ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ‘ತಾಲ್ಲೂಕು ಕಚೇರಿಯಲ್ಲಿ ಯಾವ ಕೆಲಸಕ್ಕೆ ನಿಮಗೆಲ್ಲಾ ಎಷ್ಟೆಷ್ಟು ಹಣ ಕೊಡಬೇಕು ಎಂದು ರೇಟ್‌ಬೋರ್ಡ್ ಹಾಕಿಬಿಡಿ. ಎಷ್ಟು ಹಣ ಕೊಟ್ಟರೆ ಕೆಲಸವಾಗುತ್ತದೆ ಎಂಬುದು ಆಗ ಎಲ್ಲ ಜನರಿಗೂ ಗೊತ್ತಾಗುತ್ತದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬೆಂಗಳೂರು ದಕ್ಷಿಣ ತಾಲ್ಲೂಕು ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸಚಿವರು ಹೀಗೆ ತೀವ್ರ ತರಾಟೆಗೆ ತೆಗೆದುಕೊಂಡ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೆಯಾಗುತ್ತಿದೆ.
ನಗರದ ಕಂದಾಯ ಭವನದಲ್ಲಿರುವ ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ತಾಲ್ಲೂಕು ಕಚೇರಿಗಳಿಗೆ ಗುರುವಾರ ಬೆಳಿಗ್ಗೆ ದಿಢೀರ್ ಭೇಟಿ ನೀಡಿದ ಸಚಿವರು, ಅಲ್ಲಿನ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಕಚೇರಿ ಅವಧಿ ಆರಂಭವಾಗಿ ಕೆಲ ಗಂಟೆ ಕಳೆದಿದ್ದರೂ ಹಲವು ಸಿಬ್ಬಂದಿ ಮತ್ತು ಅಧಿಕಾರಿಗಳು ಕಚೇರಿಗೆ ಬಂದಿರದೇ ಇರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಕಚೇರಿಯಲ್ಲಿ ನಿಂತಿದ್ದ ಸಾರ್ವಜನಿಕರೊಬ್ಬರು, ಹಲವು ಬಾರಿ ಅಲೆದರೂ ತಮ್ಮ ಕೆಲಸ ಆಗುತ್ತಿಲ್ಲ ಎಂದು ಸಚಿವರ ಕೈಗೆ ದಾಖಲೆ ಪತ್ರಗಳನ್ನು ಇರಿಸಿದರು. ಅದನ್ನು ಪರಿಶೀಲಿಸಿದ ಸಚಿವರು, ಸಂಬಂಧಿತ ಅಧಿಕಾರಿಗಳನ್ನು ಪ್ರಶ್ನಿಸಿದರು.
‘ಪಹಣಿ ತಿದ್ದುಪಡಿಗೆ ಜನವರಿಯಲ್ಲೇ ಆದೇಶವಾಗಿದೆ. ಆರು ತಿಂಗಳಾದರೂ ತಿದ್ದುಪಡಿ ಏಕೆ ಮಾಡಿಲ್ಲ’ ಎಂದು ಪ್ರಶ್ನಿಸಿದರು. ಸಂಬಂಧಿತ ಅಧಿಕಾರಿ, ‘ಕೇಸ್ ವರ್ಕರ್ ಕಡತವನ್ನು ನೀಡಿಲ್ಲ’ ಎಂದರು. ‘ಇವರು ಹತ್ತಾರು ಬಾರಿ ಬಂದಿದ್ದಾರೆ. ಕೇಸ್ ವರ್ಕರ್ ಕಡತ ರವಾನೆ ಮಾಡಿಲ್ಲ ಎಂದಾದರೆ, ನೀವೇ ಸೂಚಿಸಿ ಕಡತವನ್ನು ತರಿಸಿಕೊಳ್ಳಬಹುದಿತ್ತಲ್ಲವೇ’ ಎಂದು ಪ್ರಶ್ನಿಸಿದರು.
ಅದಕ್ಕೆ ಅಧಿಕಾರಿ, ‘ಅವರು ಕಡತ ನೀಡದಿದ್ದರೆ ಹೇಗೆ ಕೆಲಸ ಮಾಡುವುದು’ ಎಂದರು. ಆಗ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ‘ಕಡತ ಕೊಡಬೇಡಿ ಎಂದು ನೀವೇ ಹೇಳಿರುತ್ತೀರಿ. ಕೆಲಸ ಆಗಬೇಕು ಎಂದರೆ ಎಷ್ಟು ಹಣ ಕೊಡಬೇಕು ಮತ್ತು ರೇಟ್ ಕಾರ್ಡ್ ಎಷ್ಟು ಎಂಬುದನ್ನು ಹೇಳಿಬಿಡಿ. ಜನ ಹಣ ಕೊಟ್ಟು ಮಾಡಿಸಿಕೊಳ್ಳುತ್ತಾರೆ’ ಎಂದರು.
‘ಯಾವ ಕೆಲಸಕ್ಕೆ ಎಷ್ಟು ಕೊಡಬೇಕು ಎಂದು ಒಂದು ದೊಡ್ಡ ಬೋರ್ಡ್‌ನಲ್ಲಿ ಬರೆದು ಇಲ್ಲಿ ಹಾಕಿಬಿಡಿ. ಜನ ಬದುಕಬೇಕಲ್ಲ, ಇಲ್ಲಿಗೆ ಬಂದು ಅಲೆದಾಡುವ ಬದಲು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ. ಎಷ್ಟು ಕೊಡಬೇಕು ಎಂಬುದನ್ನು ನಾನಿಲ್ಲಿ ಹೇಳುವುದಿಲ್ಲ. ಅಲ್ಲಿ ನಿಂತಿರುವ ಜನರ ಬಳಿಗೆ ಹೋದರೆ ಅದನ್ನು ಹೇಳುತ್ತಾರೆ. ನಿಮ್ಮ ಎದುರೇ ಹೇಳಿಬಿಟ್ಟರೆ, ಅವರ ಕಡತಗಳನ್ನು ಏನು ಮಾಡಿಬಿಡುತ್ತೀರೋ ಎಂಬ ಭಯ ಜನರಿಗೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.