆ. 

ಈ ಬಗ್ಗೆ ಅವರು ಪತ್ರ ಬರೆದಿದ್ದಾರೆ. ‘ಕೆಲವೇ ನ್ಯಾಯಮೂರ್ತಿಗಳ ವಿಶೇಷ ಆಸಕ್ತಿಯಿಂದ ಕನ್ನಡ ಭಾಷೆಯು ನ್ಯಾಯಾಲಯ ವ್ಯವಸ್ಥೆಯಲ್ಲಿ ಉಸಿರಾಡುತ್ತಿದೆ. ಕಕ್ಷಿದಾರರು, ವಕೀಲರು ಕನ್ನಡದವರೇ ಆಗಿದ್ದರೂ ವಿಚಾರಣೆಗಳು ಮತ್ತು ತೀರ್ಪುಗಳು ಸಾಮಾನ್ಯವಾಗಿ ಇಂಗ್ಲಿಷ್ ಭಾಷೆಯಲ್ಲಿ ಇರುವುದು ವ್ಯವಸ್ಥೆಯ ಅಣಕವಾಗಿದೆ. ಹೈಕೋರ್ಟ್‌ನಲ್ಲಿಯೂ ಕನ್ನಡದಲ್ಲಿ ವಿಚಾರಣಾ ವ್ಯವಸ್ಥೆಯನ್ನು ಜಾರಿಯಲ್ಲಿಡುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕು’ ಎಂದು ಹೇಳಿದ್ದಾರೆ.

‘ಕನ್ನಡದಲ್ಲಿ ಪ್ರಕರಣ ದಾಖಲಿಸಲು ಅನುವು ಮಾಡಿಕೊಟ್ಟಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಜನ ಸಾಮಾನ್ಯರಲ್ಲಿ ಗೌರವ ಹೆಚ್ಚುತ್ತದೆ. ವಿಚಾರಣೆಗಳು, ತೀರ್ಪುಗಳು ಕನ್ನಡ ಭಾಷೆಯಲ್ಲಿ ಬರುವಂತಾದರೆ ನ್ಯಾಯದಾನ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಭರವಸೆ ಮೂಡುತ್ತದೆ’ ಎಂದು ತಿಳಿಸಿದ್ದಾರೆ.

ADVERTISEMENT

ಸಮರ್ಪಕ ಅನುಷ್ಠಾನವಾಗಲಿ: ‘ಹೊರನಾಡು, ಗಡಿನಾಡಿನ ಕನ್ನಡಿಗರ ಪರವಾದ ಆದೇಶಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ನಿರ್ದೇಶಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ. 

‘ಹೊರನಾಡು ಗಡಿನಾಡಿನ ಕನ್ನಡಿಗರನ್ನು ರಾಜ್ಯ ಸರ್ಕಾರವು ನಡೆಸಿಕೊಳ್ಳುತ್ತಿರುವ ರೀತಿ ಸಮಂಜಸವಾಗಿಲ್ಲ ಎನ್ನುವ ಅಭಿಪ್ರಾಯ ದಿನೇ ದಿನೇ ವೃದ್ಧಿಸುತ್ತಿದೆ. ಈ ಸಮುದಾಯದ ಹಿತವನ್ನು ಕಾಯುವಲ್ಲಿ ರಾಜ್ಯ ಸರ್ಕಾರವು ಕಾಲ ಕಾಲಕ್ಕೆ ಹೊರಡಿಸಿರುವ ಆದೇಶಗಳನ್ನು ಬದ್ಧತೆಯಿಂದ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ. 

‘ಅನುಷ್ಠಾನವಾಗದ ಮೀಸಲಾತಿ’

‘ಹೊರನಾಡು ಗಡಿನಾಡಿನ ಕನ್ನಡಿಗರಿಗೆ ಸಂಬಂಧಿಸಿದಂತೆ ದೇಶದ ಯಾವುದೇ ಪ್ರದೇಶದಲ್ಲಿ 1ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ನೇಮಕಾತಿಯಲ್ಲಿ ಶಿಕ್ಷಣದಲ್ಲಿ ರಾಜ್ಯ ಸರ್ಕಾರವು ಶೇ 5ರಷ್ಟು ಮೀಸಲಾತಿಯನ್ನು ಕಲ್ಪಿಸಿದೆ. ಆದರೆ ಈ ಆದೇಶಗಳ ಸಮರ್ಪಕ ಅನುಷ್ಠಾನವನ್ನು ಇಲ್ಲಿನ ಇಲಾಖೆಗಳು ಮಾಡುತ್ತಿಲ್ಲ’ ಎಂದು ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದ್ದಾರೆ. ‘ಸಂಬಂಧಪಟ್ಟ ರಾಜ್ಯಗಳು ನೀಡುವ ಗಡಿನಾಡು ಹೊರನಾಡಿನ ವಿದ್ಯಾರ್ಥಿಗಳ ಜಾತಿ ಆದಾಯ ಪ್ರಮಾಣ ಪತ್ರಗಳಿಗೆ ಅಂಗವಿಕಲರ ಪ್ರಮಾಣ ಪತ್ರಗಳಿಗೆ ಯಾವುದೇ ಮನ್ನಣೆಯನ್ನು ನೀಡುತ್ತಿಲ್ಲ. ಇದು ಹೊರನಾಡು ಗಡಿನಾಡಿನ ಕನ್ನಡಿಗರು ತಾವು ಹೊಂದಿರುವ ಕರ್ನಾಟಕದ ಬಗೆಗಿನ ಅಭಿಮಾನವನ್ನೇ ಸಂದೇಹಿಸುವ ಅವರ ಆತ್ಮವಿಶ್ವಾಸವನ್ನು ಕಸಿಯುವ ಪ್ರಯತ್ನವಾಗಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.