ADVERTISEMENT

ರೌಡಿ ಶೀಟರ್ ಕೊಲೆ: 5 ಮಂದಿ ಬಂಧನ, ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ನೋಟಿಸ್‌

ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ನೋಟಿಸ್‌ ಜಾರಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 0:15 IST
Last Updated 18 ಜುಲೈ 2025, 0:15 IST
ಸ್ಯಾಮ್ಯುಯಲ್‌
ಸ್ಯಾಮ್ಯುಯಲ್‌   

ಬೆಂಗಳೂರು: ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್‌ ಬಿಕ್ಲು ಶಿವು ಕೊಲೆ ಪ್ರಕರಣದ ಸಂಬಂಧ ಐವರು ಆರೋಪಿಗಳನ್ನು ಭಾರತಿನಗರ ಠಾಣೆಯ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ 10 ದಿನ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಆರೋಪಿಗಳಾದ ಕಿರಣ್‌ (25), ಮದನ್‌, ಸ್ಯಾಮ್ಯುಯಲ್‌, ಪ್ರದೀಪ್, ವಿಮಲ್‌ನನ್ನು ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಪೊಲೀಸರು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಿದ್ದು, ತಮ್ಮ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದರು. ನಂತರ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶಿಸಿದರು. ತಲೆಮರೆಸಿಕೊಂಡಿರುವ ಜಗದೀಶ್ ಅಲಿಯಾಸ್‌ ಜಗ್ಗ ಸೇರಿದಂತೆ ಮೂವರ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ.

ADVERTISEMENT

ಶಾಸಕರಿಗೆ ನೋಟಿಸ್ ಜಾರಿ:

ಪ್ರಕರಣ ಸಂಬಂಧ ಪೊಲೀಸರು ಶಾಸಕ ಬೈರತಿ ಬಸವರಾಜ್ ಅವರಿಗೆ ನೋಟಿಸ್ ಜಾರಿ ಮಾಡಿ, ಎರಡು ದಿನಗಳೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಖುದ್ದು ಹೆಣ್ಣೂರು ಬಳಿಯ ಬೈರತಿಯಲ್ಲಿರುವ ಬೈರತಿ ಬಸವರಾಜ್‍ರ ಮನೆಗೆ ಹೋಗಿ ನೋಟಿಸ್‍ನ ಪ್ರತಿ ತಲುಪಿಸಿದರು. ಪುಲಿಕೇಶಿನಗರ ಠಾಣೆ ಇನ್‍ಸ್ಪೆಕ್ಟರ್ ಗೋವಿಂದರಾಜು ಮತ್ತು ಸಿಬ್ಬಂದಿ ಬೈರತಿ ಬಸವರಾಜ್‍ ಪುತ್ರ ನೀರಜ್ ಅವರಿಗೆ ನೋಟಿಸ್‍ನ ಪ್ರತಿ ನೀಡಿದ್ದಾರೆ ಎಂದು ಗೊತ್ತಾಗಿದೆ.

‘ಬೈರತಿ ಬಸವರಾಜ್ ಅವರು ಈ ಪ್ರಕರಣದಲ್ಲಿ ಐದನೇ ಆರೋಪಿ ಆಗಿದ್ದಾರೆ. ವಿಚಾರಣೆಗೆ ಬಂದರೆ ಕೆ.ಜಿ.ಹಳ್ಳಿ ಉಪ ವಿಭಾಗದ ಎಸಿಪಿ ಪ್ರಕಾಶ್ ರಾಥೋಡ್ ಅವರು ವಿಚಾರಣೆ ನಡೆಸಲಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಶಿವು ಹಾಗೂ ಜಗದೀಶ್ ಆತ್ಮೀಯರಾಗಿದ್ದರು. 2023ರಲ್ಲಿ ಕಿತ್ತಗನೂರು ಬಳಿ ಶಿವು ಜಮೀನು ಖರೀದಿಸಿದ್ದರು. ನಂತರ, ಜಮೀನು ವಿಚಾರಕ್ಕೆ ಶಿವಪ್ರಕಾಶ್ ಹಾಗೂ ಜಗದೀಶ್ ಮಧ್ಯೆ ವೈಮನಸ್ಸು ಉಂಟಾಗಿತ್ತು. ಅದೇ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಬಂಧಿತ ಆರೋಪಿಗಳು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಬೈರತಿ ಬಸವರಾಜ್, ಜಗದೀಶ್ ಅವರು ಕೆಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕುಂಭಮೇಳದಲ್ಲೂ ಒಟ್ಟಿಗೆ ಇರುವ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಆ ಫೋಟೊಗಳನ್ನು ಸಂಗ್ರಹಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಎಲ್ಲ ಫೊಟೊಗಳನ್ನು ತೋರಿಸಿ ಪ್ರಶ್ನೆ ಕೇಳಲಾಗುವುದು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮದನ್‌
ಕಿರಣ್‌

‘ಬೈರತಿ ಬಸವರಾಜ್ ವಿರುದ್ಧ ದೂರು ನೀಡಿಲ್ಲ’

‘ಬೈರತಿ ಬಸವರಾಜ್ ವಿರುದ್ಧ ದೂರು ನೀಡಿಲ್ಲ. ಪೊಲೀಸರೇ ಹೆಸರು ಸೇರಿಸಿಕೊಂಡಿದ್ದಾರೆ. ನನ್ನ ಮಗ ಈ ಹಿಂದೆ ನೀಡಿದ್ದ ದೂರು ಆಧರಿಸಿ ಹೆಸರು ಹಾಕಿಕೊಂಡಿದ್ದಾರೆ’ ಎಂದು ಶಿವಪ್ರಕಾಶ್‌ ತಾಯಿ ವಿಜಯಲಕ್ಷ್ಮಿ ಹೇಳಿದ್ದಾರೆ. ‘ಕಿತ್ತಗನೂರು ಬಳಿ ಖರೀದಿಸಿದ್ದ ಜಾಗದ ವಿಚಾರವಾಗಿ ಜಗದೀಶ್ ಕಿರಣ್ ವಿಮಲ್‌ ಅನಿಲ್ ಮತ್ತು ಇತರರು ಬೈರತಿ ಬಸವರಾಜ್​ ಅವರ ಕುಮ್ಮಕಿನಿಂದ ಕೊಲೆ ಮಾಡಿದ್ದಾರೆ’ ಎಂದು ಶಿವಪ್ರಕಾಶ್‌ ತಾಯಿ ವಿಜಯಲಕ್ಷ್ಮಿ ದೂರು ನೀಡಿದ್ದರು. ದೂರು ಆಧರಿಸಿ ಭಾರತಿನಗರ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ‘ನನಗೆ ಪ್ರಾಣ ಬೆದರಿಕೆ ಇದೆ. ಮಕ್ಕಳನ್ನು ಹೊರಗೆ ಕಳುಹಿಸಬೇಡಿ. ನೀವೂ ಹೊರಗೆ ಹೋಗಬೇಡಿ. ಯಾರೇ ಬಂದು ಬಾಗಿಲು ತಟ್ಟಿದರೂ ಬಾಗಿಲು ತೆರೆಯುವುದು ಬೇಡವೆಂದು ಶಿವು ಹೇಳುತ್ತಿದ್ದ. ತನ್ನ ಹತ್ಯೆಗೆ ಚೆನ್ನೈ ಹುಡುಗರಿಗೆ ಸುಪಾರಿ ಕೊಟ್ಟಿದ್ದಾರೆ ಎಂದೂ ಮಗ ಹೇಳುತ್ತಿದ್ದ. ಪುತ್ರನ ಮೊಬೈಲ್‌ನಲ್ಲೇ ಎಲ್ಲ ಮಾಹಿತಿಯಿದೆ’ ಎಂದು ಹೇಳಿದರು.

ಪ್ರದೀಪ್

40 ಬಾರಿ ಇರಿದು ಕೊಲೆ

ಶಿವಪ್ರಕಾಶ್ ಅವರನ್ನು ಮಾರಕಾಸ್ತ್ರಗಳಿಂದ 40 ಬಾರಿ ಇರಿದು ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಎದೆಯ ಭಾಗ ಬೆನ್ನಿನ ಭಾಗಕ್ಕೆ ಬಲವಾಗಿ ಇರಿಯಲಾಗಿದೆ. ತಲೆಯನ್ನು ಜಜ್ಜಿ ಸಾಯಿಸಲಾಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿಮಲ್‌
ವಿಚಾರಣೆಗೆ ಹಾಜರಾಗುವಂತೆ ಶಾಸಕ ಬೈರತಿ ಬಸವರಾಜ್‌ ಅವರ ಮನೆಗೆ ನೋಟಿಸ್‌ ಪ್ರತಿ ತಲುಪಿಸಿದ ಪೊಲೀಸರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.