
ಎಫ್‌ಐಆರ್
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಯಾವುದೇ ತಪಾಸಣೆ ನಡೆಸದೇ ಗುಜರಾತ್, ಮಹಾರಾಷ್ಟ್ರ, ಕೇರಳದ 10 ಸಾವಿರಕ್ಕೂ ಅಧಿಕ ವಾಹನಗಳಿಗೆ ವಾಹನ ಸದೃಢ (ಫಿಟ್‌ನೆಸ್) ಪ್ರಮಾಣಪತ್ರ ನೀಡಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿವೃತ್ತ ಮೋಟಾರು ವಾಹನ ನಿರೀಕ್ಷಕ ನಿಸಾರ್ ಅಹಮದ್ ವಿರುದ್ಧ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರು ಕೇಂದ್ರ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿ ಎಲ್. ದೀಪಕ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನಲ್ಲೇನಿದೆ?: ನಿಸಾರ್ ಅಹಮದ್ ಸುಮಾರು ಎಂಟು ವರ್ಷಗಳಿಂದ ಮೋಟಾರು ವಾಹನ ನಿರೀಕ್ಷಕರಾಗಿ ಕೇಂದ್ರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿ ಈ ವರ್ಷ ಜನವರಿ 31ರಂದು ನಿವೃತ್ತರಾಗಿದ್ದಾರೆ. ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ 2025ರ ಆಗಸ್ಟ್ 1ರಿಂದ 2026ರ ಜ.20ರವರೆಗೆ ಹೊರರಾಜ್ಯಗಳ 10,210 ವಾಹನಗಳಿಗೆ ವಾಹನ ಸದೃಢ ಪ್ರಮಾಣಪತ್ರ (ಫಾರಂ 38ಎ) ನೀಡಿದ್ದರು. ಆದರೆ, ಯಾವುದೇ ವಾಹನವನ್ನು ಭೌತಿಕವಾಗಿ ಪರಿಶೀಲನೆ ನಡೆಸಿರಲಿಲ್ಲ. ಈ ಬಗ್ಗೆ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷ ಎಸ್. ನಟರಾಜ ಶರ್ಮಾ ಅವರು ಸಾರಿಗೆ ಆಯುಕ್ತರಿಗೆ ದೂರು ನೀಡಿದ್ದರು.
ಈ ದೂರಿನ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ಸಾರಿಗೆ ಜಂಟಿ ಆಯುಕ್ತರಿಗೆ ಸಾರಿಗೆ ಆಯುಕ್ತರು ಸೂಚನೆ ನೀಡಿದ್ದರು. ಜಂಟಿ ಆಯುಕ್ತರು ವಾಹನ್ ತಂತ್ರಾಂಶದಲ್ಲಿ ವಾಹನಗಳ ಮಾಹಿತಿ ಪಡೆದುಕೊಂಡಿದ್ದರು. ಲಭ್ಯವಾಗಿರುವ ಮಾಹಿತಿ ಪ್ರಕಾರ 10,210 ವಾಹನಗಳಿಗೂ ನಿಸಾರ್ ಅಹಮದ್ ಅವರೇ ಫಾರಂ 38ಎ ನೀಡಿರುವುದು ಕಂಡು ಬಂದಿದೆ. ಈಗಾಗಲೇ ಗುಜರಾತ್‌ನ 41 ವಾಹನಗಳಿಗೆ ಸಂಬಂಧಿಸಿದಂತೆ ಅಲ್ಲಿನ ಆಯುಕ್ತರ ಕಚೇರಿಯಿಂದ ಬಂದ ಇ–ಮೇಲ್‌ನ ಆಧಾರದಲ್ಲಿ ನಿಸಾರ್ ಅಹಮದ್ ಅವರನ್ನು ಜನವರಿ 20ರಂದು ಅಮಾನತು ಮಾಡಲಾಗಿದೆ ಎಂದು ಜಂಟಿ ಆಯುಕ್ತರು ವರದಿ ಸಲ್ಲಿಸಿದ್ದರು.
ವಾಹನ ಮಾಲೀಕರೊಂದಿಗೆ ಸೇರಿ ಸಾರಿಗೆ ಇಲಾಖೆಗೆ ನಂಬಿಕೆ ದ್ರೋಹ ಬಗೆದ, ಮೋಸ ಮಾಡಿದ ನಿಸಾರ್ ಅಹಮದ್ ವಿರುದ್ಧ ಹಾಗೂ ಸಂಬಂಧಿಸಿದ ವಾಹನ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಶರ್ಮಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.