ADVERTISEMENT

ಬೆಂಗಳೂರು: ಸುಸಜ್ಜಿತ ಘೋಷಾ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ

* ತಾಯಿ– ಮಕ್ಕಳ ಚಿಕಿತ್ಸೆಗೆ ಮೀಸಲಾದ ಆಸ್ಪತ್ರೆ * ತಿಂಗಳಿಗೆ 350ರಿಂದ 400 ಹೆರಿಗೆ

ಖಲೀಲಅಹ್ಮದ ಶೇಖ
Published 11 ಡಿಸೆಂಬರ್ 2024, 20:12 IST
Last Updated 11 ಡಿಸೆಂಬರ್ 2024, 20:12 IST
ಶಿವಾಜಿನಗರದಲ್ಲಿರುವ ಎಚ್.ಎಸ್.ಐ.ಎಸ್. ಘೋಷಾ ಸರ್ಕಾರಿ ಆಸ್ಪತ್ರೆ
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.  
ಶಿವಾಜಿನಗರದಲ್ಲಿರುವ ಎಚ್.ಎಸ್.ಐ.ಎಸ್. ಘೋಷಾ ಸರ್ಕಾರಿ ಆಸ್ಪತ್ರೆ ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.     

ಬೆಂಗಳೂರು: ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಚ್.ಎಸ್.ಐ.ಎಸ್. ಘೋಷಾ ಆಸ್ಪತ್ರೆಯಲ್ಲಿ ದಿನವೊಂದಕ್ಕೆ ಸರಾಸರಿ 20ರಿಂದ 30 ಹೆರಿಗೆಗಳನ್ನು ವೈದ್ಯರು ಯಶಸ್ವಿಯಾಗಿ ಮಾಡಿಸುತ್ತಾರೆ. ಇಲ್ಲಿಗೆ ಬರುವ ತಾಯಂದಿರು ಹಾಗೂ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ, ಎಲ್ಲವೂ ಸುಸಜ್ಜಿತವಾಗಿರುವ ಈ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಅಟಲ್‌ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಎಚ್.ಎಸ್.ಐ.ಎಸ್. ಘೋಷಾ ಆಸ್ಪತ್ರೆಯು 120 ಹಾಸಿಗೆಗಳನ್ನು ಹೊಂದಿದ್ದು, ಇದು ತಾಯಿ–ಮಕ್ಕಳ ಆಸ್ಪತ್ರೆಯಾಗಿದೆ. ಹೆರಿಗೆ ಕೊಠಡಿ, ಚಿಕಿತ್ಸಾ ವಿಭಾಗವನ್ನು ಒಳಗೊಂಡಿದ್ದು, ಇಲ್ಲಿ ಪ್ರಸೂತಿ, ಸ್ತ್ರೀರೋಗ, ಮಕ್ಕಳ ಹಾಗೂ ಶಸ್ತ್ರಚಿಕಿತ್ಸಾ ವಿಭಾಗಗಳಿವೆ. ನವಜಾತ ಶಿಶು ಆರೈಕೆ ಘಟಕ (ಎನ್‌ಐಸಿಯು) ಕೂಡ ಕಾರ್ಯನಿರ್ವಹಿಸುತ್ತಿದೆ.

ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ಪ್ರತಿನಿತ್ಯ ಸರಾಸರಿ 150ರಿಂದ 200 ಮಂದಿ ಭೇಟಿ ನೀಡುತ್ತಿದ್ದಾರೆ. ಇಲ್ಲಿ ತಾಯಿ ಮತ್ತು ಮಗುವಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಶಿವಾಜಿನಗರ, ಹಲಸೂರು, ಟಸ್ಕರ್‌ಟೌನ್‌, ಫ್ರೇಜರ್‌ಟೌನ್‌, ಆರ್.ಟಿ. ನಗರ, ಕಂಟೋನ್ಮೆಂಟ್‌ ಸೇರಿದಂತೆ ನಗರದ ವಿವಿಧ ಭಾಗಗಳಿಂದ ಇಲ್ಲಿಗೆ ಹೆಚ್ಚಿನ ಜನ ಬರುತ್ತಾರೆ. ಬರುತೇಕ ದಿನಗಳಲ್ಲಿ ಇಲ್ಲಿ ರೋಗಿಗಳ ದಟ್ಟಣೆ ಹೆಚ್ಚಿರುತ್ತದೆ.

ADVERTISEMENT

‘ಆಸ್ಪತ್ರೆಯಲ್ಲಿ ಶೇಕಡ 20ರಷ್ಟು ವೈದ್ಯರು, ಶೇ 30ರಷ್ಟು ಶುಶ್ರೂಷಕರು ಹಾಗೂ ‘ಡಿ’ ಗುಂಪಿನ ನೌಕರರ ಕೊರತೆ ಇದೆ. ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಸಿಬ್ಬಂದಿ ಕೊರತೆಯ ಮಧ್ಯೆಯೂ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಚಿಕಿತ್ಸೆ ನೀಡಲಾಗುತ್ತದೆ. ಆಸ್ಪತ್ರೆಯ ಹೊರಾಂಗಣ ಮತ್ತು ಒಳಾಂಗಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಇಲ್ಲಿ ದಾಖಲಾಗುವ ರೋಗಿಗಳನ್ನು ಭೇಟಿಯಾಗಲು ಬರುವ ಸಂಬಂಧಿಕರಿಗೆ ವಿಶೇಷ ಕೊಠಡಿ ನಿರ್ಮಿಸಲಾಗಿದೆ. ಬಿಪಿಎಲ್‌ ಪಡಿತರ ಚೀಟಿ ಹೊಂದಿರುವವರೆಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳು ಮಾಡಲಾಗುತ್ತದೆ’ ಎಂದು ವೈದ್ಯರೊಬ್ಬರು ತಿಳಿಸಿದರು.

‘ನಗರದ ಚಿಕ್ಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರಲ್ಲಿ ಸಂಕೀರ್ಣ ಸಮಸ್ಯೆಗಳನ್ನು ಹೊಂದಿರುವ ತಾಯಂದಿರನ್ನು ಘೋಷಾ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ. ಇಲ್ಲಿ ದಿನದ 24 ಗಂಟೆಯೂ ತುರ್ತು ಚಿಕಿತ್ಸಾ ಘಟಕ ಕಾರ್ಯನಿರ್ವಹಿಸುತ್ತದೆ. ತಿಂಗಳಿಗೆ 350ರಿಂದ 400ರವರೆಗೆ ಹೆರಿಗೆಗಳು ನಡೆಯುತ್ತವೆ. ಬಹುತೇಕ ಎಲ್ಲ ಹೆರಿಗೆಗಳು ಸಹಜ ಹೆರಿಗೆಗಳೇ ಆಗಿವೆ. ಗಂಭೀರ ಪ್ರಕರಣಗಳಲ್ಲಿ ಮಾತ್ರ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ’ ಎಂದು ವಿವರಿಸಿದರು. 

ಎಚ್.ಎಸ್.ಐ.ಎಸ್. ಘೋಷಾ ಆಸ್ಪತ್ರೆಯಲ್ಲಿ ತಾಯಿಯೊಬ್ಬರು ಸಂಜೀವಿನಿ ಕೇಂದ್ರಕ್ಕೆ ತೆರಳಿದರು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.  
ಶಿವಾಜಿನಗರದಲ್ಲಿರುವ ಎಚ್.ಎಸ್.ಐ.ಎಸ್. ಘೋಷಾ  ಸರ್ಕಾರಿ ಆಸ್ಪತ್ರೆಯ ಒಳಾಂಗಣ ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.  

ಘೋಷಾ ಆಸ್ಪತ್ರೆಗೆ ದಾಖಲಾಗುವ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಶಿಫಾರಸು ಮಾಡುವುದಿಲ್ಲ. ಇಲ್ಲಿರುವ ವೈದ್ಯಕೀಯ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಚಿಕಿತ್ಸೆ ನೀಡಲಾಗುತ್ತದೆ.

–ದಯಾನಂದ್ ವಿ.ಪಿ. ಘೋಷಾ ಆಸ್ಪತ್ರೆಯ ಅಧೀಕ್ಷಕ

**

‘ಸಂಜೀವಿನಿ ಎದೆ ಹಾಲು ಬ್ಯಾಂಕ್‌’

‘ಅಗತ್ಯ ಪ್ರಮಾಣದಲ್ಲಿ ಎದೆ ಹಾಲು ಸಿಗದ ಹಾಗೂ ಎದೆ ಹಾಲು ವಂಚಿತ ಮಕ್ಕಳಿಗಾಗಿ ಘೋಷಾ ಆಸ್ಪತ್ರೆಯಲ್ಲಿ ‘ಸಂಜೀವಿನಿ’ ಎದೆ ಹಾಲು ಬ್ಯಾಂಕ್‌ ಕಾರ್ಯನಿರ್ವಹಿಸುತ್ತಿದೆ. ಆಸ್ಪತ್ರೆಯಲ್ಲಿ ಹೆರಿಗೆ ಆದವರು ಹಾಗೂ ಸ್ವ ಇಚ್ಛೆಯಿಂದ ಹೊರಗಿನಿಂದ ಬರುವ ತಾಯಂದಿರಿಂದ ಹೆಚ್ಚುವರಿ ಎದೆ ಹಾಲನ್ನು ಬ್ಯಾಂಕ್‌ನಲ್ಲಿ ಸಂಗ್ರಹಿಸಲಾಗುತ್ತದೆ. ವೈದ್ಯರ ಶಿಫಾರಸು ಹೊಂದಿರುವ ಶಿಶುಗಳಿಗೆ ಮಾತ್ರ ಈ ಎದೆ ಹಾಲನ್ನು ಅಗತ್ಯ ಪ್ರಮಾಣದಲ್ಲಿ ಒದಗಿಸಲಾಗುತ್ತದೆ’ ಎಂದು ವೈದ್ಯರೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.