ADVERTISEMENT

ಸಾಮ್ರಾಟ್ ಹೋಟೆಲ್ ಸೆ.25ಕ್ಕೆ ಬಂದ್: ಮುಚ್ಚಲಿದೆ 45 ವರ್ಷಗಳ ಹಳೆಯ ಹೋಟೆಲ್

ಸೆ.25ಕ್ಕೆ ಬಾಗಿಲು ಮುಚ್ಚಲಿದೆ 45 ವರ್ಷಗಳ ಹಳೆಯ ಹೋಟೆಲ್

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 19:31 IST
Last Updated 11 ಸೆಪ್ಟೆಂಬರ್ 2022, 19:31 IST
ಸೆ.14ರಿಂದ ಉತ್ತರ ಭಾರತದ ಶೈಲಿಯ ಊಟ ಇರುವುದಿಲ್ಲ ಎಂದು ಸಾಮ್ರಾಟ್‌ ಹೋಟೆಲ್ ಮುಂಭಾಗದಲ್ಲಿ ಹಾಕಿರುವ ಫಲಕ ನೋಡುತ್ತಿರುವ ಗ್ರಾಹಕ –ಪ್ರಜಾವಾಣಿ ಚಿತ್ರ
ಸೆ.14ರಿಂದ ಉತ್ತರ ಭಾರತದ ಶೈಲಿಯ ಊಟ ಇರುವುದಿಲ್ಲ ಎಂದು ಸಾಮ್ರಾಟ್‌ ಹೋಟೆಲ್ ಮುಂಭಾಗದಲ್ಲಿ ಹಾಕಿರುವ ಫಲಕ ನೋಡುತ್ತಿರುವ ಗ್ರಾಹಕ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಾಮ್ರಾಟ್(ಚಾಲುಕ್ಯ) ಹೋಟೆಲ್‌ನ ಮಸಾಲೆ ದೋಸೆ, ರವಾ ಇಡ್ಲಿಗೆ ವಿದಾಯ ಹೇಳುವ ಕಾಲ ಈಗ ಹತ್ತಿರವಾಗಿದೆ. ಹೋಟೆಲ್‌ನಲ್ಲಿ ಊಟ ಮತ್ತು ತಿಂಡಿ ಸೆಪ್ಟೆಂಬರ್ 25ಕ್ಕೆ ಕೊನೆಗೊಳ್ಳಲಿದೆ.

ವಿಧಾನಸೌಧಕ್ಕೆ ಕೂಗಳತೆ ದೂರದಲ್ಲಿರುವ ಸಾಮ್ರಾಟ್ ಹೋಟೆಲ್ ಎಂದರೆ ರಾಜಕಾರಣಿಗಳು, ಅಧಿಕಾರಿಗಳು, ನೌಕರರು ಆಗಾಗ ಭೇಟಿ ನೀಡುವ ಸ್ಥಳ. ರಾಜಕಾರಣಿಗಳನ್ನು ಹುಡುಕಿಕೊಂಡು ಬರುವ ಜನರಿಗೂ ಇದು ಚಿರಪರಿಚಿತ.

ಬಸವೇಶ್ವರ ವೃತ್ತದಲ್ಲಿ ಈ ಹೋಟೆಲ್ ಇದೆ. ಆದರೆ, ಸಾಮಾನ್ಯವಾಗಿ ಈ ವೃತ್ತಕ್ಕೆ ಚಾಲುಕ್ಯ ವೃತ್ತ ಎಂದೇ ಕರೆಯಲಾಗುತ್ತದೆ. ಇದು ಈ ಹೋಟೆಲ್‌ನ ಜನಪ್ರಿಯತೆಗೆ ಸಾಕ್ಷಿ. ಲೋಕಾಭಿರಾಮವಾಗಿ ಕಾಲ ಕಳೆಯುವ ಹಲವು ಸ್ನೇಹಿತರ ಗುಂಪುಗಳಿಗೆ ಚಾಲುಕ್ಯ ಹೋಟೆಲ್ ಹೊರಾಂಗಣ ಎಂದರೆ ಅಚ್ಚುಮೆಚ್ಚಿನ ತಾಣ. ಅನೌಪಚಾರಿಕ ರಾಜಕೀಯ ಚರ್ಚೆಗಳು, ವ್ಯಾವಹಾರಿಕ ಚರ್ಚೆಗಳೂ ಇಲ್ಲಿ ನಡೆಯುತ್ತಿದ್ದವು.

ADVERTISEMENT

ಬೆಂಗಳೂರಿನ ಹಳೇ ರೌಡಿಗಳ ಭೇಟಿಯ ತಾಣಗಳಲ್ಲಿ ಈ ಹೋಟೆಲ್ ಕೂಡ ಒಂದಾಗಿತ್ತು. 45 ವರ್ಷಗಳ ಸುದೀರ್ಘ ಪಯಣದಲ್ಲಿ ಈ ಹೋಟೆಲ್ ಹಲವು ಘಟನೆಗಳಿಗೆ ಸಾಕ್ಷಿಯಾಗಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

1977ರಲ್ಲಿ ಆರಂಭವಾದ ಹೋಟೆಲ್‌ ಅನ್ನು ಈ ಹಿಂದೆ ಲಕ್ಷ್ಮಣ್ ಶಾನಭಾಗ್ ಅವರು ನಡೆಸುತ್ತಿದ್ದರು. ಅವರ ನಿಧನದ ಬಳಿಕ ಮಗ ಸಂತೋಷ್ ಮುನ್ನಡೆಸುತ್ತಿದ್ದಾರೆ. 90ಕ್ಕೂ ಅಧಿಕ ಜನ ಕೆಲಸ ಮಾಡುತ್ತಿದ್ದು, ಮಸಾಲೆ ದೋಸೆ, ರವಾ ಇಡ್ಲಿ, ಬಾದಾಮ್ ಹಲ್ವಾ ಈ ಹೋಟೆಲ್‌ನಲ್ಲಿ ಜನರಿಗೆ ಪ್ರಿಯವಾದ ತಿನಿಸುಗಳು.

ಪ್ರತಿದಿನ 3 ಸಾವಿರಕ್ಕೂ ಅಧಿಕ ಮಂದಿ ಈ ಹೋಟೆಲ್‌ಗೆ ಭೇಟಿ ನೀಡುತ್ತಾರೆ. ವಾರಾಂತ್ಯದಲ್ಲಿ ಈ ಸಂಖ್ಯೆ 5 ಸಾವಿರ ದಾಟುತ್ತದೆ. ಹೋಟೆಲ್‌ನಲ್ಲಿ ಕೂತು ತಿನ್ನುವ ಜತೆಗೆ ಹೊರಾಂಗಣದಲ್ಲಿ
ಕಾರಿನಲ್ಲಿ ಮತ್ತು ಲೋಕಾಭಿರಾಮವಾಗಿ ನಿಲ್ಲುವ ಜನರಿಗೂ ತಿನಿಸು ಮತ್ತು ಕಾಫಿ ಪೂರೈಸಲಾಗುತ್ತದೆ. ಅದಕ್ಕೆಂದೇ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸೆ.14ರಿಂದ ಹೋಟೆಲ್‌ನಲ್ಲಿ ಉತ್ತರ ಭಾರತದ ಶೈಲಿಯ ಊಟ–ತಿಂಡಿ ಇರುವುದಿಲ್ಲ ಎಂಬ ಫಲಕವನ್ನು ಹಾಕಲಾಗಿದೆ. ಈ ತಿನಿಸುಗಳಿಗೆ ವಸಂತನಗರದಲ್ಲಿ ಆರಂಭವಾಗಿರುವ ಮಿನಿ ಸಾಮ್ರಾಟ್‌ ಹೋಟೆಲ್‌ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ. ವಸತಿ ವ್ಯವಸ್ಥೆ ಮುಂದುವರಿಯಲಿದೆ ಎಂದು ಸಿಬ್ಬಂದಿ ಹೇಳಿದರು.

ಗುತ್ತಿಗೆ ಅವಧಿ ಮುಕ್ತಾಯ

‘ಕಟ್ಟಡದ ಮಾಲೀಕರೊಂದಿಗೆ ಮಾಡಿಕೊಂಡಿದ್ದ ಗುತ್ತಿಗೆ ಅವಧಿ ಮುಕ್ತಾಯವಾಗಿದ್ದರಿಂದ ಹೋಟೆಲ್ ಮುಚ್ಚಲಾಗುತ್ತಿದೆ. ಬೇರೆ ಕಡೆಗೆ ಸ್ಥಳಾಂತರ ಆಗುತ್ತಿರುವ ಯಾವುದೇ ಮಾಹಿತಿ ಇಲ್ಲ. ಬೇರೆ ಕಡೆ ಕೆಲಸ ನೋಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಸಿಬ್ಬಂದಿ ಬೇಸರದಿಂದ ಹೇಳುತ್ತಾರೆ.‌

ಹೋಟೆಲ್ ಮುಚ್ಚುತ್ತಿರುವುದು ಆಗಾಗ ಹೋಟೆಲ್‌ಗೆ ಬರುವ ಜನರ ಬೇಸರಕ್ಕೂ ಕಾರಣವಾಗಿದೆ. ‘ವಿಧಾನಸೌಧದಲ್ಲಿ ಯಾವುದೇ ಕೆಲಸಕ್ಕೆ ಬಂದರೂ ಸಾಮ್ರಾಟ್‌ ಹೋಟೆಲ್‌ನಲ್ಲಿ ದೋಸೆ ತಿಂದು ಹೋಗುವುದು ವಾಡಿಕೆಯಾಗಿತ್ತು. ಮುಂದಿನ ತಿಂಗಳು ನಾನು ಬರುವಷ್ಟರಲ್ಲಿ ಈ ಹೋಟೆಲ್ ಇರುವುದಿಲ್ಲ. ಈ ಹೋಟೆಲ್‌ನಲ್ಲಿ ಕೊನೆಯ ಮಸಾಲೆ ದೋಸೆ ತಿಂದಿದ್ದೇನೆ’ ಎಂದು ಧಾರವಾಡದಿಂದ ಬಂದಿದ್ದ ಪುರುಷೋತ್ತಮ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.