ADVERTISEMENT

ವ್ಯಗ್ರ ನಾಯಿಗಳಿಗೆ ವೀಕ್ಷಣಾ ಕೇಂದ್ರ ಸ್ಥಾಪಿಸಿ: ಅಧಿಕಾರಿಗಳಿಗೆ ಪಾಟೀಲ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 0:30 IST
Last Updated 2 ಸೆಪ್ಟೆಂಬರ್ 2025, 0:30 IST
<div class="paragraphs"><p>ಬೀದಿ ನಾಯಿಗಳು</p></div>

ಬೀದಿ ನಾಯಿಗಳು

   

ಬೆಂಗಳೂರು: ಬೀದಿ ನಾಯಿಗಳನ್ನು ಹಿಡಿಯಲು ಬೋನು ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕು ಮತ್ತು ವ್ಯಗ್ರ ನಾಯಿಗಳ ಮೇಲೆ ನಿಗಾ ವಹಿಸಲು ವೀಕ್ಷಣಾ ಕೇಂದ್ರಗಳನ್ನು ಸ್ಥಾಪಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು.

ಬಿಬಿಎಂಪಿಯ ಪಶು ಸಂಗೋಪನಾ ಸಹಾಯಕ ನಿರ್ದೇಶಕ, ಘನ ತ್ಯಾಜ್ಯ ನಿಯಂತ್ರಣಾ ಮಂಡಳಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬೀದಿ ನಾಯಿಗಳನ್ನು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಬಗ್ಗೆ ಗಮನ ಹರಿಸಬೇಕು ಎಂದು ಪಾಲಿಕೆ ಅಧಿಕಾರಿಗಳು ತಾಕೀತು ಮಾಡಿದರು.

ಇದಕ್ಕೂ ಮುನ್ನ ಸಭೆಗೆ ಮಾಹಿತಿ ನೀಡಿದ ಪಶು ಸಂಗೋಪನೆ ಸಹಾಯಕ ನಿರ್ದೇಶಕ, ರಾಜರಾಜೇಶ್ವರಿ ನಗರ ವಲಯದಲ್ಲಿ ಒಟ್ಟು 38,053 ಬೀದಿ ನಾಯಿಗಳಿದ್ದು, ಇವುಗಳ ಪೈಕಿ ಕಳೆದ ವರ್ಷ 11,493 ಹಾಗೂ ಈ ವರ್ಷ 2,224 ಬೀದಿ ನಾಯಿಗಳನ್ನು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. ಶೇಕಡ 60 ರಷ್ಟು ಬೀದಿ ನಾಯಿಗಳನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದ್ದು, ಉಳಿದ ನಾಯಿಗಳನ್ನೂ ಆದ್ಯತೆ ಮೇಲೆ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.

ಪರಿಸರ ಮಾಲಿನ್ಯ ಅಧಿಕಾರಿ ಮಾತನಾಡಿ, ‘ಏಕ ಬಳಕೆಯ ಪ್ಲಾಸ್ಟಿಕ್ ತಡೆಗಟ್ಟುವ ನಿಟ್ಟಿನಲ್ಲಿ 2022–23ನೇ ಸಾಲಿನಿಂದ 2025–26ನೇ ಸಾಲಿನಲ್ಲಿ ಒಟ್ಟು 111 ಘಟಕಗಳ ಮೇಲೆ ದಾಳಿ ಮಾಡಿದ್ದು, ಈ ಪೈಕಿ ನಿಯಮ ಉಲ್ಲಂಘಿಸಿದ ಐದು ಘಟಕಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡ ಹಾಕಲಾಗಿದೆ. ಒಂದು ಘಟಕವನ್ನು ಶಾಶ್ವತವಾಗಿ ಮುಚ್ಚಲು ಆದೇಶಿಸಲಾಗಿದೆ‘ ಎಂದು ವಿವರಿಸಿದರು.

ಮೂರು ವರ್ಷಗಳಲ್ಲಿ ಕೇವಲ 111 ಘಟಕಗಳ ಮೇಲೆ ದಾಳಿ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ, ಏಕ ಬಳಕೆ ಪ್ಲಾಸ್ಟಿಕ್‌ಗಳಿಂದ ಪರಿಸರಕ್ಕೆ ಹಾನಿ ಉಂಟಾಗುವುದನ್ನು ಶಾಶ್ವತವಾಗಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಹೆಚ್ಚು ಘಟಕಗಳ ಮೇಲೆ ದಾಳಿ ನಡಸಿ, ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.