ಬಿಬಿಎಂಪಿ ಶಾಲೆಗಳಿಗೆ ಶಿಕ್ಷಕರ ನೇಮಕ ಕುರಿತಂತೆ ಪ್ರಾಥಮಿಕ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಹಾಗೂ ಅಧಿಕಾರಿಗಳೊಂದಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶುಕ್ರವಾರ ಸಮಾಲೋಚನೆ ನಡೆಸಿದರು
ಬೆಂಗಳೂರು: ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆಗೆ ನೀಡಲಾಗುತ್ತಿದ್ದು, ಇಲಾಖೆಯಿಂದಲೇ ಶಿಕ್ಷಕರನ್ನು ಪೂರೈಸಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬಿಬಿಎಂಪಿ ಶಾಲೆಗಳನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಹಸ್ತಾಂತರ ಹಾಗೂ ಹೊಸದಾಗಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುವ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
‘ಬಿಬಿಎಂಪಿ ಶಾಲೆಗಳಲ್ಲಿ ಪ್ರತಿ ವರ್ಷ ಫಲಿತಾಂಶದಲ್ಲಿ ಕುಸಿತ ಕಾಣಲಾಗುತ್ತಿದೆ. ಇದಕ್ಕೆ ಅವಕಾಶ ನೀಡದಂತೆ, ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಇಲಾಖೆಗೆ ವಹಿಸಲಾಗಿದೆ’ ಎಂದು ಹೇಳಿದರು.
ಶಾಲೆಗಳ ಉನ್ನತೀಕರಣ, ಜಾಗ, ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲಾ ಮೂಲಸೌಕರ್ಯವನ್ನು ಪಾಲಿಕೆಯಿಂದಲೇ ನಿರ್ವಹಿಸಲಾಗುವುದು ಎಂದರು.
500 ಕೆಪಿಎಸ್ ಶಾಲೆ ನಿರ್ಮಾಣ: ‘ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯ ಮೂಲಕ ಪಂಚಾಯಿತಿ ಮಟ್ಟದಲ್ಲಿ 2 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ ಮಾಡಲಾಗುತ್ತದೆ. ಮೊದಲ ವರ್ಷ 500 ಶಾಲೆಗಳ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಮುಂದಿನ ತಿಂಗಳು ಮೊದಲ ಅಥವಾ ಎರಡನೇ ವಾರದಲ್ಲಿ ಶಾಲೆಗಳ ನಿರ್ಮಾಣ ಆರಂಭವಾಗಲಿದೆ’ ಎಂದರು.
ಕಂಪನಿ ಅಥವಾ ಸಂಸ್ಥೆಗಳು ಸರ್ಕಾರಕ್ಕೆ ಸಿಎಸ್ಆರ್ ಹಣ ನೀಡುವ ಅಗತ್ಯವಿಲ್ಲ. ಶಾಲೆ ನಿರ್ಮಾಣಕ್ಕೆ ಅಗತ್ಯ ಜಾಗವನ್ನು ಸರ್ಕಾರ ನೀಡಲಿದ್ದು, ಅಲ್ಲಿ ಈ ಕಂಪನಿ/ಸಂಸ್ಥೆಗಳು ಶಾಲೆ ನಿರ್ಮಿಸಲಿವೆ. ಶಾಲೆ ಜೊತೆಗೆ, ಗ್ರಂಥಾಲಯ, ತರಗತಿ ಕೊಠಡಿ, ಪ್ರಯೋಗಾಲಯ, ಶೌಚಾಲಯ ಸೇರಿದಂತೆ ಎಲ್ಲ ಸೌಕರ್ಯವನ್ನೂ ನೀಡಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.