ADVERTISEMENT

ಬೆಂಗಳೂರು: ಬೇಸಿಗೆ ಆರಂಭ, ನೀರಿನ ಸಮಸ್ಯೆಯೂ ಶುರು

ನಗರದ ಪೂರ್ವ ಭಾಗದಲ್ಲಿ ಟ್ಯಾಂಕರ್‌ಗಳ ಓಡಾಟ ಆರಂಭ

ಗಾಣಧಾಳು ಶ್ರೀಕಂಠ
Published 12 ಮಾರ್ಚ್ 2025, 0:30 IST
Last Updated 12 ಮಾರ್ಚ್ 2025, 0:30 IST
<div class="paragraphs"><p>ಕೆ.ಆರ್.ಪುರ ಭಾಗದ ಕನಕನಗರದಲ್ಲಿ ಟ್ಯಾಂಕರ್‌ ನೀರು ಪೂರೈಕೆಯಾಗುತ್ತಿದೆ</p></div>

ಕೆ.ಆರ್.ಪುರ ಭಾಗದ ಕನಕನಗರದಲ್ಲಿ ಟ್ಯಾಂಕರ್‌ ನೀರು ಪೂರೈಕೆಯಾಗುತ್ತಿದೆ

   

ಬೆಂಗಳೂರು: ನಗರದಲ್ಲಿ ಉಷ್ಣಾಂಶ 30 ಡಿಗ್ರಿ ಸೆಲ್ಷಿಯಸ್‌ಗೆ ತಲುಪುತ್ತಿರುವಂತೆಯೇ ವಿವಿಧ ಭಾಗಗಳಲ್ಲಿ ಅಂತರ್ಜಲ ಮಟ್ಟ ಇಳಿಯುತ್ತಿದ್ದು, ಅಲ್ಲಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳಲು ಆರಂಭವಾಗಿದೆ. ಬೆಂಗಳೂರು ಪೂರ್ವಭಾಗದ ಕೆಲವು ಬಡಾವಣೆಗಳಲ್ಲಿ ನೀರಿನ ಟ್ಯಾಂಕರ್‌ಗಳ ಓಡಾಟ ಶುರುವಾಗಿದೆ.

ತಿಂಗಳ ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‌ಸಿ) ವಿಜ್ಞಾನಿಗಳು ನಗರದ 80 ವಾರ್ಡ್‌ಗಳಲ್ಲಿ ಫೆಬ್ರುವರಿ–ಏಪ್ರಿಲ್ ನಡುವೆ ಅಂತರ್ಜಲ ಕುಸಿಯುವ ಸಾಧ್ಯತೆ ಇದೆ ಎಂಬ ವರದಿ ನೀಡಿ, ಎಚ್ಚರಿಸಿದ್ದರು. ಅದರಂತೆ, ವಿಜ್ಞಾನಿಗಳು ಉಲ್ಲೇಖಿಸಿದ್ದ ಕೆಲವು ಬಡಾವಣೆಗಳಲ್ಲಿ ಅಂತರ್ಜಲ ಕುಸಿತದ ‘ಪರಿಣಾಮ’ ಗೋಚರಿಸುತ್ತಿದ್ದು, ನೀರಿನ ಕೊರತೆಯ ಸಮಸ್ಯೆಯೂ ಆರಂಭವಾಗಿದೆ.

ADVERTISEMENT

ಟ್ಯಾಂಕರ್ ಓಡಾಟ ಶುರು: ಬೆಂಗಳೂರು ಪೂರ್ವ ವ್ಯಾಪ್ತಿಯ ಕೆ.ಆರ್‌.ಪುರ ವ್ಯಾಪ್ತಿಯ ಕನಕನಗರ, ಚನ್ನಸಂದ್ರ, ಕಲ್ಕೆರೆ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಇಲ್ಲೆಲ್ಲ ಟ್ಯಾಂಕರ್‌ಗಳ ಓಡಾಟ ಶುರುವಾಗಿದೆ. ರಾಮಮೂರ್ತಿ ನಗರ, ಮುನ್ನೇಕೊಳಾಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಸದಾಗಿ ಕಾವೇರಿ ನೀರಿನ ಸಂಪರ್ಕ ಪಡೆದಿರುವವರಿಗೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳಿವೆ. ಜಲಮಂಡಳಿಗೆ ಕರೆ ಮಾಡಿದರೂ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ. ಟ್ಯಾಂಕರ್‌ಗಳಿಗೆ ಇವತ್ತು ಕರೆ ಮಾಡಿದರೆ, ನಾಳೆ ಬರುತ್ತದೆ ಎಂದು ನಾಗರಿಕರು ದೂರುತ್ತಾರೆ.

ಕಳೆದ ವರ್ಷ, ಜಲಮಂಡಳಿಯು ವಿವಿಧ ಬಡಾವಣೆಗಳಲ್ಲಿ ಅಲ್ಲಲ್ಲಿ ಸಿಂಟೆಕ್ಸ್ ಟ್ಯಾಂಕ್‌ಗಳನ್ನು ಇಟ್ಟು, ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿತ್ತು. ಈ ವರ್ಷ ಈ ರೀತಿಯ ವ್ಯವಸ್ಥೆಗೆ ಇನ್ನೂ ಚಾಲನೆ ನೀಡಿಲ್ಲ. ದಿನ ಕಳೆದಂತೆ ನೀರಿನ ಸಮಸ್ಯೆ ಇನ್ನೂ ಹೆಚ್ಚು ಬಿಗಡಾಯಿಸುವ ಸಾಧ್ಯತೆ ಇದ್ದು, ಟ್ಯಾಂಕರ್‌ ಮೂಲಕ ನೀರಿನ ಪೂರೈಕೆಗೆ ವ್ಯವಸ್ಥೆ ಮಾಡಬೇಕು ಎಂದು ಕಲ್ಕೆರೆ ನಿವಾಸಿ ಚಂದ್ರಕಲಾ ಒತ್ತಾಯಿಸಿದರು.

ಕೆರೆ ಬರಿದು, ಅಂತರ್ಜಲ ಕುಸಿತ: ಬೇಗೂರು, ಹುಳಿಮಾವು ಕೆರೆಗಳು ಬತ್ತಿ ಹೋಗಿರುವ ಕಾರಣ, ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಇನ್ನೊಂದೆಡೆ, ಸಂಪರ್ಕ ಶುಲ್ಕ ದುಬಾರಿ ಹಾಗೂ ಅಗತ್ಯವಿರುವಷ್ಟು ನೀರು ಪೂರೈಸುವ ಖಾತರಿ ಇಲ್ಲದ ಕಾರಣಕ್ಕಾಗಿ ಹಲವು ವಸತಿ ಸಮುಚ್ಚಯಗಳು ಕಾವೇರಿ ನೀರಿನ ಸಂಪರ್ಕ ಪಡೆದಿಲ್ಲ. ಬಹುತೇಕರು ಖಾಸಗಿ ಟ್ಯಾಂಕರ್‌ ಮತ್ತು ಅಂತರ್ಜಲವನ್ನೇ ಅವಲಂಬಿಸಿದ್ದಾರೆ. ಇದು ಅಂತರ್ಜಲ ಕುಸಿತಕ್ಕೆ, ನೀರಿನ ಕೊರತೆ ಎದುರಾಗಲು ಪರೋಕ್ಷವಾಗಿ ಕಾರಣ ಎನ್ನುವುದು ಸ್ಥಳೀಯರ ಅಭಿಪ್ರಾಯ.

ರಾಜರಾಜೇಶ್ವರಿ ನಗರ ವ್ಯಾಪ್ತಿಯ ಅಂದ್ರಹಳ್ಳಿ, ವಿದ್ಯಮಾನ್ಯ ನಗರ, ವೀರಭದ್ರನಗರ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಬಿಬಿಎಂಪಿಯ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಇಲ್ಲಿ ಕಾವೇರಿ ನೀರಿನ ಸಂಪರ್ಕ ಪಡೆದ ಹಲವು ಮನೆಗಳಿಗೆ ಇನ್ನೂ ನೀರು ಪೂರೈಕೆಯಾಗುತ್ತಿಲ್ಲ. ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಮುನ್ನ ಜಲಮಂಡಳಿ ಈ ಬಗ್ಗೆ ಗಮನ ಹರಿಸಿ ಪರಿಹಾರ ನೀಡಬೇಕೆಂಬುದು ನಾಗರಿಕರ ಆಗ್ರಹ.

‘ಕಾವೇರಿ’ ಸಂಪರ್ಕಕ್ಕೆ ನಿರಾಸಕ್ತಿ

ಕಾವೇರಿ ಐದನೇ ಹಂತದ ಯೋಜನೆಯಡಿ ಹೊಸದಾಗಿ ನೀರಿನ ಸಂಪರ್ಕ ನೀಡಲು ಜಲಮಂಡಳಿ 110 ಹಳ್ಳಿಗಳಲ್ಲಿ ಅಭಿಯಾನ ನಡೆಸುತ್ತಿದೆ. ಜಲಮಂಡಳಿಯ ಮಾಹಿತಿ ಪ್ರಕಾರ ಐದನೇ ಹಂತದಲ್ಲಿ 775 ದಶಲಕ್ಷ ಲೀಟರ್ ನೀರು ಲಭ್ಯವಿದೆ. ಸದ್ಯ ಸುಮಾರು 150 ಎಂಎಲ್‌ಡಿಯಷ್ಟೇ ನೀರು ಬಳಕೆಯಾಗುತ್ತಿದೆ. ಈವರೆಗೆ 17 ಸಾವಿರ ಮಂದಿಯಷ್ಟೇ ಹೊಸದಾಗಿ ಸಂಪರ್ಕ ಪಡೆದಿದ್ದಾರೆ. ಈ ವರ್ಷವೂ ಇಂಥ ಸ್ಥಳಗಳಿಗೆ ಸಿಂಟೆಕ್ಸ್‌ ಟ್ಯಾಂಕ್‌ ಅಳವಡಿಸಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಜಲಮಂಡಳಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕಾವೇರಿ ಕೇಂದ್ರ’ ಮುಂದಿನ ವಾರ

‘ನಗರದಲ್ಲಿನ ನೀರಿನ ಕೊರತೆ ನೀಗಿಸಲು ಜಲಮಂಡಳಿ ಸನ್ನದ್ಧವಾಗಿದೆ. ಸಮಸ್ಯೆ ಉಂಟಾಗಬಹುದಾದ 55 ಕಡೆಗಳಲ್ಲಿ ‘ಕಾವೇರಿ ಸಂಪರ್ಕ ಕೇಂದ್ರ’ಗಳನ್ನು ತೆರೆಯುತ್ತಿದ್ದು ಮುಂದಿನ ವಾರದಿಂದ ಈ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಕೇಂದ್ರದ ಮೂಲಕ ನೀರು ಪಡೆಯಬಹುದು’ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಅಂತರ್ಜಲ ಮಟ್ಟ ಕುಸಿಯಬಹುದಾದ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಈ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಈ ಕೇಂದ್ರಗಳಲ್ಲಿ 1000 ಲೀಟರ್ ಕಾವೇರಿ ನೀರಿಗೆ ₹90 ದರ ನಿಗದಿ ಮಾಡಿದೆ. ಗ್ರಾಹಕರಿಗೆ ಆದ್ಯತೆ ನೀಡಲಾಗುತ್ತಿದೆ. ನಾಗರಿಕರು ಆನ್‌ಲೈನ್‌ನಲ್ಲಿ ಬೇಡಿಕೆ ಸಲ್ಲಿಸಿ ಈ ಕೇಂದ್ರಗಳ ಮೂಲಕ ನೀರು ಪಡೆಯಬಹುದು’ ಎಂದು ಅವರು ವಿವರಿಸಿದರು. ಕಾವೇರಿ ಕೇಂದ್ರದಿಂದ ನೀರು ಖರೀದಿಗೆ ‘ನಗದು ರಹಿತ ಪಾವತಿ’ ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರಗಳಿಗೆ ನೀರು ಪೂರೈಸಲು 287 ಖಾಸಗಿ ಟ್ಯಾಂಕರ್‌ಗಳನ್ನು ಒಪ್ಪಂದದ ಮೇಲೆ ಬಾಡಿಗೆ ಪಡೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಬೇಸಿಗೆ ಆರಂಭವಾಗಿದೆ. ನೀರಿನ ಬವಣೆ ಹೆಚ್ಚುತ್ತಿದೆ. ಶುದ್ಧ ನೀರಿನ ಘಟಕಗಳಲ್ಲಿ 20 ಲೀಟರ್ ಕ್ಯಾನ್‌ಗೆ ₹15 ರಿಂದ ₹20 ಕೊಟ್ಟು ನೀರು ಖರೀದಿಸುತ್ತಿದ್ದೇವೆ. ಜಲಮಂಡಳಿ ಸಮಪರ್ಕವಾಗಿ ನೀರು ಪೂರೈಕೆ ಬಗ್ಗೆ ಗಮನ ಹರಿಸುತ್ತಿಲ್ಲ
-ಜ್ಯೋತಿ ಕಲ್ಕೆರೆ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.