ADVERTISEMENT

ಶಿವ ಸ್ಮರಣೆ: ರಾತ್ರಿಯಿಡಿ ಜಾಗರಣೆ

ನಗರದ ವಿವಿಧ ಶಿವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಸಹಸ್ರ ಬಿಲ್ವಾರ್ಚನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 23:24 IST
Last Updated 21 ಫೆಬ್ರುವರಿ 2020, 23:24 IST
ಹಳೇ ವಿಮಾನ ನಿಲ್ದಾಣ ರಸ್ತೆಯ ಶಿವನ ದೇಗುಲದಲ್ಲಿ ಭಕ್ತರು ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿದರು
ಹಳೇ ವಿಮಾನ ನಿಲ್ದಾಣ ರಸ್ತೆಯ ಶಿವನ ದೇಗುಲದಲ್ಲಿ ಭಕ್ತರು ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿದರು   
""

ಬೆಂಗಳೂರು: ಈಶ್ವರನಿಗೆ ಕ್ಷೀರಾಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ, ಓಂ ನಮಃ ಶಿವಾಯ ಜಪ... ಇದು ನಗರದ ಹಲವು ಶಿವ ದೇಗುಲಗಳಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶುಕ್ರವಾರ ಕಂಡು ಬಂದ ದೃಶ್ಯಗಳಿವು.

ಹಬ್ಬದ ಅಂಗವಾಗಿ ವಿಶೇಷ ಪೂಜೆಗಳು ದೇವಾಲಯಗಳಲ್ಲಿ ನಡೆದವು. ಜನರು ಶ್ರದ್ಧಾಭಕ್ತಿಯಿಂದ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಹಿರಿಯರು, ಕಿರಿಯರು ಭಕ್ತಿಭಾವದಿಂದ ಶಿವಲಿಂಗಕ್ಕೆ ಕ್ಷೀರಾಭಿಷೇಕ ನೆರವೇರಿಸಿದರು. ಕೆಲ ದೇಗುಲಗಳಲ್ಲಿ ಬೆಳಗಿನ ಜಾವದಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದು ಕಂಡು ಬಂತು.

ಹೂವಿನ ಅಲಂಕಾರ, ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಮಹಾಲಕ್ಷ್ಮೀ ಹೋಮ, ವಿಶೇಷ ರುದ್ರ ಹೋಮ. ಸಹಸ್ರ ಬಿಲ್ವಾರ್ಚನೆ ಮಹಾ ಮಂಗಳಾರತಿ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ನಡೆದವು.

ADVERTISEMENT

ಮಲ್ಲೇಶ್ವರದ ದಕ್ಷಿಣಮುಖ ನಂದಿ ತೀರ್ಥ ದೇವಸ್ಥಾನ, ಕಾಡು ಮಲ್ಲೇಶ್ವರ, ಜಲಕಂಠೇಶ್ವರ, ಗವಿಪುರ ಗವಿಗಂಗಾಧರೇಶ್ವರ ಸೇರಿ ಬಹುತೇಕ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಬಳಿಕ ಭಕ್ತರಿಗೆ ತೀರ್ಥ ಮತ್ತು ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಹನುಮಂತನಗರದ ಶೇಷಮಹಾ ಬಲಮುರಿ ಗಣಪತಿ ದೇವಸ್ಥಾನ, ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿರುವ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ, ಹಲಸೂರಿನ ಸೋಮೇಶ್ವರ ದೇವಸ್ಥಾನ, ಕೋಣನಕುಂಟೆ ಚಂದ್ರಚೂಡೇಶ್ವರ ದೇವಸ್ಥಾನ, ಪುಟ್ಟೇನಹಳ್ಳಿಯ ಶಿವ ದೇವಾಲಯ ಸೇರಿ ನಗರದ ನೂರಾರು ದೇವಾಲಯಗಳಲ್ಲಿ ಮಹಾಶಿವರಾತ್ರಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘದ ವತಿಯಿಂದ ಮಲ್ಲೇಶ್ವರದ ಶ್ರೀಕಂಠೇಶ್ವರ ಭವನದ ಆವರಣದಲ್ಲಿ ‘ಮೃತ್ತಿಕಾ ಶಿವಲಿಂಗ’ವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಕೆಂಗೇರಿಯ-ಉತ್ತರಹಳ್ಳಿ ರಸ್ತೆಯ ಶ್ರೀನಿವಾಸಪುರದ ಶ್ರೀದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಶಿವನ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಜಯನಗರ ಮಹಾಶಿವರಾತ್ರಿ ಉತ್ಸವ ಸಮಿತಿಯಿಂದ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ವಿಶೇಷ ಪೂಜೆ ಹಾಗೂ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಗವಿಪುರದಲ್ಲಿನ ಗವಿಗಂಗಾಧರೇಶ್ವರ ದೇವಾಲಯದ ಬಳಿ ಪೂಜೆಗಾಗಿ ಸಾಲುಗಟ್ಟಿ ನಿಂತಿರುವ ಶಿವಭಕ್ತರು –ಪ್ರಜಾವಾಣಿ ಚಿತ್ರ

ವಿದ್ಯುತ್ ದೀಪಗಳ ಮೆರುಗು
ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಶಿವನ ದೇವಾಲಯಗಳು ತಳಿರು ತೋರಣಗಳಿಂದ ಅಲಂಕಾರಗೊಂಡಿದ್ದವು. ಬಣ್ಣ ಬಣ್ಣದ ವಿದ್ದುದ್ದೀಪಗಳು ದೇಗುಲದ ಮೆರುಗು ಹೆಚ್ಚಿಸಿದ್ದವು.

ಬನಶಂಕರಿ 3ನೇ ಹಂತದ ಇಟ್ಟಮಡುವಿನಲ್ಲಿರುವ ಶ್ರೀರಾಮೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಹಿನ್ನೆಲೆಯಲ್ಲಿ ಶಿವನಮೂರ್ತಿಗೆ 1,001 ಲೀಟರ್ ಹಾಲಿನ ಅಭಿಷೇಕ ಮಾಡಲಾಯಿತು. ಲಕ್ಷ ಬಿಲ್ವಾರ್ಚನೆ ಮತ್ತು ವೈಭವದ ಮೆರವಣಿಗೆ ನಡೆಸಲಾಯಿತು.

ಸೋಂಪುರ: ಶಿವನ ಆರಾಧನೆ
ದಾಬಸ್ ಪೇಟೆ:
ಸೋಂಪುರ ಹೋಬಳಿಯ ಎಲ್ಲ ಹಳ್ಳಿಗಳಲ್ಲಿ ಭಕ್ತರು ಶಿವರಾತ್ರಿಯನ್ನು ಸಡಗರದಿಂದ ಆಚರಿಸಿದರು.

ಶಿವಗಂಗೆಯ ಗಂಗಾಧರೇಶ್ವರ, ಸೋಂಪುರದ ಸೋಮೇಶ್ವರ, ದೇವರಹೊಸಹಳ್ಳಿಯ ವೀರಭದ್ರ, ನಿಡವಂದ, ಶಿರಗನಹಳ್ಳಿ ಬಸವಣ್ಣ, ಕರಿಮಣ್ಣೆ ಈಶ್ವರ ದೇವಾಲಯ ಸೇರಿದಂತೆ ಹಲವು ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆದವು.

ಇತಿಹಾಸ ಪ್ರಸಿದ್ದ ಶಿವಗಂಗೆ ಗಂಗಾಧರೇಶ್ವರ ದೇವಾಲಯಕ್ಕೆ ಭಕ್ತರ ದಂಡೇ ಆಗಮಿಸಿತ್ತು. ದೂರದೂರುಗಳಿಂದ ಬಂದಿದ್ದ ಭಕ್ತರು ದೇವರ ದರುಶನ ಪಡೆದರು.

ಸೋಮೇಶ್ವರನಿಗೆ ವಿಶೇಷ ಪೂಜೆ: ಇಲ್ಲಿನ ಸೋಮೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ನೂರಾರು ಭಕ್ತರು ಪೂಜೆ ಸಲ್ಲಿಸಿದರು. ಭಕ್ತರಿಗೆ ಪಾನಕ, ಕೋಸಂಬರಿ, ನೀರುಮಜ್ಜಿಗೆ, ಪ್ರಸಾದ ವಿತರಿಸಲಾಯಿತು.

ಉತ್ಸವ ಮೂರ್ತಿಯನ್ನು ಬೀದಿಗಳಲ್ಲಿ ಸಂಜೆ ಮೆರವಣಿಗೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.