ADVERTISEMENT

ಬೆಂಗಳೂರು: ಎಕ್ಸ್‌ಪ್ರೆಸ್ ವೇನಲ್ಲಿ ವಾಹನ ಅಡ್ಡಗಟ್ಟಿ ದರೋಡೆ

ಕಲ್ಲು, ಕಬ್ಬಿಣದ ರಾಡುಗಳನ್ನು ರಸ್ತೆಗೆ ಅಡ್ಡ ಇಟ್ಟು ಕೃತ್ಯ

​ಪ್ರಜಾವಾಣಿ ವಾರ್ತೆ
Published 31 ಮೇ 2025, 23:40 IST
Last Updated 31 ಮೇ 2025, 23:40 IST
ಎಕ್ಸ್‌ಪ್ರೆಸ್ ವೇನಲ್ಲಿ ಕಲ್ಲು ಅಡ್ಡ ಇಟ್ಟಿದ್ದರಿಂದ ಅಪಘಾತಕ್ಕೀಡಾದ ಕಾರು  
ಎಕ್ಸ್‌ಪ್ರೆಸ್ ವೇನಲ್ಲಿ ಕಲ್ಲು ಅಡ್ಡ ಇಟ್ಟಿದ್ದರಿಂದ ಅಪಘಾತಕ್ಕೀಡಾದ ಕಾರು     

ಬೆಂಗಳೂರು: ನಗರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ–ರಾಜ್ಯ ಹೆದ್ದಾರಿಗಳಲ್ಲಿ ದರೋಡೆ ತಂಡವು ಸಕ್ರಿಯವಾಗಿದ್ದು, ವಾಹನಗಳನ್ನು ಅಪಘಾತಕ್ಕೀಡು ಮಾಡಿ ದರೋಡೆ ನಡೆಸಲಾಗುತ್ತಿದೆ. ಪ್ರಯಾಣಿಕರಿಂದ ಹಣ ಹಾಗೂ ಚಿನ್ನಾಭರಣ ದೋಚಲಾಗುತ್ತಿದೆ.

ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ವೇನಲ್ಲಿ ದರೋಡೆ ತಂಡವು ಸಕ್ರಿಯವಾಗಿದೆ ಎಂದು ಆರೋಪಿಸಿ ವಕೀಲ ಹುಸೇನ್ ಒವೈಸ್‌ ಎಂಬುವವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರಿಗೆ ದೂರು ನೀಡಿದ್ದಾರೆ.

ವೇಗವಾಗಿ ಬರುವ ಕಾರುಗಳನ್ನು ಗುರಿಯಾಗಿಸಿ ಹೆದ್ದಾರಿ ಮಧ್ಯದಲ್ಲಿ ಕಲ್ಲುಗಳನ್ನು ಜೋಡಿಸಿಟ್ಟು ಅಪಘಾತ ಮಾಡಿ ದರೋಡೆ ನಡೆಸುತ್ತಿದ್ದಾರೆ. ಹೊಸಕೋಟೆಯಿಂದ ಕೆಜಿಎಫ್ ಮಾರ್ಗದಲ್ಲಿ ಈ ಕೃತ್ಯ ಎಸಗಲಾಗುತ್ತಿದೆ. ಆರೋಪಿಗಳ ಚಲನವಲನವು ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿ ಸಹಿತ ಸಲೀಂ ಅವರಿಗೆ ಹುಸೇನ್‌ ದೂರು ನೀಡಿದ್ದಾರೆ.

ADVERTISEMENT

ಎಕ್ಸ್‌ಪ್ರೆಸ್‌ ವೇನಲ್ಲಿ ಕೆಜಿಎಫ್ ಸ್ಟ್ರೆಚ್ ಬಳಿ ಕಲ್ಲು, ಕಬ್ಬಿಣದ ರಾಡುಗಳನ್ನು ಇಟ್ಟು ಅಪಘಾತ ಮಾಡುತ್ತಿರುವ ದುಷ್ಕರ್ಮಿಗಳು, ಬಳಿಕ ದರೋಡೆ ಮಾಡುತ್ತಿದ್ದಾರೆ. ಇತ್ತ ಗಮನ ಹರಿಸುವಂತೆ ಕೋರಿ ರಾಜ್ಯ ಪೊಲೀಸ್ ಮಹಾನಿರ್ದೇಶಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ಹಾಗೂ ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವರಿಗೆ ಹುಸೇನ್‌ ಪತ್ರ ಬರೆದಿದ್ದಾರೆ.

ಕಳೆದ 24 ಗಂಟೆಯಲ್ಲಿ ಎಕ್ಸ್‌ಪ್ರೆಸ್‌ ವೇನಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಮೂವರು ಪ್ರಯಾಣಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮೇ 26ರಂದು ನ್ಯಾಯಾಲಯದ ಕಲಾಪದಲ್ಲಿ ಭಾಗಿಯಾಗಲು ಕೆಜಿಎಫ್ ಕಡೆ ತೆರಳುತ್ತಿದ್ದ ತಾವು ದುಷ್ಕರ್ಮಿಗಳ ಕೃತ್ಯದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದೇನೆ ಎಂದು ಹುಸೈನ್ ಒವೈಸ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕ್ಯಾಮೆರಾ ಅಳವಡಿಸಿ: ಹೆದ್ದಾರಿಗಳಲ್ಲಿ ನಡೆಯುತ್ತಿರುವ ಕೃತ್ಯಗಳನ್ನು ತಡೆಯಬೇಕು. ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಬೇಕು. ಎಕ್ಸ್‌ಪ್ರೆಸ್ ​​ವೇನಲ್ಲಿ ಸುರಕ್ಷತೆಗೆ ಸಂಬಂಧಿಸಿದ ಯಾವುದೇ ವ್ಯವಸ್ಥೆಯೂ ಇಲ್ಲ. ಗಸ್ತು ವ್ಯವಸ್ಥೆ ಹೆಚ್ಚಿಸಬೇಕು. ಅಪಘಾತವಾದ ಸಂದರ್ಭದಲ್ಲಿ ವೈದ್ಯಕೀಯ ನೆರವು ನೀಡುವ ವ್ಯವಸ್ಥೆ ಮಾಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

ಕಾರಿನ ಡ್ಯಾಶ್‌ ಬೋರ್ಡ್‌ ಕ್ಯಾಮೆರಾದಲ್ಲಿ ಸೆರೆಯಾದ ಆರೋಪಿಗಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.