ಬೆಂಗಳೂರು: ‘ರಾಜ್ಯ ಸರ್ಕಾರದ ನಿವೃತ್ತ ನೌಕರರಿಗೆ ನಗದು ರಹಿತ ಚಿಕಿತ್ಸಾ ಯೋಜನೆಯಾದ 'ಸಂಧ್ಯಾ ಸುರಕ್ಷಾ' ಎರಡು–ಮೂರು ತಿಂಗಳಲ್ಲಿ ಜಾರಿಯಾಗಲಿದೆ’ ಎಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಲ್. ಬೈರಪ್ಪ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ವೈಯಾ ವಿಕಾಸ್ ಸಂಸ್ಥೆ ಸಹಯೋಗದೊಂದಿಗೆ ಸೋಮವಾರ ನಡೆದ ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
60 ವರ್ಷ ಮೇಲ್ಪಟ್ಟ ನಿವೃತ್ತ ನೌಕರರಿಗಾಗಿ ರಾಜ್ಯ ಸರ್ಕಾರ ‘ಸಂಧ್ಯಾ ಸುರಕ್ಷಾ’ ಯೋಜನೆ ಜಾರಿಗೆ ತಂದಿದೆ. ಸದ್ಯ ಆರ್ಥಿಕ ಇಲಾಖೆ ಬಳಿ ಕಡತ ಇದೆ. ಯೋಜನೆ ಜಾರಿಗಾಗಿ ಸಂಘವೂ ಪ್ರಯತ್ನಿಸುತ್ತಿದೆ’ ಎಂದು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮಾತನಾಡಿ, ‘ಸರ್ಕಾರಿ ನೌಕರರು, ನಿವೃತ್ತ ನೌಕರರ ಯೋಜನೆಗಳ ಜಾರಿ ಯಾವಾಗಲೂ ವಿಳಂಬವಾಗುತ್ತದೆ. ಇದರ ನಡುವೆಯೂ ಆರೋಗ್ಯ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಸರ್ಕಾರದ ಮುಖ್ಯಕಾರ್ಯದರ್ಶಿ ಮತ್ತು ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಶೀಘ್ರವೇ ನಗದು ರಹಿತ ಆರೋಗ್ಯ ಸೌಲಭ್ಯಗಳು ಜಾರಿಯಾಗುವ ವಿಶ್ವಾಸವಿದೆ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಸಿ. ಕಳಸದ ಕಾರ್ಯಕ್ರಮ ಉದ್ಘಾಟಿಸಿದರು. ವೈಯಾ ವಿಕಾಸ್ ಸಂಸ್ಥೆಯ ಸಿಇಓ ಪವಿತ್ರಾ ರೆಡ್ಡಿ, ಸಂಚಾಲಕ ಶ್ರೀನಿವಾಸ್, ಸಂಘದ ಪ್ರಧಾನ ಕಾರ್ಯದರ್ಶಿ ರಂಗೇಗೌಡ, ಖಜಾಂಚಿ ಎಸ್.ಎಂ.ಆನಂದಪ್ಪ ಉಪಸ್ಥಿತರಿದ್ದರು.
ಸ್ಪರ್ಶ ಆಸ್ಪತ್ರೆ ಮತ್ತು ವಾಸನ್ ಐ ಕೇರ್ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಶಿಬಿರದಲ್ಲಿ ಪಾಲ್ಗೊಂಡಿದ್ದ ನಿವೃತ್ತ ನೌಕರರಿಗೆ ರಕ್ತದೊತ್ತಡ, ಮಧುಮೇಹ, ಹೃದಯ, ಕಣ್ಣಿನ ತಪಾಸಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.