ADVERTISEMENT

ಸಂಚಾರಿ ಕಾವೇರಿ: ಅಪಾರ್ಟ್‌ಮೆಂಟ್‌ಗಳಿಗೆ ‘ಬಲ್ಕ್‌ ಬುಕ್ಕಿಂಗ್‌’ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 27 ಮೇ 2025, 15:13 IST
Last Updated 27 ಮೇ 2025, 15:13 IST
ರಾಮ್‌ಪ್ರಸಾತ್‌ ಮನೋಹರ್
ರಾಮ್‌ಪ್ರಸಾತ್‌ ಮನೋಹರ್   

ಬೆಂಗಳೂರು: ‘ಸಂಚಾರಿ ಕಾವೇರಿ’ ಯೋಜನೆಯಡಿ‌ ನಗರದ ಅಪಾರ್ಟ್‌ಮೆಂಟ್‌ಗಳಿಗೆ ಒಂದು ವರ್ಷಾವಧಿಗೆ ಅಗತ್ಯವಿರುವಷ್ಟು ಟ್ಯಾಂಕರ್‌ ನೀರು ಬುಕ್‌ ಮಾಡುವಂತಹ ‘ಬಲ್ಕ್ ಬುಕ್ಕಿಂಗ್‌ ವ್ಯವಸ್ಥೆ’ಗೆ ಅವಕಾಶ ಕಲ್ಪಿಸುವಂತೆ ಮಂಡಳಿ ಅಧ್ಯಕ್ಷ ವಿ.ರಾಮ್‌ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಲಮಂಡಳಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಈ ಸೂಚನೆ ನೀಡಿದ ಅವರು, ‘ನಗರದ ಹೊರವಲಯದಲ್ಲಿರುವ ಬಹುತೇಕ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಕುಡಿಯುವ ನೀರಿಗಾಗಿ ಟ್ಯಾಂಕರ್ ನೀರು ಅವಲಂಬಿಸಿದ್ದಾರೆ. ಆ ಟ್ಯಾಂಕರ್‌ಗಳು ಸಹ ಕೊಳವೆ ಬಾವಿ‌ ನೀರು ಸಂಗ್ರಹಿಸಿ ಪೂರೈಸುತ್ತಿವೆ. ಇದರಿಂದ ಅಂತರ್ಜಲದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಿ, ಜನರಿಗೆ ಬಿಐಎಸ್ ಪ್ರಮಾಣೀಕೃತ ಶುದ್ಧ ಕುಡಿಯುವ ನೀರು ಪಡೆಯುವುದಕ್ಕಾಗಿ ‘ಸಂಚಾರಿ ಕಾವೇರಿ’ ಯೋಜನೆಯಡಿ ಅಪಾರ್ಟ್‌ಮೆಂಟ್‌ಗಳಿಗೆ ಬಲ್ಕ್‌ ಬುಕ್ಕಿಂಗ್ ಮಾಡಿಕೊಳ್ಳುವ ಅವಕಾಶವನ್ನು ಪ್ರಾರಂಭಿಸುವಂತೆ ತಿಳಿಸಿದರು.

ನಗರದಲ್ಲಿ ಅಂತರ್ಜಲದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿ ಜಲ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಜಲಮಂಡಳಿ ಹದಿನೈದು ದಿನಗಳ ಹಿಂದೆ ‘ಸಂಚಾರಿ ಕಾವೇರಿ’ ಯೋಜನೆ ಆರಂಭಿಸಿದೆ.  

ADVERTISEMENT

ಬುಕ್ಕಿಂಗ್ ಪ್ರಕ್ರಿಯೆ:

  • ಗ್ರಾಹಕರು ಕನಿಷ್ಠ ತಿಂಗಳ ಮುಂಗಡವಾಗಿ ಪಾವತಿ ಮಾಡಬೇಕು.

  • ‘ಮೊದಲು ಬಂದವರಿಗೆ ಮೊದಲು ಅವಕಾಶ’ ಆಧಾರಿತವಾಗಿ ಬುಕ್ಕಿಂಗ್ ಮಾಡಲಾಗುತ್ತದೆ.

  • ಒಂದು ವರ್ಷದ ಅವಧಿಗೆ ಬುಕ್ಕಿಂಗ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

  • ಗ್ರಾಹಕರು ಬಲ್ಕ್ ಬುಕ್ಕಿಂಗ್ ಮೂಲಕ ನಿರಂತರ ಸರಬರಾಜು ಖಚಿತಪಡಿಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.