ADVERTISEMENT

ಕಾರು ಗುದ್ದಿಸಿ ಟೆಕಿ ಕೊಲೆ; ಸಿಗರೇಟ್‌ ತಂದುಕೊಡಲು ನಿರಾಕರಿಸಿದ್ದಕ್ಕೆ ಕೃತ್ಯ

​ಪ್ರಜಾವಾಣಿ ವಾರ್ತೆ
Published 18 ಮೇ 2025, 0:25 IST
Last Updated 18 ಮೇ 2025, 0:25 IST
ಆರೋಪಿ ಪ್ರತೀಕ್‌ 
ಆರೋಪಿ ಪ್ರತೀಕ್‌    

ಬೆಂಗಳೂರು: ಸಿಗರೇಟ್‌ ತಂದುಕೊಡಲು ನಿರಾಕರಿಸಿದ್ದಕ್ಕೆ ಸಾಫ್ಟ್‌ವೇರ್‌ ಎಂಜಿನಿಯರ್‌ಗೆ ಕಾರಿನಿಂದ ಗುದ್ದಿಸಿ ಕೊಲೆ ಮಾಡಿದ್ದ ಆರೋಪಿಯನ್ನು ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಸಾಫ್ಟ್‌ವೇರ್ ಎಂಜಿನಿಯರ್‌ ಸಂಜಯ್ ಅವರ ಕೊಲೆಗೆ ಸಂಬಂಧಿಸಿ ಮಾಗಡಿ ರಸ್ತೆಯ ಮೈದಾ ಮಿಲ್ಸ್‌ನ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ, ಆರ್‌ಆರ್‌ ನಗರದ ನಿವಾಸಿ ಪ್ರತೀಕ್‌ ಎಂಬಾತನನ್ನು ಬಂಧಿಸಲಾಗಿದೆ. ಕಾರು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಾರಿನಲ್ಲಿ ಆರೋಪಿಯ ಪತ್ನಿಯೂ ಇದ್ದು, ಅವರ ಪಾತ್ರದ ಕುರಿತೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಸಂಜಯ್ ಹಾಗೂ ಚೇತನ್‌ ಅವರು ಸಾಫ್ಟ್‌ವೇರ್‌ ಉದ್ಯೋಗಿಗಳು. ರಾತ್ರಿ ಪಾಳಿಯಲ್ಲಿ ವರ್ಕ್ ಫ್ರಮ್ ಹೋಮ್ ಕೆಲಸ (ಮನೆಯಿಂದಲೇ ಕೆಲಸ) ಮಾಡುತ್ತಿದ್ದರು. ಮೇ 10ರಂದು ತಡರಾತ್ರಿವರೆಗೂ ಕೆಲಸ ಮಾಡಿ ಊಟ ಮಾಡಲು ಹೊರಗೆ ತೆರಳಿದ್ದರು. ಬೆಳಗ್ಗಿನ ಜಾವ 3.50ರ ಸುಮಾರಿಗೆ ಕೋಣನಕುಂಟೆ ಕ್ರಾಸ್‌ಗೆ ಬಂದಿದ್ದ ಇಬ್ಬರು ಸ್ನೇಹಿತರು ಅಲ್ಲಿ ತಳ್ಳು ಗಾಡಿಯಲ್ಲಿ ಟೀ ಕುಡಿಯಲು ಬೈಕ್‌ ನಿಲುಗಡೆ ಮಾಡಿದ್ದರು. ಆ ಸ್ಥಳಕ್ಕೆ ಪತ್ನಿಯೊಂದಿಗೆ ಬಂದಿದ್ದ ಆರೋಪಿ, ಕಾರಿನಿಂದ ಇಳಿಯದೇ ಸಿಗರೇಟ್‌ ತಂದುಕೊಡಲು ಸಂಜಯ್‌ ಅವರಿಗೆ ಹೇಳಿದ್ದ. ಕೋಪಗೊಂಡ ಸಂಜಯ್ ಮತ್ತು ಚೇತನ್‌, ಆರೋಪಿ ಪ್ರತೀಕ್‌ನೊಂದಿಗೆ ವಾಗ್ವಾದ ಮಾಡಿದ್ದರು. ಗಲಾಟೆ ಜೋರಾದಾಗ ಕಾರಿನಲ್ಲಿದ್ದ ಪ್ರತೀಕ್ ಪತ್ನಿ ಹಾಗೂ ಅಂಗಡಿಯವರು ಜಗಳ ಬಿಡಿಸಿ ಕಳುಹಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಬಳಿಕ ಸಂಜಯ್, ಚೇತನ್‌ ಬೈಕ್‌ನಲ್ಲಿ ಮುಂದೆ ಹೋಗುತ್ತಿದ್ದರು. ಪ್ರತೀಕ್ ​ ವೇಗವಾಗಿ ಅವರನ್ನು ಹಿಂಬಾಲಿಸಿ ಬೈಕ್‌ಗೆ ಹಿಂಬದಿಯಿಂದ ಗುದ್ದಿದ್ದರು. ಇದರಿಂದ ಇಬ್ಬರು ಗಾಯಗೊಂಡಿದ್ದರು. ಸಂಜಯ್‌ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚೇತನ್‌ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕನಕಪುರ ಮುಖ್ಯರಸ್ತೆಯ ವಸಂತಪುರ ಕಾರ್ನರ್‌ನಲ್ಲಿ ಘಟನೆ ನಡೆದಿತ್ತು. 

ಆರಂಭದಲ್ಲಿ ಇದು ಅಪಘಾತ ಪ್ರಕರಣ ಅಂದುಕೊಂಡಿದ್ದ ಪೊಲೀಸರಿಗೆ, ಘಟನಾ ಸ್ಥಳದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲನೆ ವೇಳೆ ಕಾರು ಗುದ್ದಿಸಿ ಕೊಲೆ ಮಾಡಿರುವುದು ಗೊತ್ತಾಗಿತ್ತು. ಆರೋಪಿ ಜನ್ಮದಿನಾಚರಣೆಯ ಪಾರ್ಟಿಯಲ್ಲಿ ಪಾಲ್ಗೊಂಡು ಮನೆಗೆ ತೆರಳುತ್ತಿದ್ದ. ಆಗ ಕೃತ್ಯ ಎಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ. 

ಕೊಲೆ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿ ಕೋರ್ಟ್‌ ಹಾಜರು ಪಡಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್‌ ಬಿ. ಜಗಲಾಸರ್ ತಿಳಿಸಿದರು.

ಟೆಕಿ ಸಂಜಯ್‌ 
ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆಸಿರುವ ದೃಶ್ಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.