ಬೆಂಗಳೂರು: ಬಿ.ಎಂ.ಶ್ರೀ. ಪ್ರತಿಷ್ಠಾನ ನೀಡುವ 2024ನೇ ಸಾಲಿನ ‘ಶಾ. ಬಾಲೂರಾವ್ ಅನುವಾದ ಪ್ರಶಸ್ತಿ’ಗೆ ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ ಅವರ ‘ಆ ಲಯ ಈ ಲಯ’ ನಾಟಕ ಹಾಗೂ ‘ಶಾ. ಬಾಲುರಾವ್ ಯುವ ಬರಹಗಾರ ಪ್ರಶಸ್ತಿ’ಗೆ ಲೇಖಕ ಆರ್. ದಿಲೀಪ್ ಕುಮಾರ್ ಅವರ ‘ಶಬ್ದ ಸೋಪಾನ’ ಕೃತಿ ಆಯ್ಕೆಯಾಗಿವೆ.
ಈ ಪ‍್ರಶಸ್ತಿಗಳು ತಲಾ ₹25 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿವೆ. 2024ರಲ್ಲಿ ಮೊದಲ ಮುದ್ರಣಗೊಂಡ ಕೃತಿಗಳನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಬಸವರಾಜ ಕಲ್ಗುಡಿ, ವಿ. ಕೃಷ್ಣಮೂರ್ತಿ ರಾವ್, ಪದ್ಮಿನಿ ನಾಗರಾಜು ಹಾಗೂ ಡಿ. ಭರತ್ ಅವರನ್ನು ಒಳಗೊಂಡ ಸಮಿತಿ ಈ ಆಯ್ಕೆ ಮಾಡಿದೆ.
ಇದೇ 26ರಂದು ಎನ್.ಆರ್. ಕಾಲೊನಿಯ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಅನುವಾದಕ ವಿ. ಕೃಷ್ಣಮೂರ್ತಿ ರಾವ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿಮರ್ಶಕ ಬಸವರಾಜ ಕಲ್ಗುಡಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಕಮಲಿನಿ ಶಾ. ಬಾಲುರಾವ್ ಉಪಸ್ಥಿತರಿರುತ್ತಾರೆ ಎಂದು ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಶಾಂತರಾಜು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.