ADVERTISEMENT

ಕೇಂದ್ರದ ವಿರುದ್ಧ ಎರಡು ನಿರ್ಣಯ ಅಂಗೀಕಾರ: ಬಿಜೆಪಿ–ಜೆಡಿಎಸ್‌ ತೀವ್ರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 0:09 IST
Last Updated 23 ಫೆಬ್ರುವರಿ 2024, 0:09 IST
<div class="paragraphs"><p>ವಿಧಾನಸಭೆ</p></div>

ವಿಧಾನಸಭೆ

   

ಬೆಂಗಳೂರು: ಆರ್ಥಿಕ ಸಂಪನ್ಮೂಲಗಳ ಹಂಚಿಕೆ ವಿಷಯದಲ್ಲಿ ಕೆಲವು ದಿನಗಳಿಂದ ಕೇಂದ್ರ ಸರ್ಕಾರದ ವಿರುದ್ಧ ಸಮರಕ್ಕೆ ಇಳಿದಿದ್ದ ರಾಜ್ಯ ಸರ್ಕಾರ, ತೆರಿಗೆ ಪಾಲಿನ ಸಮಾನ ಹಂಚಿಕೆ ಮತ್ತು ರೈತರ ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಕಾನೂನು ಜಾರಿಗೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ವಿಧಾನಸಭೆಯಲ್ಲಿ ಗುರುವಾರ ನಿರ್ಣಯಗಳನ್ನು ಅಂಗೀಕರಿಸಿತು.

ಬಜೆಟ್‌ ಮೇಲಿನ ಚರ್ಚೆ ಗುರುವಾರ ಸಂಜೆ ಮುಕ್ತಾಯವಾದ ಬಳಿಕ ಕಾಂಗ್ರೆಸ್‌ನ ಪ್ರಕಾಶ್ ಕೆ. ಕೋಳಿವಾಡ್‌ ಅವರು ಮೋಡ ಬಿತ್ತನೆಗೆ ಸಂಬಂಧಿಸಿದ ಖಾಸಗಿ ಮಸೂದೆ ಮಂಡಿಸಿದರು. ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ಅವರು ಹೆಚ್ಚುವರಿ ಕಾರ್ಯಸೂಚಿಯ ಮೂಲಕ ನಿರ್ಣಯಗಳನ್ನು ಮಂಡಿಸಲು ದಿಢೀರನೆ ಅನುಮತಿ ಕೋರಿದರು.

ADVERTISEMENT

ಸಭಾಧ್ಯಕ್ಷ ಯು.ಟಿ. ಖಾದರ್‌ ಅನುಮತಿ ನೀಡಿದರು. ಸಚಿವರು ನಿರ್ಣಯ ಓದಲಾರಂಭಿಸಿದರು. ಮೋಡ ಬಿತ್ತನೆಗೆ ಸಂಬಂಧಿಸಿದ ಖಾಸಗಿ ಮಸೂದೆ ಓದುವುದರಲ್ಲೇ ಮಗ್ನರಾಗಿದ್ದ ಬಿಜೆಪಿ ಸದಸ್ಯರಿಗೆ ಕೆಲಕಾಲ ಈ ವಿಷಯ ತಿಳಿಯಲಿಲ್ಲ. ಕೆಲವು ನಿಮಿಷಗಳ ಬಳಿಕ ವಿಷಯ ತಿಳಿಯುತ್ತಿದ್ದಂತೆ ಎದ್ದು ನಿಂತ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ, ವಿ. ಸುನಿಲ್‌ ಕುಮಾರ್‌, ಎಸ್‌. ಸುರೇಶ್‌ ಕುಮಾರ್‌ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದರು.

ಸದನದ ಕಾರ್ಯಸೂಚಿಯಲ್ಲಿ ಉಲ್ಲೇಖಿಸದೆ, ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಮಾಹಿತಿ ನೀಡದೇ ದಿಢೀರನೆ ನಿರ್ಣಯ ಮಂಡಿಸಲಾಗಿದೆ ಎಂದು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ನಿರ್ಣಯ ಮಂಡನೆಗೆ ಅವಕಾಶ ನೀಡಿದ ಸಭಾಧ್ಯಕ್ಷರ ನಿಲುವಿಗೂ ಆಕ್ಷೇಪಿಸಿದರು. ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದ ಬಿಜೆಪಿ ಸದಸ್ಯರನ್ನು ಜೆಡಿಎಸ್‌ ಸದಸ್ಯರೂ ಬೆಂಬಲಿಸಿದರು.

ಬಿಜೆಪಿ, ಜೆಡಿಎಸ್‌ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ‘ಮೋದಿ, ಮೋದಿ’ ಎಂಬ ಘೋಷಣೆಯನ್ನೂ ಮೊಳಗಿಸಿದರು. ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್‌ ಖರ್ಗೆ ವಿರೋಧ ಪಕ್ಷಗಳ ಸದಸ್ಯರ ವಿರುದ್ಧ ಹರಿಹಾಯ್ದರು. ಭಾರಿ ಗದ್ದಲದಿಂದ ಸದನದಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಯಾಯಿತು.

ವಿರೋಧ ಲೆಕ್ಕಿಸದೆ ನಿರ್ಣಯಗಳನ್ನು ಮಂಡಿಸಿದ ಪಾಟೀಲ, ಅಂಗೀಕಾರ ಕೋರಿದರು. ಧ್ವನಿಮತದ ಮೂಲಕ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಬಳಿಕ ಕಲಾಪವನ್ನು ಹತ್ತು ನಿಮಿಷ ಮುಂದೂಡಿದ ಸಭಾಧ್ಯಕ್ಷರು, ತಮ್ಮ ಕೊಠಡಿಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ಸಂಧಾನಕ್ಕೆ ಯತ್ನಿಸಿದರು.

ರಾಜ್ಯ ಸರ್ಕಾರದ ನಡೆಯಿಂದ ತೀವ್ರ ಕೆರಳಿದ್ದ ಬಿಜೆಪಿ ಸದಸ್ಯರು, ಸಭಾಧ್ಯಕ್ಷರ ಕೊಠಡಿಯೊಳಗೆ ನಡೆದ ಸಂಧಾನ ಸಭೆಯಲ್ಲೂ ಏರು ದನಿಯಲ್ಲಿ ರೇಗಾಡಿದರು. ಸಂಧಾನ ವಿಫಲವಾಯಿತು. ಪುನಃ ಕಲಾಪ ಆರಂಭವಾದಾಗ ಬಿಜೆಪಿ ಸದಸ್ಯರು ಸದನದೊಳಗೆ ಬರಲಿಲ್ಲ.

‘ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇರುವ ಕಾರಣದಿಂದ ಆ ಪಕ್ಷದ ಸದಸ್ಯರು ಕಲಾಪದಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಕಲಾಪವನ್ನು ಮುಂದೂಡಬೇಕು’ ಎಂದು ಕೃಷ್ಣ ಬೈರೇಗೌಡ ಮನವಿ ಮಾಡಿದರು. ಅದನ್ನು ಸ್ಪೀಕರ್ ಮಾನ್ಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.