ADVERTISEMENT

ಬೆಂಗಳೂರು| ವಿದ್ಯಾರ್ಥಿ ಬ್ಯಾಂಕ್ ಖಾತೆ ದುರ್ಬಳಕೆ: ₹7 ಕೋಟಿ ಹಣ ಅಕ್ರಮ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 0:10 IST
Last Updated 23 ಫೆಬ್ರುವರಿ 2026, 0:10 IST
<div class="paragraphs"><p>&nbsp;ವಂಚನೆ–ಪ್ರಾತಿನಿಧಿಕ ಚಿತ್ರ</p></div>

 ವಂಚನೆ–ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ನಗರದ 19 ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬನ ಬ್ಯಾಂಕ್ ಖಾತೆಯನ್ನು ₹7 ಕೋಟಿ ಹಣ ಅಕ್ರಮ ವರ್ಗಾವಣೆಗೆ ಸೈಬರ್ ವಂಚಕರು ಬಳಸಿಕೊಂಡಿರುವುದು ಪತ್ತೆಯಾಗಿದೆ.

ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿರುವ ಬಾಗಲಗುಂಟೆ ನಿವಾಸಿಯಾಗಿರುವ ವಿದ್ಯಾರ್ಥಿ ವಂಚನೆಗೆ ಒಳಗಾಗಿದ್ದಾರೆ.  ಈ ಸಂಬಂಧ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಫೆಬ್ರುವರಿ 20ರಂದು ಎಫ್‌ಐಆರ್ ದಾಖಲಿಸಿಕೊಂಡು, 23 ವರ್ಷದ ವ್ಯಕ್ತಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ADVERTISEMENT

‘ನನ್ನ ಖಾತೆಯಲ್ಲಿ ಅಧಿಕ ಹಣದ ವಹಿವಾಟು ನಡೆದಿರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಂದು ವರ್ಷದಿಂದ ಇ.ಆಯುಷ್ ಎಂಬಾತನ ಪರಿಚಯವಾಗಿದ್ದು, ಕಳೆದ ನವೆಂಬರ್‌ನಲ್ಲಿ ಆತನಿಗೆ ನನ್ನ ಬ್ಯಾಂಕ್‌ ಖಾತೆಗಳ ವಿವರ ನೀಡಿದ್ದೆ’ ಎಂದು ವಿದ್ಯಾರ್ಥಿ ಪೊಲೀಸರಿಗೆ ತಿಳಿಸಿದ್ದಾನೆ.

‘ಕಡಿಮೆ ಮೊತ್ತ ಇರುವ ಕಾರಣ ತನ್ನ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದ ಆಯುಷ್‌, ಕೆಲವು ದಿನಗಳ ಮಟ್ಟಿಗೆ ಬಳಸಲು ವಿದ್ಯಾರ್ಥಿಯ ಖಾತೆಯ ವಿವರವನ್ನು ಕೇಳಿದ್ದಾನೆ. ಇಬ್ಬರೂ ಸ್ನೇಹಿತರಾಗಿದ್ದರಿಂದ ವಿದ್ಯಾರ್ಥಿ, ತನ್ನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪಾಸ್‌ಬುಕ್, ಎಟಿಎಂ ಕಾರ್ಡ್, ನೆಟ್ ಬ್ಯಾಂಕಿಂಗ್ ವಿವರಗಳು ಮತ್ತು ಖಾತೆಗೆ ಲಿಂಕ್ ಆಗಿದ್ದ ಏರ್‌ಟೆಲ್ ಸಿಮ್ ಕಾರ್ಡ್‌ ಅನ್ನು ಆಯುಷ್‌ಗೆ ನೀಡಿದ್ದಾನೆ. ವಿದ್ಯಾರ್ಥಿಗೆ ತನ್ನ ಖಾತೆ ದುರುಪಯೋಗ ಆಗಿರುವ ಬಗ್ಗೆ ಅರಿವು ಇರಲ್ಲಿಲ್ಲವೆಂದು ತೋರುತ್ತಿದೆ. ತನಿಖೆ ಪ್ರಗತಿಯಲ್ಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ನಂತರ ಬ್ಯಾಂಕ್ ಪ್ರತಿನಿಧಿಗಳು ವಿದ್ಯಾರ್ಥಿಯ ನಿವಾಸಕ್ಕೆ ಭೇಟಿ ನೀಡಿ, ಸೈಬರ್ ವಂಚಕರು ₹7 ಕೋಟಿ ಹಣ ವಹಿವಾಟು ನಡೆಸಿರುವುದರಿಂದ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ. 

‘ದೊಡ್ಡ ಮೊತ್ತದ ವಹಿವಾಟು ಕೇವಲ ಎರಡು ದಿನಗಳಲ್ಲಿ ನಡೆದಿದ್ದರಿಂದ, ಬ್ಯಾಂಕ್ ಅಧಿಕಾರಿಗಳು ಪರಿಶೀಲನೆ ನಡೆಸಿದರು. ವಿದ್ಯಾರ್ಥಿ ಹೆಸರಿನಲ್ಲಿ ಖಾತೆ ಇದ್ದುದರಿಂದ ಭೌತಿಕ ಪರಿಶೀಲನೆ ಪ್ರಾರಂಭವಾಯಿತು. ಅಲ್ಲದೆ, ಶಂಕಾಸ್ಪದ ವಹಿವಾಟುಗಳ ಬಗ್ಗೆ ಕೇಂದ್ರ ಸರ್ಕಾರದಿಂದ ಬ್ಯಾಂಕ್‌ಗಳಿಗೆ ಎಚ್ಚರಿಕೆ ಸಂದೇಶಗಳು ಬರುತ್ತವೆ. ಇದರಿಂದ ಹಣದ ಅಕ್ರಮ ವರ್ಗಾವಣೆಯನ್ನು ತಡೆಯಬಹುದು. ಬಳಿಕ ಬ್ಯಾಂಕ್‌ಗೆ ಲಿಂಕ್ ಆಗಿದ್ದ ಫೋನ್ ನಂಬರ್‌ ಬದಲಿಸಿರುವ ಕಾರಣ ಸಂತ್ರಸ್ತ ಯುವಕನಿಗೆ ವಹಿವಾಟಿನ ಬಗ್ಗೆ ಸಂದೇಶಗಳು ಬಂದಿಲ್ಲ’ ಎಂದು ಅಧಿಕಾರಿ ತಿಳಿಸಿದರು.

‘ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲು ಮ್ಯೂಲ್‌ ಅಕೌಂಟ್‌ (ನಕಲಿ ಖಾತೆಗಳು) ಬಳಸುತ್ತಿರುವ ಅನುಮಾನದ ಮೇಲೆ ಶನಿವಾರ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆಯುಷ್ ವಿದ್ಯಾರ್ಥಿಯ ಬ್ಯಾಂಕ್ ಖಾತೆಯನ್ನು ಟೆಲಿಗ್ರಾಂ ಮೂಲಕ ವಿದೇಶದಲ್ಲಿರುವ ಸೈಬರ್ ಅಪರಾಧಿಗಳಿಗೆ ನೀಡಿರುವ ಅನುಮಾನವಿದೆ. ಬ್ಯಾಂಕ್‌ನಲ್ಲಿ ನಕಲಿ ಖಾತೆಗಳನ್ನು ತೆರೆದು ಜನರಿಗೆ ವಂಚಿಸುತ್ತಿದ್ದ ಸೈಬರ್‌ ಜಾಲದ ವಿರುದ್ಧ ರಾಜ್ಯ ಸೈಬರ್ ಕಮಾಂಡ್‌ ಘಟಕದ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ಮುಂದುವರಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.