ADVERTISEMENT

‘ಸಿಂಗನಾಯಕನಹಳ್ಳಿ ಕೆರೆಯ ಜಂಟಿ ಸರ್ವೆ ನಡೆಸಲಿ’–ಎಎಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 11:37 IST
Last Updated 25 ಜೂನ್ 2021, 11:37 IST
ಸಿಂಗನಾಯಕನಹಳ್ಳಿ ಕೆರೆ ಅಂಗಳದಲ್ಲಿ ಬೆಳೆದಿರುವ ಮರಗಳು
ಸಿಂಗನಾಯಕನಹಳ್ಳಿ ಕೆರೆ ಅಂಗಳದಲ್ಲಿ ಬೆಳೆದಿರುವ ಮರಗಳು   

ಬೆಂಗಳೂರು: ‘ಯಲಹಂಕದ ಸಿಂಗನಾಯಕನಹಳ್ಳಿ ಕೆರೆಯು265 ಎಕರೆ ವಿಸ್ತೀರ್ಣ ಹೊಂದಿದ್ದು, ಈ ಪೈಕಿ ಕೆಲ ಎಕರೆಗಳಷ್ಟು ಜಾಗವನ್ನು ಪ್ರಭಾವಿಗಳು ಹಾಗೂ ರಿಯಲ್ ಎಸ್ಟೇಟ್‌ ಉದ್ಯಮಿಗಳು ಒತ್ತುವರಿ ಮಾಡಿರುವ ಅನುಮಾನವಿದೆ. ಹೀಗಾಗಿ ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಂಟಿ ಸರ್ವೆ ನಡೆಸಬೇಕು’ ಎಂದು ಆಮ್‌ ಆದ್ಮಿ ಪಕ್ಷ ಆಗ್ರಹಿಸಿದೆ.

ಪಕ್ಷದ ನಿಯೋಗವು ಶುಕ್ರವಾರ ಕೆರೆಯ ಜಾಗಕ್ಕೆ ಭೇಟಿ ನೀಡಿ‍ಪರಿಶೀಲನೆ ನಡೆಸಿತು.

‘ಇದುವರೆಗೂ ಈ ಕೆರೆಯ ಪುನರುಜ್ಜೀವನ ಕಾರ್ಯ ನಡೆಯದಿರುವುದು ಬೇಸರದ ಸಂಗತಿ. ಕೆರೆಯಲ್ಲಿ7,500 ಕ್ಕೂ ಅಧಿಕ ಜಾಲಿ ಮರಗಳು ಬೆಳೆದಿವೆ. ಇವು ಸುಮಾರು 50 ವರ್ಷಗಳಷ್ಟು ಹಳೆಯದಾಗಿವೆ. ಕೋಟ್ಯಂತರ ರೂಪಾಯಿ ಮೌಲ್ಯದ ಜಾಲಿ, ಹೊಂಗೆ ಹಾಗೂ ಬೇವಿನ ಮರಗಳು ಟಿಂಬರ್‌ ಮಾಫಿಯಾಕ್ಕೆ ಬಲಿಯಾಗುತ್ತಿವೆ. ಕೆರೆ ಅಭಿವೃದ್ಧಿ ಹೆಸರಿನಲ್ಲಿ ಇವುಗಳಿಗೆ ಕೊಡಲಿ ಏಟು ಬೀಳುತ್ತಿದೆ. ಇದು ಕೂಡಲೇ ನಿಲ್ಲಬೇಕು’ ಎಂದು ಬೆಂಗಳೂರು ನಗರ ಅಧ್ಯಕ್ಷ ಮೋಹನ್‌ ದಾಸರಿ ಒತ್ತಾಯಿಸಿದರು.

ADVERTISEMENT

‘ಕೆರೆಯು ಪ್ರಾಣಿ, ಪಕ್ಷಿಗಳ ಆವಾಸ ಸ್ಥಾನವಾಗಿದೆ. ಹೀಗಾಗಿ ಮರಗಳನ್ನು ಕಡಿಯದೆಯೇ ವೈಜ್ಞಾನಿಕ ರೀತಿಯಲ್ಲಿ ಹೂಳೆತ್ತುವ ಕೆಲಸ ಆಗಲಿ. ಭಾರತೀಯ ವಿಜ್ಞಾನ ಸಂಸ್ಥೆಯ ಸಸ್ಯಶಾಸ್ತ್ರ ವಿಭಾಗದ ವಿಜ್ಞಾನಿಗಳನ್ನೊಳಗೊಂಡ ಸಮಿತಿ ನೀಡಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಮೂಲಕ ಪರಿಸರವನ್ನು ಸಂರಕ್ಷಿಸಲಿ. ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಟಿಂಬರ್‌ ಮಾಫಿಯಾಗೆ ಅನುಕೂಲವಾಗುವಂತಹ ತೀರ್ಮಾನ ಕೈಗೊಳ್ಳುವುದನ್ನು ನಿಲ್ಲಿಸಲಿ’ ಎಂದರು.

ಪಕ್ಷದ ಮುಖಂಡರಾದ ಫಣಿರಾಜ್‌, ಜಗದೀಶ್ ವಿ. ಸದಂ, ರಾಜಶೇಖರ್ ದೊಡ್ಡಣ್ಣ, ಜಯಕುಮಾರ್, ನಿತಿನ್ ರೆಡ್ಡಿ ಸಂತೋಷ್, ಪ್ರಕಾಶ್, ಉಷಾ ಮೋಹನ್, ಸುಹಾಸಿನಿ ಹಾಗೂ ಪುರುಷೋತ್ತಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.