ADVERTISEMENT

25 ಸಾವಿರ ಆರೋಗ್ಯ ಕೇಂದ್ರಗಳಿಗೆ ಸೌರವಿದ್ಯುತ್‌: ಸೆಲ್ಕೊ ಫೌಂಡೇಷನ್‌ ಉಪಕ್ರಮ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2023, 20:26 IST
Last Updated 7 ಏಪ್ರಿಲ್ 2023, 20:26 IST
Ecology home
Ecology home   

ನವದೆಹಲಿ: ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಕರ್ನಾಟಕದ ಸೆಲ್ಕೊ ಫೌಂಡೇಷನ್‌ ಹಾಗೂ ಐಕಿಯಾ ಫೌಂಡೇಷನ್‌ ‘ಆರೋಗ್ಯಕ್ಕಾಗಿ ಇಂಧನ’ ಪರಿಕಲ್ಪನೆಯಡಿ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಷ್ಟ್ರೀಯ ಆರೋಗ್ಯ ಮಿಷನ್‌ ಹಾಗೂ ರಾಜ್ಯ ಆರೋಗ್ಯ ಇಲಾಖೆಗಳ ಸಹಕಾರದಲ್ಲಿ ಫೌಂಡೇಷನ್‌ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಸೌರವಿದ್ಯುತ್‌ ವ್ಯವಸ್ಥೆ ಅಳವಡಿಸಲಿದೆ. ನವದೆಹಲಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸೆಲ್ಕೊ ಫೌಂಡೇಷನ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್‌ ಹಂದೆ, ಈಶಾನ್ಯ ರಾಜ್ಯಗಳ ಸಚಿವಾಲಯದ ಕಾರ್ಯದರ್ಶಿ ಲೋಕ್‌ರಂಜನ್‌, ಅಟಲ್‌ ಇನೋವೇಷನ್‌ ಮಿಷನ್‌ನ ನಿರ್ದೇಶಕ ಚಿಂತನ್‌ ವೈಷ್ಣವ್‌ ಮತ್ತಿತರರು ಪಾಲ್ಗೊಂಡು ಯೋಜನೆಯ ರೂಪರೇಷೆಗಳ ಕುರಿತು ಮಾಹಿತಿ ನೀಡಿದರು.

ಸಂಪನ್ಮೂಲ ಕೊರತೆಯಿಂದ ಬಳಲುತ್ತಿರುವ ಮಣಿಪುರ, ಮೇಘಾಲಯ, ಒಡಿಶಾ ಸೇರಿದಂತೆ 12 ರಾಜ್ಯಗಳ 25 ಸಾವಿರ ಆರೋಗ್ಯ ಕೇಂದ್ರಗಳಿಗೆ 2026ರೊಳಗೆ ಸೌರವಿದ್ಯುತ್‌ ವ್ಯವಸ್ಥೆ ಒದಗಿಸಲಾಗುತ್ತದೆ. ಅದೇ ವೇಳೆ, ಈ ಕೇಂದ್ರಗಳಿಗೆ ಅಗತ್ಯ ವೈದ್ಯಕೀಯ ಹಾಗೂ ವಿದ್ಯುತ್‌ ಉಪಕರಣಗಳನ್ನು ಒದಗಿಸಲಾಗುತ್ತದೆ. ಸೆಲ್ಕೊ ಫೌಂಡೇಷನ್‌ 2021–22ನೇ ಸಾಲಿನಲ್ಲಿ 2 ಸಾವಿರ ಆರೋಗ್ಯ ಕೇಂದ್ರಗಳಿಗೆ ಸೌರ ವಿದ್ಯುತ್‌ ವ್ಯವಸ್ಥೆ ಕಲ್ಪಿಸಿದೆ.

ADVERTISEMENT

ಹರೀಶ್‌ ಹಂದೆ ಮಾತನಾಡಿ, ‘ಬಡ ಜನರಿಗೆ ಆರೋಗ್ಯ ಸೇವೆ ಒದಗಿಸುವ ಕೇಂದ್ರಗಳಲ್ಲಿ ಬದಲಾವಣೆಗೆ ನಾಂದಿ ಹಾಡುವ ಈ ಯೋಜನೆಯನ್ನು ಕೇಂದ್ರ ಸರ್ಕಾರ ಹಾಗೂ ಐಕಿಯಾಫೌಂಡೇಷನ್‌ ಸಹಯೋಗದಲ್ಲಿ ಅನುಷ್ಠಾನಗೊಳಿಸಲಿದ್ದೇವೆ. ಆರೋಗ್ಯ ವ್ಯವಸ್ಥೆಯ ಸುಧಾರಣೆಯ ಜತೆಗೆ ಮಾಲಿನ್ಯ ಪ್ರಮಾಣ ಸಹ ಕಡಿಮೆಯಾಗ
ಲಿದೆ. ಮುಂದಿನ ದಿನಗಳಲ್ಲಿ ಇತರ ರಾಜ್ಯಗಳಿಗೆ ಈ ಉಪಕ್ರಮವನ್ನು ವಿಸ್ತರಿಸಲು ಉತ್ಸುಕರಾಗಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.