ADVERTISEMENT

ಚಿತ್ರರಂಗದಲ್ಲಿ ಸಂಭಾವನೆ ತಾರತಮ್ಯ ಬೇಡ: ನಟ ಶಿವರಾಜ್‌ಕುಮಾರ್ ಅಭಿಮತ

ಎಸ್.ಪಿ.ವರದರಾಜು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಶಿವರಾಜ್‌ಕುಮಾರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 0:30 IST
Last Updated 15 ಫೆಬ್ರುವರಿ 2026, 0:30 IST
ಕಾರ್ಯಕ್ರಮದಲ್ಲಿ ಬಿ. ಗುರುರಾಜು ಹಾಗೂ ಪುಷ್ಪಮಾಲಾ ಅವರಿಗೆ ‘ಎಸ್.ಪಿ.ವರದರಾಜು ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಬರಗೂರು ರಾಮಚಂದ್ರಪ್ಪ, ಶಿವರಾಜ್‌ಕುಮಾರ್‌, ಜಯಮಾಲಾ, ಗೀತಾ, ರಾಘವೇಂದ್ರ ರಾಜ್‌ಕುಮಾರ್‌, ಅಂಬಿಕಾ, ರಾಮಕೃಷ್ಣ, ಸುಂದರ್‌ರಾಜ್ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಬಿ. ಗುರುರಾಜು ಹಾಗೂ ಪುಷ್ಪಮಾಲಾ ಅವರಿಗೆ ‘ಎಸ್.ಪಿ.ವರದರಾಜು ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಬರಗೂರು ರಾಮಚಂದ್ರಪ್ಪ, ಶಿವರಾಜ್‌ಕುಮಾರ್‌, ಜಯಮಾಲಾ, ಗೀತಾ, ರಾಘವೇಂದ್ರ ರಾಜ್‌ಕುಮಾರ್‌, ಅಂಬಿಕಾ, ರಾಮಕೃಷ್ಣ, ಸುಂದರ್‌ರಾಜ್ ಉಪಸ್ಥಿತರಿದ್ದರು   

ಬೆಂಗಳೂರು: ‘ಕನ್ನಡ ಚಿತ್ರರಂಗದಲ್ಲಿ ಸಂಭಾವನೆ ತಾರತಮ್ಯ ತೊಲಗಬೇಕು. ಇಲ್ಲಿನ ಕಲಾವಿದರಿಗೆ ಹೆಚ್ಚಿನ ಅವಕಾಶ ಹಾಗೂ ಸಂಭಾವನೆಯನ್ನು ನೀಡಬೇಕು’ ಎಂದು ನಟ ಶಿವರಾಜ್‌ಕುಮಾರ್ ಆಗ್ರಹಿಸಿದರು. 

ಎಸ್‌.ಪಿ. ವರದರಾಜು ಬಳಗ ‌ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಂಗಭೂಮಿ ಕ್ಷೇತ್ರದಿಂದ ಕಲಾವಿದೆ ಪುಷ್ಪಮಾಲಾ ಎ.ಅಣ್ಣಿಗೇರಿ ಹಾಗೂ ಚಲನಚಿತ್ರ ಕ್ಷೇತ್ರದಿಂದ ನಿರ್ದೇಶಕ ಬಿ.ಗುರುರಾಜು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಈ ವೇಳೆ ಮಾತನಾಡಿದ ಶಿವರಾಜ್‌ಕುಮಾರ್, ‘ಬೇರೆ ಭಾಷೆಯಿಂದ ಬಂದವರಿಗೆ ಉತ್ತಮ ಸಂಭಾವನೆ ನೀಡಲಾಗುತ್ತಿದೆ. ಆದರೆ, ನಮ್ಮವರಿಗೆ ಹೆಚ್ಚಿನ ಸಂಭಾವನೆ ನೀಡುತ್ತಿಲ್ಲ. ಚಿತ್ರರಂಗದಲ್ಲಿರುವ ಗುಂಪುಗಾರಿಕೆ ತೊಲಗಬೇಕು. ಇಲ್ಲಿನ ಕಲಾವಿದರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಬೇಕು. ಅವರು ಕೂಡ ಜೀವನ ಕಟ್ಟಿಕೊಳ್ಳಬೇಕು. ಆದ್ದರಿಂದ ಇಲ್ಲಿನ ಕಲಾವಿದರಿಗೆ ಸೂಕ್ತ ಸಂಭಾವನೆ ನೀಡಬೇಕು. ಅಪ್ಪಾಜಿ (ರಾಜ್‌ಕುಮಾರ್) ಕೂಡ ಇದನ್ನೇ ಹೇಳಿದ್ದರು. ನಾನು ನನ್ನ ಸಿನಿಮಾದಲ್ಲಿ ಇಲ್ಲಿನ ಕಲಾವಿದರಿಗೆ ಅವಕಾಶ ಹಾಗೂ ಸೂಕ್ತ ಸಂಭಾವನೆ ನೀಡುತ್ತಿದ್ದೇನೆ’ ಎಂದು ಹೇಳಿದರು.

ADVERTISEMENT

‘ಅಪ್ಪಾಜಿ, ಅಮ್ಮ ನಮಗೆ ಜೀವವಾಗಿದ್ದರೆ, ಅಪ್ಪಣ್ಣ (ವರದರಾಜು) ಉಸಿರಾಗಿದ್ದರು’ ಎಂದು ಹೇಳಿದ ಅವರು, ವರದರಾಜು ಅವರ ಜತೆಗಿನ ಒಡನಾಟ ಸ್ಮರಿಸಿಕೊಂಡರು. 

ಎಸ್‌.ಪಿ. ವರದರಾಜು ಬಳಗದವರೂ ಆದ ಸಾಹಿತಿ ಬರಗೂರು ರಾಮಚಂದ್ರಪ್ಪ, ‘ರಾಜ್‌ಕುಮಾರ್ ಅವರಿಗೆ ಬೆನ್ನೆಲುಬಾಗಿ ನಿಂತವರು ಅವರ ಸಹೋದರ ವರದರಾಜು. ರಾಜ್‌ಕುಮಾರ್, ಪಾರ್ವತಮ್ಮ ಹಾಗೂ ವರದರಾಜು ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ರಾಜ್‌ಕುಮಾರ್‌ ಅವರದ್ದು ಭಾವ ಪ್ರಧಾನ ವ್ಯಕ್ತಿತ್ವವಾದರೆ, ವರದರಾಜು ಅವರದ್ದು ಬುದ್ಧಿ ಪ್ರಧಾನ ವ್ಯಕ್ತಿತ್ವವಾಗಿತ್ತು. ಪಾರ್ವತಮ್ಮ ಅವರು ಆರ್ಥಿಕ ಭದ್ರತೆ ಒದಗಿಸುತ್ತಿದ್ದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಇದಕ್ಕೂ ಮೊದಲು ಮಾತನಾಡಿದ ಕಲಾವಿದ ರಾಮಕೃಷ್ಣ ಅವರು ರಾಜ್‌ಕುಮಾರ್ ಹಾಗೂ ವರದರಾಜು ಅವರ ಜತೆಗಿನ ಒಡನಾಟ ಸ್ಮರಿಸಿಕೊಂಡರು.

ಎಸ್‌.ಪಿ. ವರದರಾಜು ಕುಟುಂಬದವರು ಇದೇ ವೇಳೆ ಪ್ರಶಸ್ತಿ ಪುರಸ್ಕೃತರಿಗೆ ತಲಾ ₹ 40 ಸಾವಿರ ನಗದು ನೀಡಿ ಗೌರವಿಸಿದರು. ಶಿವರಾಜ್‌ಕುಮಾರ್ ಅವರ ವತಿಯಿಂದಲೂ ತಲಾ ₹ 25 ಸಾವಿರ ನೀಡಲಾಗುತ್ತಿದೆ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದರು. ನಟ ರಾಘವೇಂದ್ರ ರಾಜ್‌ಕುಮಾರ್, ನಟಿ ಅಂಬಿಕಾ, ಗೀತಾ ಉಪಸ್ಥಿತರಿದ್ದರು. 

ಇದಕ್ಕೂ ಮೊದಲು ಮಂಜುಳಾ ಗುರುರಾಜ್ ಅವರು ರಾಜ್‌ಕುಮಾರ್ ಚಿತ್ರಗೀತೆಗಳನ್ನು ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.