ADVERTISEMENT

ಶೇಷಾದ್ರಿಪುರದ ಪ್ಲಾಟ್‌ಫಾರಂ ರಸ್ತೆ: ಅಗೆದ ಪಾದಚಾರಿ ಮಾರ್ಗ, ಕಿರಿದಾದ ರಸ್ತೆ!

ಖಲೀಲಅಹ್ಮದ ಶೇಖ
Published 7 ಜುಲೈ 2025, 0:24 IST
Last Updated 7 ಜುಲೈ 2025, 0:24 IST
ಮಂತ್ರಿಸ್ಕ್ವೇರ್‌ನಿಂದ ಮೆಜೆಸ್ಟಿಕ್‌ ಬಸ್‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ಲಾಟ್‌ಫಾರಂ ರಸ್ತೆಯ ಪಾದಚಾರಿ ಮಾರ್ಗ ಅಗೆದು, ಅಲ್ಲಲ್ಲಿ ಕೊಳವೆಗಳನ್ನು ಇಡಲಾಗಿದೆ
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಮಂತ್ರಿಸ್ಕ್ವೇರ್‌ನಿಂದ ಮೆಜೆಸ್ಟಿಕ್‌ ಬಸ್‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ಲಾಟ್‌ಫಾರಂ ರಸ್ತೆಯ ಪಾದಚಾರಿ ಮಾರ್ಗ ಅಗೆದು, ಅಲ್ಲಲ್ಲಿ ಕೊಳವೆಗಳನ್ನು ಇಡಲಾಗಿದೆ ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಶೇಷಾದ್ರಿಪುರದ ಪ್ಲಾಟ್‌ಫಾರಂ ಮುಖ್ಯರಸ್ತೆಯ ಎರಡೂ ಬದಿಯನ್ನು ಒಳ ಚರಂಡಿ (ಯುಜಿಡಿ) ಕಾಮಗಾರಿಗಾಗಿ ಅಗೆಯಲಾಗಿದೆ. ಇಲ್ಲಿ ಕೆಲಸ ಕುಂಟುತ್ತಾ ಸಾಗಿದ್ದು, ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಡಕಾಗಿದೆ. 

ಈ ರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಆರಂಭವಾಗಲಿದೆ. ಹೀಗಾಗಿ ಬೆಂಗಳೂರು ಜಲಮಂಡಳಿ ಎರಡು ತಿಂಗಳ ಹಿಂದೆಯೇ ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗಗಳನ್ನು ಅಗೆದು ಯುಜಿಡಿ ಕಾಮಗಾರಿ ಪ್ರಾರಂಭಿಸಿದೆ. ಕೆಲವು ಕಡೆ ಗುಂಡಿಗಳನ್ನು ತೆಗೆಯಲಾಗಿದೆ. ಒಳ ಚರಂಡಿಗೆ ಜೋಡಿಸುವ ಕೊಳವೆಗಳನ್ನು ಬೇಕಾಬಿಟ್ಟಿಯಾಗಿ ಇಡಲಾಗಿದೆ. ತೆರೆದ ಗುಂಡಿಗಳ ಸುತ್ತ–ಮುತ್ತ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ರಾತ್ರಿ ವೇಳೆ ಈ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ.

ಈ ಮಾರ್ಗದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಜೀವವಿಮೆ ಕಚೇರಿ, ಅಪೊಲೊ ಆಸ್ಪತ್ರೆ ಹಾಗೂ ಜೆಡಿಎಸ್‌ ಕಚೇರಿ ಇದೆ. ಇಲ್ಲಿಗೆ ನಿತ್ಯ ನೂರಾರು ಜನ ಭೇಟಿ ನೀಡುತ್ತಾರೆ. ಪಾದಚಾರಿ ಮಾರ್ಗ ಅಧ್ವಾನಗೊಂಡಿರುವುದರಿಂದ ಸಾರ್ವಜನಿಕರು ರಸ್ತೆಯ ಮೂಲಕವೇ ಸಂಚರಿಸುತ್ತಿದ್ದು, ಅಪಘಾತಗಳು ಸಂಭವಿಸುವ ಅಪಾಯ ಎದುರಾಗಿದೆ. 

ADVERTISEMENT

ಯಶವಂತಪುರ, ಯಲಹಂಕ, ಮಲ್ಲೇಶ್ವರ, ಶೇಷಾದ್ರಿಪುರ, ಕುರುಬರಹಳ್ಳಿ, ರಾಜಾಜಿನಗರದಿಂದ ಬರುವ ಎಲ್ಲ ಬಿಎಂಟಿಸಿ ಬಸ್‌ಗಳು ಪ್ಲಾಟ್‌ಫಾರಂ ರಸ್ತೆಯ ಮೂಲಕ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ತೆರಳುತ್ತವೆ. ಯುಜಿಡಿ ಕಾಮಗಾರಿಯ ಹೆಸರಿನಲ್ಲಿ ಕಿರಿದಾದ ರಸ್ತೆಯನ್ನು ಅಗೆದ ಪರಿಣಾಮ ನಿತ್ಯ ದಟ್ಟಣೆಯ ಅವಧಿಯಲ್ಲಿ ಓಕಳಿಪುರಂ ಮಿಲ್‌ ಜಂಕ್ಷನ್‌ನಿಂದ ಮಂತ್ರಿ ಸ್ಕ್ವೇರ್‌ನಲ್ಲಿರುವ ರಾಜೀವ್‌ ಗಾಂಧಿ ಪ್ರತಿಮೆವರೆಗೂ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. 

‘ಈ ರಸ್ತೆಯಲ್ಲಿ ಬೆಳಿಗ್ಗೆ ವೇಳೆ ಸಂಚರಿಸುವುದು ಒಂದು ರೀತಿಯ ದುಸ್ತರವಾದರೆ, ರಾತ್ರಿ ವೇಳೆ ಪಾದಚಾರಿಗಳು ನಡೆದಾಡುವುದೇ ಕಷ್ಟ. ಮಳೆ ಬಂದಾಗ, ಅಗೆದಿರುವ ಜಾಗ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ನಿತ್ಯ ದೂಳಿನ ಮಜ್ಜನವಾಗುತ್ತಿದ್ದು, ಆರೋಗ್ಯ ಹದಗೆಡುತ್ತಿದೆ. ಸಂಬಂಧಪಟ್ಟವರಿಗೆ ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಮಾಡಿದರೂ, ಪ್ರಯೋಜನವಾಗುತ್ತಿಲ್ಲ. ಅಂಗಡಿಗಳ ಮುಂದೆ ದೊಡ್ಡ ಗುಂಡಿ ತೋಡಲಾಗಿದೆ. ಇದರಲ್ಲಿ ಗ್ರಾಹಕರು ಹಾಗೂ ವ್ಯಾಪಾರಿಗಳು ಬಿದ್ದು ಕಾಲು ಮುರಿದುಕೊಂಡಿದ್ದಾರೆ’ ಎಂದು ಪಾರ್ಸೆಲ್‌ ಅಂಗಡಿಯ ಸಿಬ್ಬಂದಿ ಅಳಲು ತೋಡಿಕೊಂಡರು. 

‘ಬೆಂಗಳೂರು ಜಲಮಂಡಳಿ ಸಿಬ್ಬಂದಿ ನಾನಾ ಕಾರಣಗಳಿಂದ ಕಾಮಗಾರಿ ವಿಳಂಬ ಮಾಡುತ್ತಿದ್ದಾರೆ. ಪಾದಚಾರಿ ಮಾರ್ಗವನ್ನು ಅಗೆದು, ಮಣ್ಣಿನ ರಾಶಿಯನ್ನು ಅಂಗಡಿ ಮುಂಭಾಗದಲ್ಲಿ ಹಾಕಿದ್ದಾರೆ. ಇದರಿಂದ ಗ್ರಾಹಕರು ಅಂಗಡಿಗೆ ಬರುತ್ತಿಲ್ಲ. ವ್ಯಾಪಾರ–ವಹಿವಾಟು ಕಡಿಮೆ ಆಗಿದೆ. ಬಸ್‌ಗೆ ಹಾಕುವ ಪಾರ್ಸೆಲ್‌ಗಳನ್ನು ಮಂತ್ರಿ ಸ್ಕ್ವೇರ್‌ಗೆ ತೆರಳಿ ಹಾಕಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರಿಯಾಗಿ ಕೆಲಸ ಮಾಡದೇ ಕಾಲಹರಣ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಕೊಡಬೇಕು ಎಂಬ ಉದ್ದೇಶದಿಂದ ವಿಳಂಬ ನೀತಿ ಅನುಸರಿಸುತ್ತಿದ್ದಾರೆ’ ಎಂದು ಪಾನ್‌ಶಾಪ್‌ ಅಂಗಡಿ ವ್ಯಾಪಾರಿ ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದರು.

‘ಪ್ಲಾಟ್‌ಫಾರಂ ರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಕೈಗೊಳ್ಳಲಾಗುತ್ತದೆ. ಅದಕ್ಕೂ ಮೊದಲು ಜಲಮಂಡಳಿಯಿಂದ ಯುಜಿಡಿ ಕಾಮಗಾರಿ ಶುರುವಾಗಿದೆ. ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ’ ಎಂದು ಜಲಮಂಡಳಿ ಎಂಜಿನಿಯರ್‌ವೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ಲಾಟ್‌ಫಾರಂ ರಸ್ತೆಯಲ್ಲಿ ಮಣ್ಣಿನ ರಾಶಿ ಹಾಕಿರುವುದರಿಂದ ನಿತ್ಯ ಸಂಚಾರ ದಟ್ಟಣೆ ಉಂಟಾಗುತ್ತಿದೆ

ಪ್ಲಾಟ್‌ಫಾರಂ ರಸ್ತೆಯಲ್ಲಿ ಕೇಬಲ್‌ ಅಳವಡಿಸಲು ಪಾದಚಾರಿ ಮಾರ್ಗ ಅಗೆದು ಹಾಗೆಯೇ ಬಿಡಲಾಗಿದೆ

ಅಂಗಡಿ ಮುಂಭಾಗದಲ್ಲಿ ಮಣ್ಣಿನ ರಾಶಿ ಹಾಕಲಾಗಿದೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ಅನನಕೂಲವಾಗಿದೆ. ಮಳೆ ಬಂದರೆ ರಸ್ತೆಯು ಕೆಸರು ಗದ್ದೆಯಾಗುತ್ತದೆ. ಅಭಿವೃದ್ಧಿ ಕಾಮಗಾರಿಗೆ ನಮ್ಮ ವಿರೋಧವಿಲ್ಲ. ಆದರೆ ವಿಳಂಬ ನೀತಿ ಅನುಸರಿಸುವುದು ಸರಿಯಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು
ಪರಮೇಶ್ವರ್ ಅಡಿಗ ಪಾನ್‌ಶಾಪ್‌ ಅಂಗಡಿ ವ್ಯಾಪಾರಿ
ಮ್ಮ ಪಾರ್ಸೆಲ್‌ ಅಂಗಡಿಗೆ ಬರುವ ಔಷಧಿಗಳನ್ನು ಪಡೆದುಕೊಳ್ಳಲು ಬರುವ ಗ್ರಾಹಕರಿಗೆ ತೊಂದರೆ ಆಗುತ್ತಿದೆ. ಪಾರ್ಸೆಲ್‌ಗಳನ್ನು ವಾಹನದಿಂದ ಅನ್‌ಲೋಡ್‌ ಮಾಡಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರದೀಪ್ ಪಾರ್ಸೆಲ್‌ ಅಂಗಡಿ ಸಿಬ್ಬಂದಿ
ಈ ರಸ್ತೆಯಲ್ಲಿ ಬೆಳಿಗ್ಗೆ 8 ರಿಂದ 10 ಗಂಟೆವರೆಗೆ ಹಾಗೂ ಸಂಜೆ 4ರಿಂದ 8 ಗಂಟೆಯ ಅವಧಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಮೆಜೆಸ್ಟಿಕ್‌ಗೆ ನಡೆದುಕೊಂಡು ಹೋದರೆ ಬೇಗ ತಲುಪಬಹುದು. ಆದರೆ ವಾಹನದಲ್ಲಿ ಸಂಚರಿಸಲು ಆಗುವುದಿಲ್ಲ. ಕಾಮಗಾರಿಯ ಜಾಗದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಯಾರಾದರೂ ಗುಂಡಿಗಳಲ್ಲಿ ಬಿದ್ದು ಅನಾಹುತ ಆಗುವ ಸಾಧ್ಯತೆ ಇದೆ.
ನಾಗರಾಜ್ ನಾಗರಬಾವಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.