ADVERTISEMENT

ಕಳ್ಳತನಕ್ಕೆ ಪ್ರಚೋದಿಸಿದ್ದ ಮಹಿಳೆ ಸೇರಿ ಆರು ಮಂದಿ ಬಂಧನ

ಸಾಲ ನೀಡಿದ್ದ ಉದ್ಯಮಿ ಮನೆಯಲ್ಲಿ ನಗದು, ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 16:10 IST
Last Updated 17 ಆಗಸ್ಟ್ 2025, 16:10 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಮನೆಯ ಬೀಗ ಮುರಿದು ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಆರು ಮಂದಿಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪೀಣ್ಯ ಒಂದನೇ ಹಂತ ನಿವಾಸಿ ವೆಂಕಟೇಶ್, ಕಿರ್ಲೋಸ್ಕರ್ ಕಾಲೊನಿ ನಿವಾಸಿ ಕೃಷ್ಣ ಅಲಿಯಾಸ್ ಮೋರಿ ರಾಜ, ತಮಿಳುನಾಡಿನ ಶ್ರೀನಿವಾಸನಗರದ ಹರೀಶ್, ಪ್ರತಾಪ್, ಬಳ್ಳಾರಿ ಜಿಲ್ಲೆಯ ಗಂಗಮ್ಮನಹಳ್ಳಿ ಗ್ರಾಮದ ನಾಗರಾಜ ಹಾಗೂ ದಾಸರಹಳ್ಳಿಯ ಕವಿತಾ ಅವರನ್ನು ಬಂಧಿಸಿ, ₹9.90 ಲಕ್ಷ ಮೌಲ್ಯದ 99 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಜುಲೈ 12ರಂದು ಸ್ನೇಹ ಧಮ್ ಬಿರಿಯಾನಿ ಹೋಟೆಲ್ ಮಾಲೀಕರಾದ ಮಂಗಳಾ ಅವರ ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಕಳ್ಳರು ಪರಾರಿಯಾಗಿದ್ದರು. ಮಂಗಳಾ ಅವರ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬಾತ್ಮೀದಾರರ ಮಾಹಿತಿ ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.

ಪರಿಚಿತರಾದ ಹೋಟೆಲ್ ಉದ್ಯಮಿ ಮಂಗಳಾ ಬಳಿ ಕವಿತಾ ಕೈ ಸಾಲ ಮಾಡಿದ್ದರು. ಈ ಬಗ್ಗೆ ಕರಾರು ಮಾಡಿಕೊಳ್ಳಲಾಗಿತ್ತು. ಸಾಲ ಹಿಂದಿರುಗಿಸುವಂತೆ ಉದ್ಯಮಿ ಒತ್ತಾಯ ಮಾಡಿದರು. ಆಗ ಕವಿತಾ, ತನ್ನ ಅಣ್ಣ, ಆರೋಪಿ ವೆಂಕಟೇಶ್‌ಗೆ ವಿಷಯ ತಿಳಿಸಿದಳು. ಸಾಲ ನೀಡಿದ್ದ ಉದ್ಯಮಿ ಮನೆಯಲ್ಲಿಯೇ ಕಳ್ಳತನ ಮಾಡಲು ಇಬ್ಬರೂ ಯೋಜನೆ ರೂಪಿಸಿದರು. ವೆಂಕಟೇಶ್‌ ಹಾಗೂ ಆತನ ಸಹಚರರು ಮನೆಯ ಬೀಗ ಒಡೆದು ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡಿನ ತಿರುಚ್ಚಿ ಮತ್ತು ಆಂಧ್ರಪ್ರದೇಶದ ಪೇರುಪಳ್ಳಿಯ ಗಿರವಿ ಅಂಗಡಿಗಳಲ್ಲಿ ಮಾರಾಟ ಮಾಡಿದ್ದ ಆಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಳ್ಳತನಕ್ಕೆ ಪ್ರಚೋದನೆ ನೀಡಿದ ಆರೋಪಿಯ ಸಹೋದರಿಗೂ ನೋಟಿಸ್ ನೀಡಿ, ವಿಚಾರಣೆ ನಡೆಸಿ ಬಂಧಿಸಲಾಗಿದೆ.

ಆರೋಪಿ ಕೃಷ್ಣ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 20 ಪ್ರಕರಣಗಳು ದಾಖಲಾಗಿವೆ. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ತನ್ನ ಸಹಚರರೊಂದಿಗೆ ಸೇರಿ ಮನೆ ಕಳ್ಳತನ ಮಾಡುವುದರಲ್ಲಿ ತೊಡಗಿಕೊಂಡಿದ್ದ. ವೆಂಕಟೇಶ್, ಹರೀಶ್, ನಾಗರಾಜ ವಿರುದ್ದವೂ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.