ಬೆಂಗಳೂರು: ‘ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಜತೆಗೆ ಯುವಜನರ ಕೌಶಲಾಭಿವೃದ್ಧಿಗೆ ವ್ಯವಸ್ಥಿತ ಯೋಜನೆ ರೂಪಿಸಲಾಗುತ್ತಿದೆ. ರಾಜ್ಯವನ್ನು ‘ಕೌಶಲಾಭಿವೃದ್ಧಿ ಹಬ್’ ಮಾಡುವುದೇ ಸರ್ಕಾರದ ಗುರಿ’ ಎಂದು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಕೈಗಾರಿಕಾ-ಶೈಕ್ಷಣಿಕ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.
‘ಕೌಶಲಾಭಿವೃದ್ಧಿಗೆ ಸಂಬಂಧಿಸಿ ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ಕೌಶಲ ಶಿಕ್ಷಣದ ಅವಶ್ಯಕತೆ ಹೆಚ್ಚಾಗುತ್ತಿದೆ. ಎಂಜಿನಿಯರಿಂಗ್ ಕಾಲೇಜುಗಳ ಪಠ್ಯಕ್ರಮ ಪರಿಷ್ಕರಿಸಿ, ಕೌಶಲಾಭಿವೃದ್ಧಿಗೆ ಪೂರಕವಾದ ಪಠ್ಯಕ್ರಮ ರೂಪಿಸಲು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿಗೆ (ಎಐಸಿಟಿಇ) ಪತ್ರ ಬರೆಯಲಾಗಿದೆ. ಹೊಸ ಪಠ್ಯಕ್ರಮದಲ್ಲಿ ಶೇ 60ರಷ್ಟು ಪ್ರಾಯೋಗಿಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆಗ ಮಾತ್ರ ನಿರುದ್ಯೋಗ ಪ್ರಮಾಣ ಕಡಿಮೆ ಮಾಡಲು ಸಾಧ್ಯ’ ಎಂದು ಹೇಳಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು, ‘ನಿರುದ್ಯೋಗ ಸಮಸ್ಯೆ ನಿವಾರಣೆಗೆ ಶಿಕ್ಷಣ ಸಂಸ್ಥೆಗಳು ಕೈಗಾರಿಕೆಗಳ ಜತೆಗೆ ಒಪ್ಪಂದ ಮಾಡಿಕೊಂಡು, ಅವರ ನಿರೀಕ್ಷೆ, ಅಗತ್ಯಾನುಸಾರ ಕೋರ್ಸ್‌ಗಳ ಸ್ವರೂಪ ಬದಲಿಸಬೇಕು ಎಂದು ಸಲಹೆ ಮಾಡಿದರು.
ಈ ನಿಟ್ದಿನಲ್ಲಿ ಇಲಾಖೆಯು ಕಳೆದ ಒಂದೂವರೆ ವರ್ಷದಲ್ಲಿ 20 ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ’ ಎಂದು ಹೇಳಿದರು.
ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ‘ದೇಶದಲ್ಲಿ ಪ್ರತಿ ವರ್ಷ 15 ಲಕ್ಷ ಎಂಜಿನಿಯರಿಂಗ್ ಪದವೀಧರರು ಹೊರ ಬಂದರೆ, ಇವರಲ್ಲಿ ಉದ್ಯೋಗ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳ ಪ್ರಮಾಣ ಶೇ 26ರಷ್ಟಿದೆ. ಕೈಗಾರಿಕೆಗಳಲ್ಲಿ ಶೇ 44 ರಷ್ಟು ಕೌಶಲ ಭರಿತ ಉದ್ಯೋಗಿಗಳ ಕೊರತೆ ಇದೆ‘ ಎಂದು ಹೇಳಿದರು.
‘ಈ ಸ್ದಿತಿಗೆ ಕೌಶಲ ಮತ್ತು ಶಿಕ್ಷಣದ ನಡುವಿನ ಕಂದಕವೇ ಕಾರಣ. ಸರ್ಕಾರವು ‘ನಿಪುಣ ಕರ್ನಾಟಕ’ ಎಂಬ ಹೊಸ ಯೋಜನೆ ಮೂಲಕ ಕಂಪನಿಗಳ ನಿರೀಕ್ಷೆಗೆ ತಕ್ಕಂತೆ ಶಿಕ್ಷಣ ನೀಡುತ್ತಿದೆ’ ಎಂದರು.
ಪ್ರಮುಖ ಕಂಪನಿಗಳ ಉದ್ಯಮಿಗಳು ಭಾಗವಹಿಸಿದ್ದರು. ತರಬೇತಿ ಸಂಬಂಧ ಹಲವು ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ್ ಉಪಸ್ಥಿತರಿದ್ದರು.
ಕೌಶಲಾಭಿವೃದ್ಧಿಗೆ ಪೂರಕ ಪಠ್ಯಕ್ರಮ ರೂಪಿಸಲು ಎಐಸಿಟಿಇಗೆ ಪತ್ರ ಪಠ್ಯಕ್ರಮದಲ್ಲಿ ಶೇ 60ರಷ್ಟು ಪ್ರಾಯೋಗಿಕ ಶಿಕ್ಷಣಕ್ಕೆ ಪ್ರಾತಿನಿಧ್ಯ ಅಗತ್ಯ ಕೌಶಲಾಭಿವೃದ್ಧಿ ಸಂಬಂಧ ವಿವಿಧ 20 ಕಂಪನಿಗಳ ಜೊತೆಗೆ ಒಪ್ಪಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.