
ಬೆಂಗಳೂರು: ಹುಲಿಮಂಗಲ ಗ್ರಾಮದ ಎಲಿಗೆನ್ಸ್ ಅಪಾರ್ಟ್‌ಮೆಂಟ್‌ನಲ್ಲಿ ನೆಲಸಿರುವ ಉದ್ಯಮಿಯೊಬ್ಬರ ಫ್ಲ್ಯಾಟ್‌ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಹೆಬ್ಬಗೋಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸುಂಕದಕಟ್ಟೆಯ ವಿಘ್ನೇಶ್ವರ ನಗರದ ಎಚ್.ಕೆ.ಶ್ರೀನಿವಾಸಮೂರ್ತಿ ಹಾಗೂ ದಾಸನಪುರ ಹೋಬಳಿ ಚಿಕ್ಕಗೊಲ್ಲರಹಟ್ಟಿ ಗ್ರಾಮದ ಬಿ.ಎನ್.ಅರುಣ್‌ಕುಮಾರ್ ಬಂಧಿತರು.
ಚಿಕ್ಕಪೇಟೆಯಲ್ಲಿ ಶ್ರೀನಿವಾಸಮೂರ್ತಿ ಅವರು ಬಟ್ಟೆ ಅಂಗಡಿ ಇಟ್ಟುಕೊಂಡಿದ್ದರು. ಅರುಣ್ ಅವರು ನೈಸ್ ಕಂಪನಿಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.
‘ಬಂಧಿತರಿಂದ 16 ಗ್ರಾಂ ಚಿನ್ನಾಭರಣ, ಒಂದು ಕಾರು ಹಾಗೂ ₹1.14 ಕೋಟಿ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
ಆರ್.ಸುನಿಲ್‌ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
‘ಪ್ರಿಸಮ್ ಸರ್ಫೆಸ್ ಕೋಟಿಂಗ್ ಕಂಪನಿ ಮಾಲೀಕ ಸುನಿಲ್ ಕುಮಾರ್ ಅವರು ಉದ್ಯಮದ ವ್ಯವಹಾರಕ್ಕಾಗಿ ₹1.14 ಕೋಟಿ ನಗದನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು. ಫ್ಲ್ಯಾಟ್‌ನಲ್ಲಿ ಹಣವಿದ್ದ ಮಾಹಿತಿಯನ್ನು ಆರೋಪಿಗಳು ತಿಳಿದುಕೊಂಡಿದ್ದರು. ನ.7ರಂದು ಸುನಿಲ್ ಅವರು ಕುಟುಂಬ ಸಮೇತ ಕೋಲಾರಕ್ಕೆ ತೆರಳಿದ್ದರು. ಅಂದು ಫ್ಲ್ಯಾಟ್‌ಗೆ ಬಂದಿದ್ದ ಆರೋಪಿಗಳು, ಬೀಗ ಒಡೆದು ಬೀರುವಿನಲ್ಲಿದ್ದ ನಗದು ಕಳ್ಳತನ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.
ಆರೋಪಿಗಳ ಬಂಧನಕ್ಕೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಸುಳಿವು ಆಧರಿಸಿ ಚಿಕ್ಕಪೇಟೆ ಹಾಗೂ ದಾಸನಪುರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.