ಆರ್.ವಿ ವಿಶ್ವವಿದ್ಯಾಲಯದ ಮೂರನೆ ಘಟಿಕೋತ್ಸವದಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು ವಿಶೇಷ ಪುರಸ್ಕಾರದೊಂದಿಗೆ ಸಂಭ್ರಮಿಸಿದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಶಿಕ್ಷಣವನ್ನು ಕೇವಲ ವೈಯಕ್ತಿಕ ಯಶಸ್ಸಿಗೆ ಬಳಸದೆ, ಜಗತ್ತಿನ ಶ್ರೇಯೋಭಿವೃದ್ಧಿಗೆ ಸಾಧನವಾಗಿ ಉಪಯೋಗಿಸಿಕೊಳ್ಳಬೇಕು’ ಎಂದು ನೊಬೆಲ್ ಪುರಸ್ಕೃತ ಮಕ್ಕಳ ಹಕ್ಕು ಕಾರ್ಯಕರ್ತ ಕೈಲಾಶ್ ಸತ್ಯಾರ್ಥಿ ಹೇಳಿದರು.
ಆರ್.ವಿ ವಿಶ್ವವಿದ್ಯಾಲಯದ ಮೂರನೆ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಯುವಜನರೇ ನವಭಾರತದ ನಿರ್ಮಾಣಕಾರರು. ಆದ್ದರಿಂದ ನೈತಿಕ ಹೊಣೆಗಾರಿಕೆ ಮತ್ತು ಜವಾಬ್ದಾರಿ ಯುವ ಸಮುದಾಯದ ಮೇಲಿದೆ. ಪದವೀಧರರಾದ ಬಳಿಕ ಕಲಿಕೆ ಪೂರ್ಣಗೊಳ್ಳುವುದಿಲ್ಲ. ಜೀವನ ಹೊಸ ಹೊಸ ಪಾಠಗಳನ್ನು ಕಲಿಸುತ್ತದೆ. ಜಗತ್ತಿನ ಭಾಗವಾಗಿರುವ ನಾವು, ಸಮಾಜದ ತಲ್ಲಣಗಳಿಗೆ ಸ್ಪಂದಿಸಬೇಕು. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುತ್ತಾ ಅಂದುಕೊಂಡ ಗುರಿ ಸಾಧಿಸಬೇಕು’ ಎಂದು ಅಭಿಪ್ರಾಯಪಟ್ಟರು.
ತಮ್ಮ ಹೋರಾಟದ ದಿನಗಳನ್ನು ಸ್ಮರಿಸಿಕೊಂಡ ಅವರು, ‘ಹೋರಾಟದ ಹಾದಿಯಲ್ಲಿ ಹಲವು ಸವಾಲುಗಳು, ಸಮಸ್ಯೆಗಳು ಎದುರಾಗುತ್ತವೆ. ಆದರೆ, ಅವುಗಳಿಗೆ ಎದೆಗುಂದದೆ ಗುರಿ ಮುಟ್ಟಬೇಕು. ಯಾವುದೇ ಕಾರ್ಯಕ್ಷೇತ್ರ ಆಯ್ಕೆ ಮಾಡಿಕೊಂಡರೂ ಮಾನವೀಯತೆ ಮತ್ತು ಕರುಣೆ ನಮ್ಮಲ್ಲಿರಬೇಕು. ಕರುಣೆ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾದ ಶಕ್ತಿಯುತ ಸಾಧನ’ ಎಂದು ಹೇಳಿದರು.
‘ನನ್ನ ಹೋರಾಟದ ಜೀವನದಲ್ಲಿ ಹಲವು ಸವಾಲುಗಳು ಹಾಗೂ ಅಪಾಯಗಳನ್ನು ಎದುರಿಸಿದ್ದೇನೆ. ಮಕ್ಕಳ ಕಳ್ಳಸಾಗಣೆ ತಡೆವೇಳೆ ಹಲ್ಲೆಗಳೂ ನಡೆದಿದ್ದವು. ಈ ಹೋರಾಟದಲ್ಲಿ ಕೆಲವರನ್ನು ಕಳೆದುಕೊಂಡಿದ್ದೇನೆ. ಆದರೆ, ನನ್ನ ಹೋರಾಟದಿಂದ ಹಲವರಿಗೆ ಹೊಸ ಜೀವನ ಸಿಕ್ಕಿದೆ’ ಎಂದು ಸ್ಮರಿಸಿಕೊಂಡರು.
ಆರ್.ವಿ. ವಿಶ್ವವಿದ್ಯಾಲಯದ ಕುಲಪತಿ ಎ.ವಿ.ಎಸ್. ಮೂರ್ತಿ, ‘ಗುಣಮಟ್ಟದ ಶಿಕ್ಷಣ ನಮ್ಮ ಆದ್ಯತೆಯಾಗಿದೆ. ವಿದ್ಯಾರ್ಥಿಗಳ ಸಾಧನೆಯಿಂದ ವಿಶ್ವವಿದ್ಯಾಲಯಕ್ಕೂ ಉತ್ತಮ ಹೆಸರು ಬರಲಿದೆ. ಈಗಾಗಲೇ ನಮ್ಮ ವಿಶ್ವವಿದ್ಯಾಲಯವು ಜಾಗತಿಕ ಮಟ್ಟದಲ್ಲಿ ಉತ್ತಮ ಹೆಸರು ಗಳಿಸಿದೆ’ ಎಂದು ಹೇಳಿದರು.
ಈ ಘಟಿಕೋತ್ಸವದಲ್ಲಿ ಆರು ವಿಭಾಗಗಳಿಂದ ಒಟ್ಟು 259 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ಶೈಕ್ಷಣಿಕ ಸಾಧನೆಗೆ ಒಂಬತ್ತು ವಿದ್ಯಾರ್ಥಿಗಳಿಗೆ ವಿಶೇಷ ಗೌರವ ಪುರಸ್ಕಾರ ವಿತರಿಸಲಾಯಿತು.
ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ ಎಂ.ಪಿ.ಶ್ಯಾಮ್, ಕುಲಸಚಿವೆ ಪ್ರೊ. ಸಹನ ಡಿ. ಗೌಡ, ಉಪಕುಲಪತಿ ಪ್ರೊ. ದ್ವಾರಿಕ ಪ್ರಸಾದ್ ಉನಿಯಾಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.